Vande Bharat Express: ಬೆಂಗಳೂರು-ಕರಾವಳಿ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು: ಅಶ್ವಿನಿ ವೈಷ್ಣವ್
ಬೆಂಗಳೂರು: ರೈಲ್ವೆ ಅಧಿಕಾರಿಗಳು ಇತ್ತೀಚೆಗೆ ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡ ಬೆನ್ನಲ್ಲೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಕರಾವಳಿ ಭಾಗದ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train) ಪರಿಚಯಿಸಲಾಗುವುದು ಎಂದು ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನಿಂದ ಮಂಗಳೂರು ಮತ್ತು ಕಾರವಾರದ ಕರಾವಳಿ ನಗರಗಳನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಲೋಕಾರ್ಪಣೆಗೊಳಿಸಲಾಗುವುದು. ಬಾಕಿ ವಿದ್ಯುದೀಕರಣ ಪೂರ್ಣಗೊಳ್ಳುತ್ತಿದ್ದಂತೆ ಆಧುನಿಕ ರೈಲು ಕಾರ್ಯಾಚರಣೆ ನಡೆಸಲಿದೆ ಎಂದು ಅವರು ಪ್ರಕಟಿಸಿದರು. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ. ವಿಶೇಷ ಅನುಭವ ನೀಡುವ ಹೆಚ್ಚುವರಿ ರೈಲು ಸಾರಿಗೆ ಈ ಭಾಗಕ್ಕೆ ಸಿಕ್ಕಂತಾಗುತ್ತದೆ ಎಂದರು.

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡಿದೆ. ಇನ್ನೂ ಹಾಸನ-ಮಂಗಳೂರು ವಿಭಾಗದ ನಡುವೆ ವಿದ್ಯುದ್ದೀಕರಣ ಕಾರ್ಯ ನಡೆಯುತ್ತಿದೆ. ಅದು ಮುಗಿಯುತ್ತಿದ್ದಂತೆ ಕಾರವಾರ-ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಸೇವೆ ಆರಂಭಿಸಲಿದೆ ಎಂದು ತಿಳಿಸಿದರು.
ಕರ್ನಾಟಕ ರೈಲ್ವೆಗೆ 7,748 ಕೋಟಿ ರೂ. ಹಂಚಿಕೆ
ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ 7,748 ಕೋಟಿ ರೂ.ಗಳ ಬಜೆಟ್ ಹಂಚಿಕೆ ಮಾಡಲಾಗಿದೆ. ಇದು ಈ ಹಿಂದೆ 2009-2014ರ ಅವಧಿಯಲ್ಲಿ ಹಂಚಿಕೆ ಆಗಿದ್ದ ಹಂಚಿಕೆಗಿಂತ ಒಂಬತ್ತು ಪಟ್ಟು ಅಧಿಕವಾಗಿದೆ. ರೈಲು ಹಳಿಗಳ ವಿದ್ಯುದ್ದೀಕರಣ ಮತ್ತು ಸುರಕ್ಷತಾ ಪ್ರಮಾಣೀಕರಣಗಳು ಪೂರ್ಣಗೊಂಡ ನಂತರ ಶೀಘ್ರದಲ್ಲೇ ಬೆಂಗಳೂರನ್ನು ಮಂಗಳೂರಿಗೆ ಸಂಪರ್ಕಿಸುವ ಹೊಸ ವಂದೇ ಭಾರತ್ ಸೇವೆ ಪ್ರಾರಂಭವಾಗಲಿದೆ ಎಂದು ಪುನರುಚ್ಚರಿಸಿದರು.
