'ಸಿದ್ಧರಾಮಯ್ಯ ಜೈಲಿಗೆ ಹೋದ್ರೆ ನಾನು ಸೇರಿ 1 ಕೋಟಿ ಜನರು ಹೋಗ್ತೀವಿ'
ಮೈಸೂರು, ಫೆಬ್ರವರಿ 03: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಬಾರದು. ಅವರು ಜೈಲಿಗೆ ಹೋದರೂ ಅಲ್ಲಿಂದಲೇ ಕೆಲಸ ಮಾಡಬೇಕು. ಸಿದ್ದರಾಮಯ್ಯ ನಮ್ಮ ರಾಜ್ಯದಲ್ಲಿ ಇರೋದರಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈಲಿಗೆ ಹೋಗಿದ್ದೇ ಆದಲ್ಲಿ ನಾನು ಸೇರಿದಂತೆ 1 ಕೋಟಿ ಜನರು ಜೈಲಿಗೆ ಹೋಗ್ತೀವಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ಈ ಕುರಿತು ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆಯನ್ನು ಯಾವುದೇ ಸಂದರ್ಭದಲ್ಲೂ ನೀಡಬಾರದು. ಏನಾದರೂ ಜೈಲಿಗೆ ಹೋದ್ರೆ ನಾನು ಸೇರಿದಂತೆ 1 ಕೋಟಿ ಜನರು ಜೈಲಿಗೆ ಹೋಗಲು ಸಿದ್ಧರಾಗಿದ್ದೇವೆ. ರಾಜ್ಯದಲ್ಲಿ ಇರೋದರಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ. ಇವರೇ ಕೊನೆಯ ಕೊಂಡಿ, ಈ ಕೊಂಡಿ ಕಳಚಿದರೆ ರಾಜ್ಯ ದಿಕ್ಕೆಟ್ಟು ಹೋಗುತ್ತದೆ ಎಂದು ವಾಟಾಳ್ ನಾಗರಾಜ್ ಅವರು ಬೇಸರ ವ್ಯಕ್ತಪಡಿಸಿದರು.

ಸಿಎಂ ಸಿದ್ಧರಾಮಯ್ಯ ಜೈರಿಗೆ ಹೋದರೂ ಅಲ್ಲಿಂದಲೇ ಅಧಿಕಾರ ಮಾಡಲಿ. ಸಿಎಂ ಸಿದ್ಧರಾಮಯ್ಯ ಅವರು ನೂರಾರು ನಾಗರಹಾವುಗಳ ಮಧ್ಯೆ ಇದ್ದಾರೆ. ಹಿತಶತ್ರುಗಳ ಕಾಟ ಇದೆ. ವಿಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷದವರೇ ಹಿತಶತ್ರುಗಳಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ತೆಗೆಯಲು ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವರು ಪಿತೂರಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅರೆಸ್ಟ್ ಆದರೂ, ರಾಜೀನಾಮೆ ಕೊಡಬೇಡಿ. ಜೈಲಿನಲ್ಲೇ ಇದ್ದು ಆಡಳಿತ ಮಾಡಿ. ಕಾಂಗ್ರೆಸ್ ಪಕ್ಷದವರು ಬಾಯಿ ಮುಚ್ಚಿಕೊಂಡು ಇರಬೇಕು. ವಿರೋಧ ಪಕ್ಷದವರು ಅವರ ಮನೆ ಮೊದಲು ನೋಡಿಕೊಳ್ಳಲಿ. ಸಿಎಂ ಸ್ಥಾನಕ್ಕೆ ಡೆಡ್ ಲೈನ್ ಇಲ್ಲ. ಅದೊಂದು ಜೋಕ್ ಆಗಿದೆ. ಐದು ವರ್ಷ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ಇನ್ನೂ ಕೇಂದ್ರ ಬಜೆಟ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಕ್ಕೆ ಕೇಂದ್ರ ಸರಕಾರ ಅನ್ಯಾಯ ಮಾಡಿದೆ. ನಮ್ಮ ಸಂಸದರಿಗೆ ಮರ್ಯಾದೆ ಇಲ್ಲ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಊರಲ್ಲಿರುವುದೆಲ್ಲ ಮಾತಾಡ್ತಾರೆ. ಇದರ ಬಗ್ಗೆ ಏಕೆ ಮಾತನಾಡಿಲ್ಲ? ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಬಹಳ ಮಡಿವಂತ. ಆದರೆ ಬಜೆಟ್ ಬಗ್ಗೆ ಮಾತನಾಡಿಲ್ಲ, ಯಾಕೆ? ಶೋಭ ಕರಂದ್ಲಾಜೆ ತುಟಿ ಬಿಚ್ಚಿಲ್ಲ ಯಾಕೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಇನ್ನೂ ಮೈಕ್ರೊ ಫೈನಾನ್ಸ್ ಕಂಪನಿಯವರು ಸಾಲಗಾರರಿಗೆ ನೀಡುತ್ತಿರುವ ಹಿಂಸೆ ಹಾಗೂ ದೌರ್ಜನ್ಯ ನಿಲ್ಲಬೇಕು. ನೆರೆ ರಾಜ್ಯಗಳ ಕಪ್ಪು ಹಣ ತಂದು ರಾಜ್ಯದ ಜನರಿಗೆ ಹಿಂಸೆ ಕೊಡುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ತಲೆ ಎತ್ತಿರುವ ಅಕ್ರಮ ಫೈನಾನ್ಸ್ ಕಂಪನಿಗಳನ್ನು ರದ್ದು ಮಾಡಬೇಕು. ಫೈನಾನ್ಸ್ ಕಂಪನಿಗಳ ವಿರುದ್ಧ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಿ ತನಿಖೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications