ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಯುಟಿ ಖಾದರ್ ನೇಮಕ
ಬೆಂಗಳೂರು, ಜನವರಿ 30: ಮಾಜಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಲಯದ ಶಾಸಕ ಯು.ಟಿ.ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಈ ನಡುವೆ ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಸರಿಯಾದ ಸ್ಥಾನಮಾನ ಲಭ್ಯವಾಗುತ್ತಿಲ್ಲ ಎಂದು ಆರೋಪ ಮಾಡಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ಮುಖಂಡ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬುಧವಾರ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಹಾಗೆಯೇ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರನ್ನಾಗಿ ಪ್ರಕಾಶ್ ರಾಠೋಡ್ ಅವರನ್ನು ನಿಯೋಜನೆ ಮಾಡಲಾಗಿದೆ. ಇನ್ನು ಪರಿಷತ್ ವಿಪಕ್ಷಗಳ ಉಪನಾಯಕರನ್ನಾಗಿ ಕೆ.ಗೋವಿಂದ ರಾಜು ಅವರನ್ನು ನೇಮಕ ಮಾಡಲಾಗಿದೆ.
ಈಗ ಶಾಸಕ ಯು.ಟಿ.ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ನೇಮಕ ಮಾಡಲಾಗಿದೆ. ಯಾವುದೇ ಲಾಬಿ ನಡೆಸದೆ ಇದ್ದರೂ ಯು.ಟಿ.ಖಾದರ್ ಅವರಿಗೆ ಹೈಕಮಾಂಡ್ ಅವಕಾಶ ನೀಡಿದೆ. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಸಂಘ ಪರಿಹಾರ ಮತ್ತು ಬಿಜೆಪಿ ಪ್ರಬಲವಾಗಿದ್ದರೂ ಕೂಡಾ ಅಲ್ಲಿ ಕಾಂಗ್ರೆಸ್‌ನ ಓರ್ವ ಶಾಸಕರಾಗಿರುವ ಯು ಟಿ ಖಾದರ್ ಅವರಿಗೆ ಈ ಸ್ಥಾನವನ್ನು ನೀಡುವ ನಿರ್ಧಾರ ಹೈಕಮಾಂಡ್ ಕೈಗೊಂಡಿದೆ.

ಇನ್ನು ಈ ನಡುವೆ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿ ಆಗಿದ್ದರು. ಆದರೆ ಈಗ ಆ ಸ್ಥಾನವನ್ನು ಬಿ.ಕೆ.ಹರಿಪ್ರಸಾದ್‍ರನ್ನು ಅವರಿಗೆ ನೀಡಲಾಗಿದೆ.
ಅಸಮಾಧಾನ ವ್ಯಕ್ತಪಡಿಸಿದ ಇಬ್ರಾಹಿಂ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದವರು ಇಬ್ರಾಹಿಂ. ಆದರೆ ಅವರ ಬದಲಾಗಿ ಈ ಸ್ಥಾನವನ್ನು ಬಿ.ಕೆ.ಹರಿಪ್ರಸಾದ್‌ಗೆ ನೀಡಲಾಗಿದೆ. ಇದರಿಂದಾಗಿ ಆಕ್ರೋಶಕ್ಕೆ ಒಳಗಾದ ಇಬ್ರಾಹಿಂ ಅವರು ಕಾಂಗ್ರೆಸ್ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಲು ಆರಂಭ ಮಾಡಿದ್ದಾರೆ. ಇನ್ನು ಇದಕ್ಕೆ ಪ್ರತ್ಯುತ್ತರ ಎಂಬಂತೆ ಅಲ್ಪಸಂಖ್ಯಾತ ಸಮುದಾಯದ ಯು.ಟಿ.ಖಾದರ್ ಅವರನ್ನು ಶಾಸಕಾಂಗ ಪಕ್ಷದ ಉಪನಾಯಕನನ್ನಾಗಿ ನೇಮಕ ಮಾಡಿದಂತಿದೆ. ಇನ್ನು ಹಲವಾರು ಮಂದಿ ಕಾಂಗ್ರೆಸ್ ನಾಯಕರು ಈ ಸ್ಥಾನದ ಆಕಾಂಕ್ಷಿಗಳು ಆಗಿದ್ದರು. ಜಮೀರ್ ಅಹಮ್ಮದ್ ಖಾನ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಸೂಕ್ತ ಸ್ಥಾನ ಮಾನಕ್ಕಾಗಿ ಲಾಬಿ ಮಾಡುತ್ತಿದ್ದಾರೆ. ಆದರೆ ಈ ನಡುವೆ ಯಾವುದೇ ಲಾಬಿ ನಡೆಸದೆ ಇದ್ದರೂ ಯು.ಟಿ.ಖಾದರ್ ಅವರಿಗೆ ಹೈಕಮಾಂಡ್ ಅವಕಾಶ ನೀಡಿದೆ.
Congress appoints UT Khader as Deputy Leader of Congress Legislative Party in Karnataka Legislative Assembly pic.twitter.com/C82JR2VEVJ
— ANI (@ANI) January 30, 2022
ಈ ಹಿಂದೆ ಪರಿಷತ್ ವಿಪಕ್ಷ ನಾಯಕರಾಗಿದ್ದ ಎಸ್.ಆರ್. ಪಾಟೀಲ್ ಅವಧಿ ಮುಕ್ತಾಯವಾದ ಕಾರಣದಿಂದಾಗಿ ಖಾಲಿ ಇದ್ದ ಆ ಸ್ಥಾನಕ್ಕೆ ಕಾಂಗ್ರೆಸ್ ವರಿಷ್ಟರು ಈಗ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿದ್ದಾರೆ. ಇನ್ನು ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಈ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಧಿಕೃತವಾಗಿ ಪ್ರಕಟಣೆ ಮಾಡುವ ಸಾಧ್ಯತೆಗಳು ಇದೆ.
ಇನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೇಮಕವನ್ನು ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ. ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ನಸೀರ್ ಅಹ್ಮದ್ ಅಥವಾ ಸಿ.ಎಂ.ಇಬ್ರಾಹಿಂ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಇದೀಗ ಎಐಸಿಸಿ ಅಂತಿಮ ಆದೇಶ ಹೊರಡಿಸಿದ್ದು, ಹಿರಿಯ ಮುಖಂಡ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿದೆ.
ವಿರೋಧ ಪಕ್ಷದ ನಾಯಕರಾಗಿದ್ದ ಎಸ್ ಆರ್ ಪಾಟೀಲ ಹಾಗೂ ಮುಖ್ಯ ಸಚೇತಕರಾಗಿದ್ದ ನಾರಾಯಣ ಸ್ವಾಮಿ ಅವರ ಅವಧಿ ಜನವರಿ 5ಕ್ಕೆ ಮುಕ್ತಾಯವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಾಟೀಲ ಅವರಿಗೆ ಪಕ್ಷ ಟಿಕೆಟ್ ನೀಡಿರಲಿಲ್ಲ. ನಾರಾಯಣ ಸ್ವಾಮಿ ಮತ್ತೆ ಸ್ಫರ್ಧೆ ಮಾಡಲು ನಿರಾಕಾರ ಮಾಡಿದ್ದರು. ಇನ್ನು ಹರಿಪ್ರಸಾದ್ ಅವರು ಈಡಿಗ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಲಿಂಗಾಯತ ಸಮುದಾಯದ ಎಂಬಿ ಪಾಟೀಲ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ ಕಾಂಗ್ರೆಸ್, ಇದೀಗ ಹಿಂದುಳಿದ ಸಮುದಾಯದಲ್ಲಿ ತನ್ನ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಮುದಾಯದ ನಾಯಕರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನವನ್ನು ನೀಡಿದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications