ಶೀಘ್ರದಲ್ಲೇ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್: ಸಿಎಂ ಬೊಮ್ಮಾಯಿ
ಬೆಳಗಾವಿ, ಡಿಸೆಂಬರ್ 29: ಕರ್ನಾಟಕ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆಗಮನ ಖಚಿತವಾಗಿದ್ದು, ಬೆಂಗಳೂರು ಹುಬ್ಬಳ್ಳಿ ಮತ್ತು ಬೆಳಗಾವಿ ನಡುವೆ ಶೀಘ್ರದಲ್ಲೇ ಓಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾರತದ ಸೆಮಿ ಹೈಸ್ಪೀಡ್ ರೈಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ಈಗ ಮೈಸೂರು ಚೆನ್ನೈ ನಡುವೆ ಓಡುತ್ತಿದೆ. ಮಂಗಳವಾರ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ (ಸಿಬಿಎಸ್) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬೊಮ್ಮಾಯಿ, ಭಾರತದ ಪ್ರತಿಷ್ಠಿತ ಮತ್ತು ಆಧುನಿಕ ರೈಲುಗಳಲ್ಲಿ ಒಂದಾದ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಳಗಾವಿ ನಡುವೆ ಪರಿಚಯಿಸಲಾಗುವುದು ಎಂದು ಹೇಳಿದರು.
ಎಲ್ಲವೂ ಅಂದುಕೊಂಡಂತೆ ನಡೆದರೆ ವಂದೇ ಭಾರತ್ ರೈಲು ಸೇವೆ ಬೆಂಗಳೂರು- ಹುಬ್ಬಳ್ಳಿ-ಬೆಳಗಾವಿ ನಡುವೆ ಶೀಘ್ರವೇ ಬರುತ್ತದೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮೂಲಕ ಮೈಸೂರು ಮತ್ತು ಚೆನ್ನೈ ನಡುವೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಸೇವೆಗೆ ಚಾಲನೆ ನೀಡಿದ್ದರು.

ಬೆಳಗಾವಿವರೆಗೂ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ
ಇದು ಯಶಸ್ವಿಯಾಗಿ ಓಡುತ್ತಿದೆ. ಅಲ್ಲದೆ ದೇಶದ ಏಳನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 30ರಂದು ಹೌರಾ ಮತ್ತು ನ್ಯೂ ಜಲ್ಪೈಗುರಿ ನಡುವೆ ಪ್ರಧಾನಿ ಮೋದಿ ಅವರು ಚಾಲನೆ ನೀಡಿದ್ದಾರೆ. ಬೆಂಗಳೂರು-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಧಾರವಾಡದ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ ಈ ಕುರಿತು ರೈಲ್ವೆ ಇಲಾಖೆ ಇನ್ನೂ ಯಾವುದೇ ಆದೇಶ ಪ್ರಕಟಿಸಿಲ್ಲ. ಬೆಂಗಳೂರು-ಹುಬ್ಬಳ್ಳಿ ನಡುವೆ ರೈಲು ಓಡಿಸಲು ಪೂರಕ ಕಾಮಗಾರಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಆದರೆ ಬೊಮ್ಮಾಯಿ ಅವರು ಈಗ ವಂದೇ ಭಾರತ್ ರೈಲು ಬೆಳಗಾವಿಗೂ ಸಂಪರ್ಕಿಸಲಿದೆ ಎಂಬ ಸಂತಸದ ಸುದ್ದಿ ನೀಡಿದ್ದಾರೆ.

ನವೆಂಬರ್‌ನಲ್ಲಿ ಬೊಮ್ಮಾಯಿ, ಅಶ್ವಿನಿ ವೈಷ್ಣವ್ ಸಭೆ
ಹುಬ್ಬಳ್ಳಿ- ಧಾರವಾಡ ರೈಲ್ವೇ ಹಳಿಯಲ್ಲಿ ವೇಗದ ಪರೀಕ್ಷೆಯನ್ನು ನಡೆಸಲಾಗಿದ್ದು, ವೇಗದ ಪರೀಕ್ಷೆ ಯಶಸ್ವಿಯಾಗಿದೆ ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ರಾಜ್ಯದ ರೈಲು ಯೋಜನೆಗಳ ವಿವರ ಪಡೆದಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಸಂಚಾರದ ಬಗ್ಗೆ ಮಾತನಾಡಿದ್ದರು. ಮಾರ್ಚ್ 2023ರೊಳಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಈ ಮಾರ್ಗದಲ್ಲಿ ಓಡಿಸಲು ಅನುವಾಗುವಂತೆ ವಿದ್ಯುದ್ದೀಕರಣ ಸಂಬಂಧಿಸಿದ ಕೆಲವು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ" ಎಂದು ಅಧಿಕಾರಿಗಳಿಗೆ ಸೂಚನೆಯನ್ನು ಅವರು ನೀಡಿದ್ದರು.

ಹಿಂದೆ ಟ್ರೇನ್ 18 ಎಂದು ಕರೆಯಲಾಗುತ್ತಿತ್ತು
ರೈಲ್ವೆ ಇಲಾಖೆ ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆಯ ಕಚೇರಿಯಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಕೇಳಿದ್ದು, ಕಳೆದ ತಿಂಗಳು ಈ ವೇಳಾಪಟ್ಟಿಯನ್ನು ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಈ ಹಿಂದೆ ಟ್ರೇನ್ 18 ಎಂದು ಕರೆಯಲಾಗುತ್ತಿತ್ತು, ಇದು ಸೆಮಿ ಹೈ ಸ್ಪೀಡ್ ರೈಲು ಆಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಪೆರಂಬೂರ್, ಚೆನ್ನೈ. ಮೊದಲ ರೈಲಿನ ನಿರ್ಮಾಣವು 18 ತಿಂಗಳುಗಳನ್ನು ತೆಗೆದುಕೊಂಡಿತು. ಈ ಸೇವೆಗೆ 27 ಜನವರಿ 2019 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಯಿತು.
|
ಟ್ರ್ಯಾಕ್‌ಗಳು ಹೆಚ್ಚಿನ ವೇಗ ಬೆಂಬಲಿಸಲ್ಲ
ವಂದೇ ಭಾರತ್ ಎಕ್ಸ್‌ಪ್ರೆಸ್ ಗರಿಷ್ಠ ವೇಗ ಪ್ರತಿ ಗಂಟೆಗೆ 160 ಕಿಮೀ ಪರೀಕ್ಷೆಯ ಸಮಯದಲ್ಲಿ ಇದು 180 ಕಿಮೀಗೂ ಮೀರಿದೆ. ಆದರೆ ಅದರ ಟ್ರ್ಯಾಕ್‌ಗಳು ಅಂತಹ ಹೆಚ್ಚಿನ ವೇಗವನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಹೀಗಾಗಿ ರೈಲು ಗರಿಷ್ಠ ಗಂಟೆಗೆ 130 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications