Bengaluru-Tirupati: ಬೆಂಗಳೂರು-ತಿರುಪತಿ ನಡುವೆ ವಂದೇ ಭಾರತ್ ರೈಲು ಸೇವೆ ಶುರುವಾಗೋದು ಯಾವಾಗ?
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಆಂಧ್ರಪ್ರದೇಶದ ತಿರುಪತಿಗೆ ತೆರಳುವ ಭಕ್ತರಿಗಾಗಿ ವಂದೇ ಭಾರತ್ ರೈಲು ಸೇವೆ ಒದಗಿಸಲು ಭಾರತೀಯ ರೈಲ್ವೆ ಮುಂದಾಗಿರುವುದು ಗೊತ್ತೇ ಇದೆ. ಇದರಿಂದ ಹಲವರು ತಿರುಪತಿಗೆ ನೆಮ್ಮದಿಯಾಗಿ ಕೆಲವೇ ಗಂಟೆಗಳಲ್ಲಿ ತಲುಪಬಹುದು. ವೆಂಕಟೇಶ್ವರನ ದರ್ಶನ ಪಡೆದು ಮತ್ತೆ ವಂದೇ ಭಾರತ್ ರೈಲಿನಲ್ಲೇ ಬೆಂಗಳೂರಿಗೆ ಬಂದಿಳಿಯಬಹುದು ಎಂದು ಕನಸು ಕಂಡಿದ್ದಾರೆ. ಈಗಾಗಲೇ ವಿಜಯವಾಡ-ಬೆಂಗಳೂರು ನಡುವೆ ಸಂಚರಿಸಲಿರುವ ಈ ವಂದೇ ಭಾರತ್ ರೈಲು ತಿರುಪತಿ ಮಾರ್ಗವಾಗಿ ಬಂದು ಅಲ್ಲಿ ನಿಲುಗಡೆ ನೀಡುವುದು ಕೂಡ ವೇಳಾಪಟ್ಟಿಯಲ್ಲಿ ಪಕ್ಕಾ ಆಗಿದೆ. ಇನ್ನು ರೈಲು ಸೇವೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದ್ದು, ಯಾವಾಗಿನಿಂದ ಸೇವೆ ಶುರುವಾಗುತ್ತದೆ ಎಂಬ ಬಗ್ಗೆ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ.
ರೈಲು ಆರಂಭವಾದಾಗ ವಿಶೇಷವಾಗಿ ತಿರುಪತಿಗೆ ಹೋಗುವವರಿಗೆ ಮತ್ತು ಕೆಲಸ, ವ್ಯವಹಾರಕ್ಕೆ ಅಂತರರಾಜ್ಯ ಪ್ರಯಾಣಿಕರಿಗೆ ಇದು ಬಹಳ ಉಪಯುಕ್ತವಾಗಲಿದೆ. ಇಂದಿನ ಪರಿಸ್ಥಿತಿಯಲ್ಲಿ ವಿಜಯವಾಡ-ಬೆಂಗಳೂರಿನ ನಡುವೆ ನೇರ ವಂದೇ ಭಾರತ್ ರೈಲಿಗೆ ಪರ್ಯಾಯ ವ್ಯವಸ್ಥೆ ಕೂಡ ಇಲ್ಲ. ಕೇವಲ ಕೊಂಡವೀಡು ಎಕ್ಸ್‌ಪ್ರೆಸ್ ಮಾತ್ರ ಮೂರು ದಿನ ಈ ಮಾರ್ಗದಲ್ಲಿ ಓಡಾಡುತ್ತಿದ್ದರೂ ಪ್ರಯಾಣದ ಅವಧಿ ಹೆಚ್ಚು. ಹೀಗಾಗಿ, ಈ ಹೊಸ ಸೇವೆಗೆ ದಿನವೂ ಮತ್ತು ವಾರದಲ್ಲಿ ಒಂದು ಬಾರಿ ಪ್ರಯಾಣ ಮಾಡುವವರಿಗೆ ವಂದೇ ಭಾರತ್ ಉತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ.

