Yogi Adityanath: ಒಕ್ಕಲಿಗರ ಕೋಟೆಯಲ್ಲಿ ಕಮಲ ಕಹಳೆ: ರಾಜ್ಯದಲ್ಲಿಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ
ಒಕ್ಕಲಿಗರ ಕೋಟೆಯಲ್ಲಿ ಕಲಮ ಅರಳಿಸಲು ಮುಂದಾಗಿರುವ ಬಿಜೆಪಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಇಂದು ರಾಜ್ಯಕ್ಕೆ ಬರಮಾಡಿಕೊಂಡು ಪ್ರಚಾರ ನಡೆಸಲು ನಿರ್ಧರಸಿದೆ. ಇದರ ಬೆನ್ನಲ್ಲೆ ಇಂದು ರಾಜ್ಯದ ಹಲವೆಡೆ ಸಿಎಂ ಯೋಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಬಸವನಬಾಗೇವಾಡಿಯಲ್ಲಿಂದು ಯೋಗಿ ಮತಶಿಕಾರಿ ನಡೆಯಲಿದೆ.
ಬೆಳಗ್ಗೆ ಲಖನೌನಿಂದ ಮೈಸೂರಿಗೆ ಆಗಮಿಸುವ ಸಿಎಂ ಯೋಗಿ ಆದಿತ್ಯನಾಥ್ ಅವರು, 11 ಗಂಟೆಗೆ ಮಂಡ್ಯದಲ್ಲಿ ನಡೆಯುವ ರೋಡ್ ಶೋ ಮತ್ತು ಪ್ರಚಾರ ಸಭೆಯಲ್ಲಿ ಭಾಗಿಯಾಗುತ್ತಾರೆ. ನಂತರ ಮಧ್ಯಾಹ್ನ 2.40ಕ್ಕೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಸವೇಶ್ವರರ ದರ್ಶನ ಪಡೆದು ಮಧ್ಯಾಹ್ನ 3.05ಕ್ಕೆ ಬಸವನಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಕೆ.ಬೆಳ್ಳುಬ್ಬಿ ಪರ ಪ್ರಚಾರ ಮಾಡಲಿದ್ದಾರೆ.
ಇದಾದ ನಂತರ ಸಂಜೆ 4.50ಕ್ಕೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡು ಇಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಪರ ಮತಯಾಚಿಸಲಿದ್ದಾರೆ. ಸಮಾವೇಶ ಮುಗಿದ ಬಳಿಕ ಉತ್ತರ ಪ್ರದೇಶದ ಲಖನೌಗೆ ನಿರ್ಗಮಿಸುತ್ತಾರೆ.
ರಾಮನಗರ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಚಾಣಕ್ಯ ಯೋಗಿ ಆದಿತ್ಯನಾಥ್ ಒಕ್ಕಲಿಗರ ಗಮನ ಸೆಳೆಯಲಿದ್ದಾರೆ. ಗೌಡರ ಹೃದಯಭೂಮಿ ಎಂದು ಕರೆಯಲ್ಪಡುವ ಈ ಜಿಲ್ಲೆಗಳಲ್ಲಿ ಯೋಗಿ ಒಕ್ಕಲಿಗರ ಮತಬುಟ್ಟಿಗೆ ಕೈ ಹಾಕಲಿದ್ದಾರೆ.

