ರುದ್ರಪ್ಪ ಲಮಾಣಿ: ಅಭಿವೃದ್ಧಿ ಶೂನ್ಯವೆಂದ ಸ್ವಕ್ಷೇತ್ರದ ಜನತೆ! ಶಾಸಕರಿಗೆ ಹೋದಲ್ಲಿ ಬಂದಲ್ಲಿ ಘೇರಾವ್..Rudrappa Lamani
ಹಾವೇರಿ, ನವೆಂಬರ್ 08: ಕಾಂಗ್ರೆಸ್ ಬೆಂಬಲಿಗರು ಮತ್ತು ಬಿಜೆಪಿ ಬೆಂಬಲಿಗರು ಎನ್ನದೇ ಪಕ್ಷಾತೀತವಾಗಿ ಸ್ವಕ್ಷೇತ್ರದ ಗ್ರಾಮಸ್ಥರಿಂದ ಹಾವೇರಿ (ಎಸ್) ಕ್ಷೇತ್ರದ ಶಾಸಕ ಹಾಗೂ ವಿಧಾನಸಭಾ ಉಪ ಸಭಾಪತಿಯಾಗಿರುವ ರುದ್ರಪ್ಪ ಮಾನಪ್ಪ ಲಮಾಣಿ ಅವರು ಘೇರಾವು ಎದುರಿಸಬೇಕಾಯಿತು. ಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿರುವ ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರ ಕಾರು ತಡೆದು ನಿಲ್ಲಿಸಿ ಪ್ರಶ್ನಿಸಿದ್ದಾರೆ. ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಹೌದು, 2023ರಿಂದ ರಾಜ್ಯದ ವಿಧಾನಸಭೆಯ 25ನೇ ಉಪಸಭಾಪತಿಯಾಗಿ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಕ್ಷೇತ್ರದಲ್ಲಿ ಇರುವುಕ್ಕಿಂತ ಬೆಂಗಳೂರಿನಲ್ಲಿರುವುದೇ ಹೆಚ್ಚು ಎಂಬ ಆರೋಪ ಸಹ ಅವರ ಮೇಲಿದೆ. ಎಲ್ಲಿದ್ದರೂ ಕ್ಷೇತ್ರ, ಕ್ಷೇತ್ರದ ಜನರನ್ನು, ಇಲ್ಲಿನ ಮತದಾರರ ಕುಂದು ಕೊರತೆ ಆಲಿಸಬೇಕು. ಸಮಸ್ಯೆ ಪರಿಹರಿಸುವುದು ಮಾತ್ರವಲ್ಲದೇ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎಂಬುದು ಜನರ ಆಶಯವಾಗಿದೆ.

ಒಂದು ವಾರದ ಹಿಂದಷ್ಟೇ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕರ ಕಾರು ನೋಡುತ್ತಿದ್ದಂತೆ ಗ್ರಾಮಸ್ಥರು ಘೇರಾವ್ ಹಾಕಿದರು. ಅಲ್ಲದೇ ಇತ್ತೀಚೆಗೆ ಹೊಸರಿತ್ತಿಗೆ ಭೇಟಿ ನೀಡಿದಾಗಲೂ ಜನರಿಂದ ಪ್ರತಿಭಟನೆ, ಆಕ್ರೋಶವನ್ನು ಶಾಸಕರು ಎದುರಿಸಿದ್ದಾರೆ. ಕಾರಿನ ಮುಂದೆ ಬಂದು ನಿಂತ ಗ್ರಾಮಸ್ಥರು ಭರವಸೆ ನೀಡಿ ಮರೆಯಾಗಿದ್ದ ಶಾಸಕರಿಗೆ ಎಲ್ಲಿದೇ ಅಭಿವೃದ್ಧಿ ಎಂದು ಕೇಳಿದ್ದಾರೆ.
ಕಳಪೆ ರಸ್ತೆ ಸಂಚಾರದಿಂದ ರೋಸಿಹೋಗಿದ್ದ ಕನವಳ್ಳಿ ಗ್ರಾಮದ ಜನರು, ಈ ಭಾಗದ ಅಭಿವೃದ್ಧಿ ಶೂನ್ಯವಾಗಿದೆ. ಗಟಾರು ಮಾಡಿಸಿಲ್ಲ. ರಸ್ತೆ ಅಭಿವೃದ್ಧಿ ಕಂಡು ವರ್ಷಗಳೇ ಆಗಿವೆ. ಅನುದಾನ ತರದೇ ಅಭಿವೃಧ್ಧಿ ಕೇವಲ ನಿಮ್ಮ ಮಾತಿಗಷ್ಟೇ ಸೀಮಿತವಾಗಿದೆ. ನಿರುದ್ಯೋಗ ಸಮಸ್ಯೆ ಉಂಟಾಗಿದೆ. ನಮ್ಮ ಕ್ಷೇತ್ರದ ಶಾಸಕರಾಗಿ ನೀವು ಕೇವಲ ಭರವಸೆ ನೀಡಿದ್ದೀರಿ ವಿನಃ ಯಾವುದೇ ಕಾರ್ಯಗಳು ಕ್ಷೇತ್ರದಲ್ಲಿ ಆಗಿಲ್ಲ ಎಂದು ಒಕ್ಕೋರಲಿನಿಂದ ಗ್ರಾಮಸ್ಥರು ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ. ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು.
