ಪಶು ಆಸ್ಪತ್ರೆಗಳ ಸ್ಥಳಾಂತರ: ಸರ್ಕಾರಕ್ಕೆ ನೋಟಿಸ್ ಜಾರಿ
ಬೆಂಗಳೂರು, ಜನವರಿ 11: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಐದು ತಾಲೂಕುಗಳಲ್ಲಿನ 28 ಪಶುವೈದ್ಯ ಕೇಂದ್ರಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವ ವಿಚಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಆರ್. ವಿಶ್ವನಾಥ್ ಹಾಗೂ ಅನಿಮಲ್ ರೈಟ್‌ಸ್ ಫಂಡ್ (ಎಎಫ್‌ಡಿ) ಸಂಸ್ಥೆ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ಮುಂದೂಡಿಕೆ; ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಕೃಷಿ ಸಚಿವಾಲಯದ ಪಶುಸಂಗೋಪನೆ ಮತ್ತು ಹೈನುಗಾರಿಕೆ ವಿಭಾಗದ ಕಾರ್ಯದರ್ಶಿ, ರಾಜ್ಯ ಸರ್ಕಾರದ ಪಶುಸಂಗೋಪನಾ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆ ಆಯುಕ್ತರು ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿತು.
ಅನಿಮಲ್ ರೈಟ್ ಫಂಡ್ ಸಂಸ್ಥೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪ್ರತಿ 5 ಸಾವಿರ ಜಾನುವಾರುಗಳಿಗೆ ಒಂದು ಪಶುವೈದ್ಯ ಕೇಂದ್ರ ಇರಬೇಕು ಎಂಬ ರಾಷ್ಟ್ರೀಯ ಕೃಷಿ ಆಯೋಗದ ಮಾರ್ಗಸೂಚಿ ಆಧರಿಸಿ, ಸಾವಿರಕ್ಕಿಂತ ಕಡಿಮೆ ಜಾನುವಾರುಗಳು ಇರುವ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಆನೇಕಲ್, ಬೆಂಗಳೂರು ಈಶಾನ್ಯ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ತಾಲೂಕುಗಳಲ್ಲಿ 13 ಲಕ್ಷಕ್ಕೂ ಅಧಿಕ ಜಾನುವಾರು ಮತ್ತು ಸಾಕು ಪ್ರಾಣಿಗಳಿವೆ.
ಈ ನಾಲ್ಕು ತಾಲೂಕುಗಳಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 28 ಪಶುವೈದ್ಯ ಕೇಂದ್ರಗಳನ್ನು ಬೇರೆ ಕಡೆ ಸ್ಥಳಾಂತರಿಸಲು ಪಶುಸಂಗೋಪನಾ ಇಲಾಖೆ ಮುಂದಾಗಿದೆ ಎಂದರು. ಇದರಿಂದ ಈ ತಾಲೂಕುಗಳಲ್ಲಿರುವ ಜಾನುವಾರುಗಳಿಗೆ ತೊಂದರೆ ಆಗಲಿದ್ದು, ಪಶುಸಂಗೋಪನೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ನೂರಾರು ಕುಟುಂಗಳಿಗೆ ಕಷ್ಟವಾಗಲಿದೆ ಎಂದು ವಿವರಿಸಿದರು.
ಶಾಸಕರ ಪರವಾಗಿ ವಾದ ಮಂಡಿಸಿ, ಯಲಹಂಕ ತಾಲೂಕಿನ ಗಂಟಿಗಾನಹಳ್ಳಿ, ಲಿಂಗನಹಳ್ಳಿ, ಹನಲೂರು ಗ್ರಾಮಗಳಲ್ಲಿನ ಪಶುವೈದ್ಯ ಕೇಂದ್ರಗಳನ್ನು ಸ್ಥಳಾಂತರಿಸಲು ಸರ್ಕಾರ ಮುಂದಾಗಿದೆ. ಈ ಪಶುವೈದ್ಯ ಕೇಂದ್ರಗಳಲ್ಲಿ ಐದು ಸಾವಿರಕ್ಕೂ ಅಧಿಕ ಜಾನುವಾರುಗಳು ಪಶುವೈದ್ಯ ಸೇವೆ ಪಡೆದುಕೊಳ್ಳುತ್ತಿವೆ ಎಂದರು.
ಸೂಕ್ತ ಮಾಹಿತಿ ಇಲ್ಲದೆ ಪಶುಸಂಗೋಪನಾ ಇಲಾಖೆ ಸ್ಥಳಂತಾರಕ್ಕೆ ನಿರ್ಧರಿಸಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತಿದ್ದರೂ, ಅವುಗಳು ಗ್ರಾಮ ಪಂಚಾಯಿತಿಗಳಲ್ಲಿವೆ. ಗ್ರಾಮ ಪಂಚಾಯಿತಿಗಳಲ್ಲಿ ವಾಸ ಮಾಡುತ್ತಿರುವವರು ಬಡವರಾಗಿದ್ದು, ಪಶುಸಂಗೋಪನೆ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ ಎಂದರು.
ಆದ್ದರಿಂದ ಪಶುವೈದ್ಯ ಕೇಂದ್ರಗಳನ್ನು ಸ್ಥಳಾಂತರಿಸಲು ಸರ್ಕಾರ 2023ರ ಡಿಸೆಂಬರ್ 15ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.












Click it and Unblock the Notifications