ಒಕ್ಕಲಿಗ ನಾಯಕ ಎಚ್.ಡಿ ದೇವೇಗೌರ ಜೆಡಿಎಸ್ ಕಾಂಗ್ರೆಸ್ ವಿರುದ್ಧ ಜಿದ್ದಾಜಿದ್ದಿ ಶುರು ಮಾಡಿದೆ. ಇದರ ಲಾಭವನ್ನು ಪಡೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್‌ನಿಂದ ಒಕ್ಕಲಿಗ ಮತಗಳನ್ನು ಬಿಜೆಪಿ ಕಬಳಿಸಲು ಯೋಗಿ ಮೊರೆ ಹೋಗಿದೆ. ಆದರೆ ಇದೇ ಸೂತ್ರವನ್ನು 2018ರಲ್ಲಿಯೂ ಬಳಸಲಾಯಿತು. ಆಗ ಯೋಗಿ ಹಳೇ ಮೈಸೂರು ಭಾಗ ಸೇರಿದಂತೆ ಕರ್ನಾಟಕದಾದ್ಯಂತ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ಉಳಿದ ಪ್ರದೇಶದಲ್ಲಿ ಇದು ಹೆಚ್ಚು ಸಹಾಯ ಮಾಡಲಿಲ್ಲ
ಈ ಹಿಂದೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಒಕ್ಕಲಿಗರ ಪಾರಮ್ಯವಿರುವ ಜಿಲ್ಲೆಗಳಿಗೆ ಸ್ವಲ್ಪ ಕಾಲಿಟ್ಟಿತ್ತು. ಈಗ ಒಕ್ಕಲಿಗ ನಾಯಕರ ವಿರುದ್ಧ ಒಕ್ಕಲಿಗ ನಾಯಕರನ್ನೇ ಕಣಕ್ಕಿಳಿಸುತ್ತಿದೆ. ಹಾಸನ ಶಾಸಕ ಪ್ರೀತಂ ಗೌಡ, ಚನ್ನಪಟ್ಟಣದಲ್ಲಿ ಸಿಪಿ ಯೋಗೀಶ್ವರ್ ಅವರಂತಹ ನಾಯಕರನ್ನು ಚುನಾವಣಾ ರಣರಂಗಕ್ಕೆ ಇಳಿಸಿದೆ.

ಇನ್ನೂ ಮಂಗಳವಾರವಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆಯೊಂದು ಬಂದಿರುವ ಬಗ್ಗೆ ಎಫ್ ಐಆರ್ ದಾಖಲಾಗಿದೆ. ತುರ್ತು ಕರೆಗೆ ಇರುವ 112 ಸಂಖ್ಯೆಗೆ ವ್ಯಕ್ತಿಯೊಬ್ಬ ಕರೆ ಹಾಗೂ ಸಂದೇಶವನ್ನು ಕಳುಹಿಸಿದ್ದಾನೆ. ಇದರಲ್ಲಿ "ಸಿಎಂ ಯೋಗಿ ಅವರನ್ನು ಶೀಘ್ರದಲ್ಲಿ ಕೊಲೆ ಮಾಡುತ್ತೇನೆ" ಎಂದು ಬರೆದಿದ್ದಾನೆ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಂಡು ತನಿಖೆ ಆರಂಭಿಸಿದ್ದಾರೆ.
ಹೀಗಾಗಿ ಇಂದು ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ಪೊಲೀಸ್ ಬಿಗಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಪ್ರಚಾರದ ಸ್ಥಳಲ್ಲಿ ಈಗಾಗಲೇ ಪೊಲೀಸರು ತಪಾಸಣೆ ನಡೆಸಿದ್ದಾರೆ. ಪೊಲೀಸ್ ಬಿಗಿ ಭದ್ರತೆಯೊಂದಿಗೆ ಇಂದು ಯೋಗಿ ಒಕ್ಕಲಿಗರ ಮತ ಬುಕ್ಕಿಯಲ್ಲಿ ಕೈ ಹಾಕುವ ಸಾಧ್ಯತೆ ಇದೆ.

ಯೋಗಿ ಅವರ ವೈಯಕ್ತಿರ ವರ್ಚಸ್ಸು, ಕಠಿಣ ಸಿಎಂ ಇಮೇಜ್ ಪ್ರಚಾರದಲ್ಲಿ ಅವರಿಗೆ ಸಹಾಯ ಮಾಡಬಹುದು ಎಂದು ಸ್ಥಳೀಯ ಬಿಜೆಪಿ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಬಿಜೆಪಿ ನಿರೀಕ್ಷೆಯಂತೆ ಯೋಗಿ ಪ್ರಚಾರ ಲಾಭವಾಗುತ್ತೋ ಅಥವಾ ನಷ್ಟವಾಗುತ್ತೋ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ಹಾಗೂ ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಇದ್ದ ಕೊನೆಯ ದಿನ ಕೂಡ ಪೂರ್ಣಗೊಂಡಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.












Click it and Unblock the Notifications