ಕಾರಿನಿಂದ ಕೆಳಗೆ ಇಳಿದು ಮಾತನಾಡಿ ಎಂದು ವಿನಂತಿಸಿದರೂ ಸಹ ಕೇಳದ ಶಾಸಕರು ಕಾರಲ್ಲಿ ಕೂತ ಅಲ್ಲಿಂದ ಪಲಾಯನ ಮಾಡಿದ್ದಾರೆ. ಇದೇ ರೀತಿ ಹೊಸರಿತ್ತಿಗೆ ಭೇಟಿ ನೀಡಿದ್ದ ವೇಳೆಯು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಒಟ್ಟಾಗಿ ರುದ್ರಪ್ಪ ಲಮಾಣಿ ಅವರಿಗೆ ಪ್ರಶ್ನೆಗಳ ಮಳೆಗರೆದಿದ್ದಾರೆ. ಭರವಸೆ ಕೊಟ್ಟಿದ್ದು ಸಾಕು ಅಭಿವೃದ್ಧಿ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ. ಗ್ರಾಮದಲ್ಲಿ ಶಾದಿ ಹಾಲ್ ನಿರ್ಮಾಣವೊಂದಕ್ಕೆ ನೀಡಿದ್ದ ಅನುದಾನ ಬಗ್ಗೆ ಗ್ರಾಮಸ್ಥರಲ್ಲಿ ಅನುಮಾನ ಉಂಟಾಗಿದೆ. ಉದ್ದೇಶಿತ ಕೋಟಿ ರೂಪಾಯಿ ಅನುದಾನ ಇದಕ್ಕೆ ಖರ್ಚಾಗಿಲ್ಲ ಆರೋಪಿಸಿ ಶಾಸಕರನ್ನು ಪ್ರಶ್ನಿಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡದ ಶಾಸಕ ಲಮಾಣಿಯವರ ನಿರ್ಲಕ್ಷ್ಯ ನಡೆಯನ್ನು ಪಕ್ಷಾತೀತವಾಗಿ ಖಂಡಿಸಿದ್ದಾರೆ.
ಈ ಮೂಲಕ ಶಾಸಕ ರುದ್ರಪ್ಪ ಲಮಾಣಿ ಅವರು ಸ್ವಕ್ಷೇತ್ರದಲ್ಲಿ ಹೋದಲ್ಲಿ ಬಂದಲ್ಲಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಕೆರಳಿದ ಗ್ರಾಮಸ್ಥರಿಗೆ ಸಬೂಬು ಹೇಳಿದ್ದಾರೆ. ಬೇಡಿಕೆ ಈಡೇರಿಸುವ ಭರವಸೆ ನೀಡಿ ಕಾಲ್ಕಿತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಸರ್ಕಾರಿ ಕಾರಿನಲ್ಲಿ ಲಮಾಣಿ ಪುತ್ರನ ದರ್ಬಾರ್
ತಿಂಗಳುಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಶಾಸಕ ರುದ್ರಪ್ಪ ಲಮಾಣಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರ ಪುತ್ರ ದರ್ಶನ್ ಅವರು ಶಾಸಕರ ಸರ್ಕಾರಿ ಕಾರಿನಲ್ಲಿ (ಕಾರಿನ ಸಂಖ್ಯೆ KA 05 G 6000) ಓಡಾಡಿ ದರ್ಬಾರ್ ಮೆರೆದಿದ್ದು ಸುದ್ದಿಯಾಗಿತ್ತು. ಪಕ್ಷದ ಬೆಂಬಲಿಗರ ಜೊತೆಗೆ ಬೆಂಗಳೂರಿನಿಂದ ಹಾವೇರಿವರೆಗೆ ಸರ್ಕಾರಿ ಕಾರಿನಲ್ಲಿ ಬಂದಿದ್ದರು. ಹಾವೇರಿಗೆ ಬಂದ ಬಳಿಕ ನಗರದಲ್ಲಿ ಅದೇ ಕಾರಿನಲ್ಲಿ ಓಡಾಡಿದ್ದಾರೆ ಎನ್ನಲಾಗಿದೆ. ಸರ್ಕಾರದ ಪ್ರತಿನಿಧಿಗಳಿಗೆ ನೀಡುವ ವಾಹನಗಳನ್ನು ಇತರರ ಬಳಸುವಂತಿಲ್ಲ. ಸರ್ಕಾರಿ ಹುದ್ದೆಯಲ್ಲಿ ನಿಯೋಜನೆಗೊಂಡವರಿಗೆ ನೀಡಿದ್ದ ಕಾರನ್ನು ಕ್ಯಾಬ್ ರೀತಿಯಲ್ಲಿ ಬಳಕೆ ಮಾಡಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಿತ್ತು, ಆಕ್ರೋಶ ವ್ಯಕ್ತವಾಗಿತ್ತು.












Click it and Unblock the Notifications