ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಪರಿಚಯ
ಉತ್ತರ ಕನ್ನಡ, ಸೆಪ್ಟೆಂಬರ್ 03 : ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ವಿಸ್ತರಣೆ ಮಾಡಲಿದ್ದು, ಕರ್ನಾಟಕದಿಂದ ಅನಂತಕುಮಾರ್ ಹೆಗಡೆ ಸಂಪುಟ ಸೇರಲಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ್ ಹೆಗಡೆ ಅವರಿಗೆ ಈಗ ಕೇಂದ್ರ ಸಚಿವ ಸ್ಥಾನ ಒಲಿದು ಬಂದಿದೆ.
ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿ. 1990ರಲ್ಲಿ ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕರಾಗಿ ನೇಮಕಗೊಂಡರು. ನಂತರ ಇವರಿಗೆ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಸ್ಥಾನದ ಹೊಣೆ ವಹಿಸಲಾಯಿತು.
1996ರಲ್ಲಿ ಮೊದಲ ಬಾರಿಗೆ ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅನಂತಕುಮಾರ್ ಹೆಗಡೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದರು. ಉತ್ತರ ಕನ್ನಡ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅನಂತಕುಮಾರ್ ಹೆಗಡೆ ಸಚಿವರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು.

ಅನಂತಕುಮಾರ್ ದತ್ತಾತ್ರೇಯ ಹೆಗಡೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರು ಅನಂತಕುಮಾರ್ ಹೆಗಡೆ, ಅವರ ಪೂರ್ಣ ಹೆಸರು ಅನಂತಕುಮಾರ್ ದತ್ತಾತ್ರೇಯ ಹೆಗಡೆ. ತಂದೆ ದತ್ತಾತ್ರೇಯ ಹೆಗಡೆ, ತಾಯಿ ಲಲಿತಾ ಹೆಗಡೆ.

ಮೋದಿ ಸಂಪುಟ ಸೇರಲಿದ್ದಾರೆ
ಅನಂತಕುಮಾರ್ ಹೆಗಡೆ ಅವರು ಶಿರಸಿಯಲ್ಲಿ 1968ರ ಮೇ 20ರಂದು ಜನಿಸಿದರು. ಶಿರಸಿಯ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.

ಧ್ವಜಾರೋಹಣ ಮಾಡಿದ್ದರು
ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ತಾರಕಕ್ಕೇರಿದ ಸಮಯದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ಧ್ವಜಾರೋಹಣ ಮಾಡಿ ರಾಷ್ಟ್ರದ ಗಮನವನ್ನು ಅನಂತಕುಮಾರ್ ಹೆಗಡೆ ಸೆಳೆದಿದ್ದರು. ಭಟ್ಕಳದಲ್ಲಿ ಕೋಮು ಗಲಭೆ ನಡೆದಾಗ ಹಿಂದೂಪರ ಸಂಘಟನೆಗಳ ಹೋರಾಟದ ನೇತೃತ್ವವಹಿಸಿದ್ದರು.

ಕೆನರಾ ಕ್ಷೇತ್ರದಿಂದ ಸಂಸತ್ತಿಗೆ
1996ರ ಲೋಕಸಭೆ ಚುನಾವಣೆಯಲ್ಲಿ ಕೆನರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದರು. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ವಶದಲ್ಲಿದ್ದ ಕ್ಷೇತ್ರವನ್ನು ಬಿಜೆಪಿಗೆ ಕೈಗೆ ತಂದುಕೊಟ್ಟರು.

1999ರಲ್ಲಿ ಸೋಲು
ಅನಂತಕುಮಾರ್ ಹೆಗಡೆ ಅವರು 1998, 2004, 2009, 2014ರಲ್ಲಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ. 1999ರಲ್ಲಿ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವಾ ಅವರು ಅನಂತಕುಮಾರ್ ಅವರನ್ನು ಒಮ್ಮೆ ಸೋಲಿಸಿದ್ದರು.












Click it and Unblock the Notifications