ಈ ಯೋಜನೆ ನಿಲ್ಲಿಸಿ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ವಿ ಸೋಮಣ್ಣ!
ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯಕ್ಕೆ ವಿವಿಧ ಯೋಜನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ವಿ ಸೋಮಣ್ಣ ಅವರು ಶ್ರಮಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ವಿ ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಹತ್ವದ ಚರ್ಚೆಯೊಂದನ್ನು ಮಾಡಿದ್ದಾರೆ.
ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಿಗೆ ಕೇಂದ್ರದಲ್ಲಿ ಸಚಿವ ಗಿರಿ ಸಿಕ್ಕ ಮೇಲೆ ಹಲವು ಯೋಜನೆಗಳನ್ನು ಕರ್ನಾಟಕಕ್ಕೆ ನೀಡುತ್ತಿದ್ದಾರೆ. ಆದರೆ, ಪ್ರಮುಖ ಯೋಜನೆಯೊಂದನ್ನು ಜಾರಿ ಮಾಡಬಾರದು ಅಥವಾ ಈ ಯೋಜನೆಯನ್ನು ಜಾರಿ ಮಾಡಿದರೆ ಸಮಸ್ಯೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗಿದೆ. ಅದೇನು ಎನ್ನುವ ವಿವರ ನೋಡೋಣ.

ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗೆ ಅನ್ಯಾಯ ಆಗುತ್ತಿದೆ. ತಕ್ಷಣವೇ ಈ ಯೋಜನೆಯ ಕಾಮಗಾರಿಯನ್ನು ನಿಲ್ಲಿಸುವಂತೆ ಸಾಕಷ್ಟು ಭಾರಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ್ಯೂ, ಅವರು ಈ ಬಗ್ಗೆ ಗಮನಹರಿಸದಿರುವುದು ಹಾಗೂ ಈ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ರೈತರು, ಸಾರ್ವಜನಿಕರು, ಮಠಾಧೀಶರುಗಳ ಮೇಲೆ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಿರುವುದು ವಿಷಾದನೀಯ ಸಂಗತಿ ಎಂದು ವಿ. ಸೋಮಣ್ಣ ಅವರು ಹೇಳಿದ್ದಾರೆ.
ಈ ಯೋಜನೆಯಿಂದ ರೈತರಿಗೆ ಆಗುತ್ತಿರುವ ಅನ್ಯಾಯ, ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಈ ಭಾಗದ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಉಪ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಉಪಸ್ಥಿತಿಯಲ್ಲಿ ಏರ್ಪಡಿಸುವಂತೆ ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿವಾದಿತ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಪೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗಾಗುವ ಅನ್ಯಾಯದ ಬಗ್ಗೆ ಮತ್ತು ಈ ಯೋಜನೆಯ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವ ಬಗ್ಗೆ ತಮ್ಮಲ್ಲಿ ನಾನು ಸಾಕಷ್ಟು ಬಾರಿ ವಿನಂತಿ ಮಾಡಿದ್ಯಾಗು ಸಹ ತಾವು ಈ ಬಗ್ಗೆ ಗಮನ ಹರಿಸದಿರುವುದು ಅತ್ಯಂತ ವಿಷಾದನೀಯ
ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಪ್ರಸ್ತುತ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನ್ಯಾಯಯುತವಾಗಿ ತಮ್ಮ ಪಾಲಿನ ನೀರನ್ನು ಉಳಿಸಿಕೊಳ್ಳಲು ಸರ್ಕಾರದ ಮುಂದೆ ಬೇಡಿಕೆ ಇಟ್ಟಂತಹ ರೈತರನ್ನು, ಅಮಾಯಕರನ್ನು, ಮಠಾಧೀಶರುಗಳನ್ನು, ಜನಸಾಮಾನ್ಯರನ್ನು ಹತ್ತಿಕ್ಕುವ ಕಾರ್ಯವನ್ನು ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವುದು ಸಹ ವಿಷಾದನೀಯ ಸಂಗತಿಯಾಗಿದೆ. ಬೆಂಗಳೂರು ಗ್ರಾಮಾಂತರ ಸಂಸದರಾದ ಡಾ. ಸಿ.ಎನ್. ಮಂಜುನಾಥ ಅವರು ಸಹ ಪ್ರಸ್ತುತ ಬೆಳವಣಿಗೆಯ ಬಗ್ಗೆ ದೂರವಾಣಿ ಮುಖಾಂತರ ಚರ್ಚಿಸಿದ್ದು, ಅತ್ಯಂತ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ ಈ ಭಾಗದ ಜನರ ಹಿತದೃಷ್ಟಿಯಿಂದ ಹಾಗೂ ರೈತರ ಜೀವನಾಡಿ ನೀರಿಲ್ಲದೇ ಬದುಕು ಇಲ್ಲ ಎಂಬುದರ ಸಾಧಕ ಬಾಧಕಗಳ ಬಗ್ಗೆ, ರೈತರ, ಮಠಾಧೀಶರ ಹಾಗೂ ಜನಸಾಮಾನ್ಯರ ಮೇಲಿನ ದೌರ್ಜನ್ಯ ನಿವಾರಣೆಗೊಳಿಸಲು ಮತ್ತು ವಿವಾದಿತ ಯೋಜನೆಯ ನಿಜವಾದ ತಾಂತ್ರಿಕ ಅಂಶಗಳ ಮೇಲೆ ಚರ್ಚಿಸಲು ಈ ಯೋಜನಾ ವ್ಯಾಪ್ತಿಯಲ್ಲಿ ಬರುವ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಉಪಸ್ಥಿತಿಯಲ್ಲಿ ತಕ್ಷಣ ಏರ್ಪಡಿಸುವಂತೆ (ದಿನಾಂಕ 9 ಮತ್ತು 10ಜೂನ್ ಹೊರತುಪಡಿಸಿ) ತಮ್ಮನ್ನು ಈ ಮೂಲಕ ಕೋರುತ್ತೇನೆ ಎಂದು ಹೇಳಿದ್ದಾರೆ.
ವಿವಾದಿತ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆಯಿಂದ ತುಮಕೂರು ಭಾಗದ ರೈತರಿಗೆ ಅನ್ಯಾಯ ಆಗುತ್ತಿದ್ದು, ತಕ್ಷಣವೇ ಈ ಯೋಜನೆಯ ಕಾಮಗಾರಿಯನ್ನು ನಿಲ್ಲಿಸುವಂತೆ ಸಾಕಷ್ಟು ಭಾರಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ್ಯೂ, ಅವರು ಈ ಬಗ್ಗೆ ಗಮನಹರಿಸದಿರುವುದು ಹಾಗೂ ಈ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ರೈತರು, ಸಾರ್ವಜನಿಕರು,… pic.twitter.com/qPNfWwNwCg
— V. Somanna (@VSOMANNA_BJP) June 3, 2025
ಈ ಸಭೆಗೆ ತಾಂತ್ರಿಕ ತಜ್ಞರನ್ನು ಮತ್ತು ಈ ಹಿಂದೆ ಯೋಜನೆಯ ಕಾರ್ಯಸಾಧ್ಯತೆ ಇಲ್ಲವೆಂದು, ಈಗ ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಒಪ್ಪಿಗೆ ನೀಡಿರುವ ಅಧಿಕಾರಿಗಳನ್ನು ಸಹ ಈ ಸಭೆಯಲ್ಲಿ ಹಾಜರಿರುವಂತೆ ಸೂಚಿಸಲು ಕೋರಿದೆ ಎಂದೂ ಹೇಳಿದ್ದಾರೆ. ಮುಂದುವರಿದು ಈ ಹಿನ್ನೆಲೆಯಲ್ಲಿ ತುಮಕೂರು ಹಾಗೂ ಕುಣಿಗಲ್ ಭಾಗದ ಜನರ ನೆಮ್ಮದಿಯನ್ನು ಪುನಃ ಪ್ರತಿಷ್ಠಾಪಿಸಲು ಮತ್ತು ಈ ಸಂಬಂಧ ದಾಖಲಾದ ಪೊಲೀಸ್ ಕೇಸ್ ಹಿಂಪಡೆಯುವ ಬಗ್ಗೆ ತಕ್ಷಣ ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕಾಗಿರುವುದರಿಂದ ಈ ಸಭೆಯನ್ನು ಬೇಗ ಆಯೋಜಿಸಬೇಕು ಎಂದಿದ್ದಾರೆ.












Click it and Unblock the Notifications