ರಾಜ್ಯಾದ್ಯಂತ ವಂದೇ ಭಾರತ್ ರೈಲುಗಳ ಸಂಚಾರ
ರಾಜ್ಯದಲ್ಲಿ ಸದ್ಯ 12 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸೇವೆ ನೀಡುತ್ತಿದ್ದು, ನಿತ್ಯ ವಿವಿಧ ಮಾರ್ಗಗಳಲ್ಲಿ ಸಂಚಾರ ಮಾಡುತ್ತಿವೆ. ಭವಿಷ್ಯದಲ್ಲಿ ಇಡೀ ರಾಜ್ಯಾದ್ಯಂತ ವಂದೇ ಭಾರತ್ ರೈಲುಗಳ ಸಂಚಾರ ಮಾಡುವಂತೆ ಮಾಡಲಾಗುವುದು. ರೈಲ್ವೆ ಸಚಿವರಾಗಿ ನಾನು ನೀಡಿದ ಭರವಸೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಬದ್ಧತೆಗಳನ್ನು ಪೂರೈಸಲಾಗುವುದು, ಭರವಸೆ ಉಳಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು-ಮುಂಬೈ ಮಧ್ಯ ಪ್ರೀಮಿಯಂ ರೈಲು ಸೇವೆ
ಕೇಂದ್ರ ಬಜೆಟ್‌ನಲ್ಲಿ "ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್‌ಗೆ ಎರಡು ಪ್ರಮುಖ ಹೈಸ್ಪೀಡ್ ರೈಲು ಯೋಜನೆಗಳನ್ನು ಘೋಷಿಸಲಾಗಿದೆ. ಇದರಿಂದ ಬೆಂಗಳೂರು ಸಂಪರ್ಕಿಸುವ ಚೆನ್ನೈ ಮಾರ್ಗದ ಪ್ರಯಾಣವು ಹಾಗೂ ಹೈದರಾಬಾದ್‌ನಿಂದ ಸಂಪರ್ಕ ಕಲ್ಪಿಸುವ ಪ್ರಯಾಣವು ಇಳಿಕೆ ಆಗಲಿದೆ. ಇನ್ನೂ ಬೆಂಗಳೂರು ಮತ್ತು ಮುಂಬೈ ನಡುವೆ ಶೀಘ್ರದಲ್ಲೇ ಪ್ರೀಮಿಯಂ ರೈಲು ಕಾರ್ಯಚರಣೆ ಸಾಧ್ಯವಾಗಲಿದೆ. ಪುಣೆ-ಬೆಂಗಳೂರು ರೈಲು ಕಾರಿಡಾರ್ ನಿರ್ಮಾಣಕ್ಕೆ ಮನವಿಗಳು ಸಲ್ಲಿಕೆ ಆಗಿದ್ದು, ಅವುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.
ಇದೇ ವೇಳೆ ಅವರು ಬೆಂಗಳೂರಿನ ಕ್ವಾಲ್ಕಾಮ್ 2 ಎನ್‌ಎಂ ಸೆಮಿಕಂಡಕ್ಟರ್ ಚಿಪ್ ಬಿಡುಗಡೆ ಮಾಡಿದರು. ಟೆಲಿಕಾಂ, "ಆಟೋಮೋಟಿವ್, ವಿದ್ಯುತ್ ನಿರ್ವಹಣೆ ಹಾಗೂ ಕಾರ್ಯತಂತ್ರದ ಅವಶ್ಯಕತೆಗಳನ್ನು ಪೂರೈಸಲಾಗುವುದು. 2022 ರಿಂದ ಇಲ್ಲಿಯವರೆಗೆ ಅಲ್ಪಾವಧಿಯಲ್ಲಿಯೇ 315 ವಿಶ್ವವಿದ್ಯಾಲಯಗಳು ಚಿಪ್‌ಗಳನ್ನು ವಿನ್ಯಾಸಗೊಳಿಸಲು ಸಿನೊಪ್ಸಿಸ್, ಕ್ಯಾಡೆನ್ಸ್ ಅಥವಾ ಸೀಮೆನ್ಸ್‌ನಿಂದ ಪ್ರಮುಖ ಎಲೆಕ್ಟ್ರಾನಿಕ್ ವಿನ್ಯಾಸ ಯಾಂತ್ರೀಕೃತಗೊಂಡ (EDA) ಪರಿಕರಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications