ಪರಿಷತ್ ಚುನಾವಣಾ ಕಣಕ್ಕಿಳಿದ ವಾಟಾಳ್ ನಾಗರಾಜ್!
ಕಲಬುರಗಿ, ಮೇ 23 : ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಠೇವಣಿ ಕಳೆದುಕೊಂಡಿದ್ದರು.
ಈಶಾನ್ಯ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಗೆ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ. ಕಲಬುರಗಿಯ ಮಿನಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಅವರು ನಾಮಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, 'ಕರ್ನಾಟಕ ಏಕೀಕರಣದ ಉದ್ದೇಶ ಇನ್ನೂ ಈಡೇರಿಲ್ಲ. ಹೈದರಾಬಾದ್-ಕರ್ನಾಟಕ, ಉತ್ತರ ಕರ್ನಾಟಕದ ಪ್ರದೇಶಗಳು ಇನ್ನೂ ಹಿಂದುಳಿದಿವೆ' ಎಂದು ಆರೋಪಿಸಿದರು.

'ಈ ಭಾಗ ಅಭಿವೃದ್ಧಿಯಾಗಬೇಕು ಎಂದರೆ ವಿಧಾನಸಭೆ ಅಥವ ವಿಧಾನಪರಿಷತ್‌ನಲ್ಲಿ ಗಟ್ಟಿಯಾಗಿ ಹೋರಾಟ ಮಾಡಬೇಕಿದೆ. ಈ ಕಾರಣಕ್ಕಾಗಿ ಈಶಾನ್ಯ ಪದವೀಧರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದೇನೆ' ಎಂದು ಹೇಳಿದರು.
ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, 'ವಾಟಾಳ್ ನಾಗರಾಜ್ ಕನ್ನಡದ ಕೂಗು. ವಿಧಾನಸಭೆ, ವಿಧಾನಪರಿಷತ್‌ಗೆ ಇಂತಹವರು ಬೇಕು. ಆದ್ದರಿಂದ, ಮತದಾರರು ಅವರಿಗೆ ಆಶೀರ್ವಾದ ಮಾಡಬೇಕು' ಎಂದು ಮನವಿ ಮಾಡಿದರು.
ಶಿಕ್ಷಕ ಮತ್ತು ಪವೀಧರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 8ರಂದು ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿರುವ ವಾಟಾಳ್ ನಾಗರಾಜ್ ಅವರು ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸುವರೇ ಕಾದು ನೋಡಬೇಕು.












Click it and Unblock the Notifications