ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ: ಕೇಂದ್ರದಿಂದ ಮಹತ್ವದ ಹೆಜ್ಜೆ, ಅಶೋಕ್ ಹೇಳಿದ್ದೇನು?
ರಾಜ್ಯದಲ್ಲಿರುವ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಆರೋಪ ಹೊಸದೇನಲ್ಲ. ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ವಿಚಾರ ದೊಡ್ಡ ಸುದ್ದಿಯಾಗಿತ್ತು. ಇನ್ನು ಇತ್ತೀಚೆಗೆ ನಟೋರಿಯಸ್ ಕೈದಿಗಳು ಹಾಗೂ ಬಂಧಿತ ಉಗ್ರರ ಬಳಿ ಜೈಲಿನಲ್ಲಿ ಮೊಬೈಲ್ ಬಳಸುತ್ತಿರುವ ವಿಡಿಯೋ ಕೂಡ ದೇಶದೆಲ್ಲೆಡೆ ಸದ್ದು ಮಾಡಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕರ್ನಾಟಕದ ಜೈಲುಗಳು ಉಗ್ರರ ಸ್ಲೀಪರ್ ಸೆಲ್‌ಗಳಾಗಿ ಮಾರ್ಪಟ್ಟಿದೆ ಎಂದು ಶಂಕಿಸಿದ್ದಾರೆ. ಅಲ್ಲದೆ ಈ ಸಂಬಂಧ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ ಎಂದಿದ್ದಾರೆ.
ದೇಶದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ. ಕರ್ನಾಟಕದ ಜೈಲುಗಳು ಉಗ್ರರ ಸ್ಲೀಪರ್ ಸೆಲ್‌ಗಳಾಗಿ ಮಾರ್ಪಟ್ಟಿರುವ ಶಂಕೆ ಇದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಎನ್‌ಐಎ ತನಿಖೆ ನಡೆಸಬೇಕು ಎಂದು ನವಂಬರ್ 10ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಮುಖೇನ ವಿನಂತಿಸಿದ್ದೆ. ಈ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರ ಕರ್ನಾಟಕದ ಜೈಲುಗಳಲ್ಲಿ ಉಗ್ರರ ನಂಟು ಹೊಂದಿರುವ ಕೈದಿಗಳ ವಿಚಾರಣೆಗೆ ಮುಂದಾಗಿದೆ ಎಂದಿದ್ದಾರೆ.

ಜೈಲಿನಲ್ಲಿರುವ ಕೈದಿಗಳಿಗೆ ಮೊಬೈಲ್ ಸೇರಿದಂತೆ ರಾಜಾತಿಥ್ಯ ಸಿಗುತ್ತಿರುವುದಕ್ಕೆ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣವೇ ನೇರ ಕಾರಣ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಸುರಕ್ಷತೆ, ಭದ್ರತೆ ಬಗ್ಗೆ ರಾಜಿ ಮಾಡಿಕೊಳ್ಳುವಷ್ಟು ಕೆಳಮಟ್ಟಕ್ಕೆ ಇಳಿಯುವ ಕಾಂಗ್ರೆಸ್ ಪಕ್ಷದ ದೇಶದ್ರೋಹಿ ಮನಸ್ಥಿತಿ ನಿಜಕ್ಕೂ ಅಸಹ್ಯಕರ ಮತ್ತು ಅಕ್ಷಮ್ಯ. ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆ ಈ ದೇಶದ್ರೋಹಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಶೋಕ್ ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಹಾಗೂ ಓಲೈಕೆ ರಾಜಕಾರಣದ ಪರಿಣಾಮವಾಗಿ ಕರ್ನಾಟಕದ ಜೈಲುಗಳು ಉಗ್ರರ ಸ್ಲೀಪರ್ ಸೆಲ್‌ಗಳಾಗಿ ಮಾರ್ಪಟ್ಟಿದ್ದು, ರಾಷ್ಟ್ರೀಯ ಸುರಕ್ಷತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಕೊಡಲೇ ಮಧ್ಯಪ್ರವೇಶಿಸಬೇಕು ಎಂದು ಅಶೋಕ್ ಮನವಿ ಮಾಡಿದ್ದರು. ಅಲ್ಲದೆ ಕರ್ನಾಟಕದ ಜೈಲುಗಳಲ್ಲಿ ನಿಯಮಬಾಹಿರವಾಗಿ ಕೈದಿಗಳಿಗೆ ಸಿಗುತ್ತಿರುವ ಸವಲತ್ತುಗಳು, ಅಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಸೂಕ್ಷ್ಮ ಕಾರಾಗೃಹಗಳ ಮೇಲೆ ಕೇಂದ್ರ ಸರ್ಕಾರ ನಿಗಾ ಇಡಬೇಕು ಎಂದು ಅಮಿತ್ ಶಾ ಅವರಿಗೆ ಪತ್ರ ಕೂಡ ಬರೆದಿದ್ದರು. ಈ ವಿಷಯ ಅತ್ಯಂತ ಗಂಭೀರವಾದುದ್ದರಿಂದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹಾಗೂ ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದೇನೆ ಎಂದು ಹೇಳಿದ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಜಗಜ್ಜಾಹೀರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೇ ಜೈಲು ಸೇರಿದ್ದ ನಟ ದರ್ಶನ್ ತೂಗುದೀಪ ಅವರಿಗೂ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎನ್ನುವ ಫೋಟೋ ವೈರಲ್ ಆಗಿ, ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡುಮಾಡಿತ್ತು. ಇತ್ತೀಚೆಗೆ ನಟೋರಿಯಸ್ ಕೈದಿಗಳು ರಾಜಾರೋಷವಾಗಿ ಮೊಬೈಲ್ ಬಳಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡಿತ್ತು.












Click it and Unblock the Notifications