ವಿಜಯವಾಡದಿಂದ ಬೆಂಗಳೂರು ನಡುವಿನ ಈ ವಂದೇ ಭಾರತ್ ರೈಲು ಸೇವೆ ಮತ್ತಷ್ಟ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪರಿಶೀಲನೆ, ವೇಳಾಪಟ್ಟಿಗೆ ಅಂತಿಮ ಅನುಮೋದನೆ, ಮತ್ತು ಕಾರ್ಯಾಚರಣಾ ಸೌಕರ್ಯಗಳನ್ನು ತಯಾರಿಸುವ ಕೆಲಸಗಳು ನಿಧಾನಗತಿಯಲ್ಲಿರುವುದರಿಂದ ವಿಳಂಬಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ರೈಲ್ವೆ ಇಲಾಖೆ ನಗರಗಳ ನಡುವಿನ ಸಮಯ, ನಿಲ್ದಾಣಗಳು ಮತ್ತು ಉಳಿದ ಮೂಲಸೌಕರ್ಯಗಳು ಸಿದ್ಧವಾಗಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಇದರಲ್ಲಿ ಹೊಸ ವಂದೇ ಭಾರತ್ ರೈಲು ಮಾರ್ಗಕ್ಕಾಗಿ ಅಗತ್ಯವಾದ ರೈಲುಗಳ ಹಂಚಿಕೆ ಮತ್ತು ನಿಯಂತ್ರಣಾಧಿಕಾರಿಗಳ ಕೊನೆಯ ಅನುಮೋದನೆಯನ್ನು ಪಡೆಯಬೇಕಾಗಿದೆ ಎಂದು ತಿಳಿದುಬಂದಿದೆ.
ವಿಳಂಬಕ್ಕೆ ಕಾರಣವೇನು?
ಈಗಾಗಲೇ ಹೊಸ ರೈಲು ಅಂತಿಮಗೊಳಿಸಿ, ಸಂಖ್ಯೆಗಳ ಹಂಚಿಕೆ, ವೇಳಾಪಟ್ಟಿಯನ್ನು ಘೋಷಿಸಿದ ನಂತರವೂ ವಿಜಯವಾಡದಿಂದ ತಿರುಪತಿ ಮೂಲಕ ಬೆಂಗಳೂರಿಗೆ ಹೋಗುವ ವಂದೇ ಭಾರತ್ ರೈಲು ಇನ್ನೂ ಪ್ರಾರಂಭವಾಗಿಲ್ಲ. ಕೇವಲ ಒಂಬತ್ತು ಗಂಟೆಗಳಲ್ಲಿ ವಿಜಯವಾಡದಿಂದ ಬೆಂಗಳೂರಿಗೆ ಮತ್ತು ನಾಲ್ಕೂವರೆ ಗಂಟೆಗಳಲ್ಲಿ ತಿರುಪತಿಗೆ ತಲುಪುವಂತೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಈ ರೈಲಿಗಾಗಿ ಕಾಯುತ್ತಿದ್ದಾರೆ. ವಂದೇ ಭಾರತ್ ಪ್ರಸ್ತುತ ವಿಜಯವಾಡದಿಂದ ಚೆನ್ನೈಗೆ ಹೋಗುತ್ತಿದೆ. ಇದನ್ನು ಬೆಂಗಳೂರಿಗೆ ಹಂಚಿಕೆ ಮಾಡಬೇಕೆಂಬ ಕೋರಿಕೆಯ ಮೇರೆಗೆ ಮೇ ತಿಂಗಳಲ್ಲೇ ರೈಲ್ವೆ ಅಧಿಕಾರಿಗಳು ಗ್ರೀನ್‌ಸಿಗ್ನಲ್ ಕೊಟ್ಟಿದ್ದರು. ಆದರೆ ಅಂತಿಮವಾಗಿ ಯಾವಾಗಿನಿಂದ ರೈಲು ಸೇವೆ ಪ್ರಾರಂಭವಾಗುತ್ತದೆ? ಎಂಬ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಇಲ್ಲ.

ಒಂದು ವೇಳೆ ನಿಗದಿಯಾದಂತೆ ಈ ರೈಲು ಸೇವೆ ಶುರುವಾದರೆ ಬೆಂಗಳೂರಿಗೆ ಇತರ ರೈಲುಗಳಿಗೆ ಹೋಲಿಸಿದರೆ 3 ಗಂಟೆಗಳ ಪ್ರಯಾಣದ ಸಮಯವನ್ನು ಉಳಿಸುತ್ತದೆ. ಈ ವಂದೇ ಭಾರತ್ ರೈಲು ಬೆಂಗಳೂರಿಗೆ ಹೋಗುವವರಿಗೆ ಹಾಗೂ ತಿರುಪತಿಗೆ ಹೋಗುವ ಭಕ್ತರಿಗೆ ಉಪಯುಕ್ತವಾಗಲಿದೆ. ಒಟ್ಟು 8 ಬೋಗಿಗಳಲ್ಲಿ 7 ಎಸಿ ಚೇರ್‌ಕಾರ್‌ಗಳು ಮತ್ತು ಒಂದು ಕಾರ್ಯನಿರ್ವಾಹಕ ಚೇರ್‌ಕಾರ್ ಇರುತ್ತದೆ. ಈ ವಂದೇ ಭಾರತ್ ರೈಲು ಮಂಗಳವಾರ ಬಿಟ್ಟು ವಾರದಲ್ಲಿ 6 ದಿನಗಳು ಕೂಡ ಸಂಚರಿಸಲಿವೆ ತಿಳಿದುಬಂದಿದೆ. ಇದು ನಾಲ್ಕೂವರೆ ಗಂಟೆಗಳಲ್ಲಿ ತಿರುಪತಿಯನ್ನು ತಲುಪುತ್ತದೆ. ಶೀಘ್ರದಲ್ಲೇ ಈ ಕುರಿತು ಅಂತಿಮ ಸಿಹಿಸುದ್ದಿ ಹೊರಬೀಳುವ ಸಾಧ್ಯತೆ ಇದೆ.











Click it and Unblock the Notifications