ಸ್ಥಳೀಯ ಸಂಸ್ಥೆಗಳ ಚುನಾವಣೆ; ಒಬಿಸಿ ಸಮುದಾಯಕ್ಕೆ ಅವಕಾಶ: ರಘು ಕೌಟಿಲ್ಯ ಮನವಿ
ಬೆಂಗಳೂರು: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಜಿಬಿಎ ಚುನಾವಣೆಯಲ್ಲಿ ಒಬಿಸಿ ಸಮುದಾಯಗಳಿಗೆ ಅವಕಾಶ ನೀಡಬೇಕೆಂದು ಹಾಗೂ ಒಬಿಸಿಯಲ್ಲಿ ಬರುವ ಸಣ್ಣ ಸಣ್ಣ ಸಮುದಾಯವನ್ನು ಗುರುತಿಸಿ ಮುಂಬರುವ ಸಂಘಟನಾ ಪರ್ವದಲ್ಲಿ ಪಕ್ಷದ ಜವಾಬ್ದಾರಿಯನ್ನು ನೀಡಬೇಕೆಂದು ವರಿಷ್ಠರಿಗೆ ಮನವಿ ಮಾಡಲಾಗುವುದು ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಅವರು ತಿಳಿಸಿದ್ದಾರೆ.
ಒಬಿಸಿ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ಕಾರ್ಯಕ್ರಮವನ್ನು ಕೊಟ್ಟಿಲ್ಲ. ವಿವಿಧ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಸೇರಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಕಳೆದ 2.5 ವರ್ಷದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅವಕಾಶ ನೀಡದೆ ನಿರಂತರವಾಗಿ ಈ ಸಮುದಾಯಗಳನ್ನು ತುಳಿಯುತ್ತಾ ಇದೆ ಎಂದು ಅವರು ಆಕ್ಷೇಪಿಸಿದರು.

ಕರ್ನಾಟಕದಲ್ಲಿ ಒಬಿಸಿ ಸಮುದಾಯಗಳಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಹಾಗೂ ಸಮುದಾಯವನ್ನು ಸಂಘಟಿಸಲು ರಾಜ್ಯ ಅಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಸಭೆಗಳನ್ನು ಮುಂಬರುವ ದಿನಗಳಲ್ಲಿ ಆಯೋಜಿಸಲಾಗುವುದೆಂದು ಅವರು ತಿಳಿಸಿದರು.
ಇನ್ನೂ ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಮಾತನಾಡಿ, ಭಾರತೀಯ ಜನತಾ ಪಕ್ಷ ಸೈದ್ಧಾಂತಿಕವಾಗಿ ಒಬಿಸಿ ಸಮುದಾಯದ ಜೊತೆಗಿದೆ, ಕಾಂಗ್ರೆಸ್ ಪಕ್ಷ ಮತ ಬ್ಯಾಂಕ್‍ಗೋಸ್ಕರ ಒಬಿಸಿ ಸಮುದಾಯವನ್ನು ಓಲೈಕೆ ಮಾಡುತ್ತಿದೆ. ಬಿಜೆಪಿ ಒಬಿಸಿ ಸಮುದಾಯಗಳ ವಿವಿಧ ಪಂಗಡಗಳನ್ನು ಗುರುತಿಸಿ ರಾಜಕೀಯವಾಗಿ ಅವರಿಗೆ ಬಲ ತುಂಬುವ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದರು.
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಬೂತ್ ಮಟ್ಟದಿಂದ ಸಂಘಟನೆಯ ಮೂಲಕ ರಾಷ್ಟ್ರೀಯ ಅಧ್ಯಕ್ಷರಾಗುವ ಹಂತದವರೆಗೆ ಬೆಳೆಯುವುದು ಕೇವಲ ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.ಕಾಂಗ್ರೆಸ್ ಪಕ್ಷವು ವಂಶ, ಕುಟುಂಬ ರಾಜಕಾರಣಕ್ಕೆ ಯಾವ ರೀತಿ ಜೋತು ಬಿದ್ದಿದೆ? ಕಾಂಗ್ರೆಸ್ ಪಕ್ಷಕ್ಕೆ ಖರ್ಗೆಯವರು ರಾಷ್ಟ್ರೀಯ ಅಧ್ಯಕ್ಷರಾಗಿರಬಹುದು. ನಮ್ಮ ನಾಯಕರು ಯಾರೆಂದರೆ ರಾಹುಲ್ ಗಾಂಧಿ ಮತ್ತು ಗಾಂಧಿ ಕುಟುಂಬ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಾರೆ ಎಂದು ತಿಳಿಸಿದರು.
14 ಕೋಟಿ ಸಕ್ರಿಯ ಕಾರ್ಯಕರ್ತರಿರುವ, 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಿರುವ ಜಗತ್ತಿನ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ನೂತನ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವರು ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಅಡಿಯಲ್ಲಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ನಿತಿನ್ ನಬಿನ್ ಅವರಿಗೆ ರಾಜ್ಯ ಬಿಜೆಪಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು. ಕೇವಲ 45 ವರ್ಷದ ನಿತಿನ್ ನಬಿನ್ ಅವರನ್ನು ಪಕ್ಷ ರಾಷ್ಟ್ರ ಅಧ್ಯಕ್ಷರಾಗಿ ಆಯ್ಕೆ ಮಾಡಿದೆ. ಜಗತ್ತಿನ ಬೇರೆ ರಾಷ್ಟ್ರಗಳಿಗೆ ಇದು ಮಾದರಿ. ಇದು ಕರ್ನಾಟಕದ ಕೋಟ್ಯಂತರ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ತುಷ್ಟೀಕರಣ, ವಂಶವಾದ, ಭ್ರಷ್ಟಾಚಾರದಿಂದ ಹೊರಕ್ಕೆ ಬರಲು ಕಾಂಗ್ರೆಸ್ಸಿಗೆ ಸಾಧ್ಯವಾಗಿಲ್ಲ. ಇದರಿಂದ ಆ ಪಕ್ಷ ದೂಳೀಪಟವಾಗುತ್ತಿದೆ. ಕಾಂಗ್ರೆಸ್ಸಿನ ಭ್ರಷ್ಟಾಚಾರದ ಮೂಲ ನರೇಗಾ ಆಗಿತ್ತು. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಉದ್ಯೋಗ ಖಾತರಿಗೆ ಜೋಡಿಸಿ, ಅವರ ಹೆಸರಿನಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದರು.
ಡಾ. ಪರಮೇಶ್ವರ್ ಅವರು ಪೊಲೀಸ್ ಇಲಾಖೆಯನ್ನು ಈ ಮಟ್ಟಕ್ಕೆ ತರಬಾರದು ಎಂದು ಕೈಮುಗಿದು ವಿನಂತಿಸುವುದಾಗಿ ಹೇಳಿದರು. ದಯವಿಟ್ಟು ನಿಮ್ಮಿಂದ ಸಾಧ್ಯವಾದರೆ ಇಲಾಖೆಯನ್ನು ನಿರ್ವಹಣೆ ಮಾಡಿ; ಇಲ್ಲವಾದರೆ ರಾಜೀನಾಮೆ ಕೊಡಿ; ನಿಮಗೆ ಸಚಿವರಾಗಿ ಇರಬೇಕಲ್ಲವೇ? ಹಿಂದೆ ಮುಂದೆ ಬೆಂಗಾವಲು, ಪೈಲಟ್ ಬೇಕಲ್ಲವೇ? ಖಾತೆಯೇ ಇಲ್ಲದ ಸಚಿವರಾಗಿ ಎಂದು ತಿಳಿಸಿದರು.












Click it and Unblock the Notifications