ನನ್ನ ಸರ್ಕಾರವು ಅಭಿವೃದ್ಧಿ ಸೇರಿ ಈ ವಿಚಾರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ: ಸಿ.ಎಂ ಸಿದ್ದರಾಮಯ್ಯ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರವು ಜಂಟಿ ಅಧಿವೇಶನಕ್ಕೆ ಸಿದ್ಧಪಡಿಸಿದ್ದ ಭಾಷಣವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಓದಿರಲಿಲ್ಲ. ಬದಲಿಗೆ ಅವರೇ ಬರೆದುಕೊಂಡು ಬಂದಿದ್ದ ಭಾಷಣವನ್ನು ಓದಿ ರಾಜ್ಯಪಾಲರು ಹಿಂದಿರುಗಿದ್ದರು. ಈ ನಡೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಭಾರೀ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನನ್ನ ಸರ್ಕಾರವು ಅಭಿವೃದ್ಧಿ, ಸಾಮಾಜಿಕ ನ್ಯಾಯ, ಹಣಕಾಸಿನ ಶಿಸ್ತು, ಪ್ರಾದೇಶಿಕ ನ್ಯಾಯ, ಜನಸ್ನೇಹಿ ಆಡಳಿತ, ಕಾನೂನು ಸುವ್ಯವಸ್ಥೆ ಮುಂತಾದವುಗಳಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡುತ್ತಿದೆ. ಪರಿಣಾಮಕಾರಿ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಹಾಗೂ ಇಂಡಿಯಾ ಜಸ್ಟೀಸ್ -2025 ರ ವರದಿ ಪ್ರಕಾರ ಪೊಲೀಸ್ ಮತ್ತು ನ್ಯಾಯದಾನ ವ್ಯವಸ್ಥೆ ರೂಪಿಸಿರುವ ದೇಶದ ಮಧ್ಯಮ ಮತ್ತು ದೊಡ್ಡ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮುಂದುವರಿದು ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಜನಸ್ನೇಹಿ ಕಾನೂನುಗಳ ರಚನೆ, ಕೈಗಾರಿಕಾ ಪರವಾದ ನೀತಿಗಳ ರಚನೆ ಮತ್ತು ಅನುಷ್ಠಾನ, ಸುಸಂಬದ್ಧವಾದ ಸಾರಿಗೆ ವ್ಯವಸ್ಥೆ, ಸರ್ಕಾರದ ಅಧೀನದ ಸಂಸ್ಥೆಗಳ ಕಾರ್ಯವೈಖರಿ, ಪೊಲೀಸು, ನ್ಯಾಯ ವ್ಯವಸ್ಥೆ ಮುಂತಾದವುಗಳಲ್ಲಿ ಕರ್ನಾಟಕವು ಇಂದು ದೇಶದಲ್ಲಿ ಹಲವು ಮಾದರಿಗಳನ್ನು ಸೃಷ್ಟಿಸಿದೆ. ರಾಜ್ಯವು ಒಕ್ಕೂಟ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ನೀತಿಕಾರಕ ವಿಚಾರಗಳಲ್ಲಿ ದಮನಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತೆರಿಗೆ ಪಾಲು, ಕೇಂದ್ರ ಪುರಸ್ಕೃತ ಯೋಜನೆಗಳು, ಕೇಂದ್ರದ ಯೋಜನೆಗಳು, ವಿಶೇಷ ಯೋಜನೆಗಳು ಮುಂತಾದವುಗಳಲ್ಲಿ ಅನ್ಯಾಯಗಳಿಗೆ ತುತ್ತಾಗಿದೆ.
ದೇಶದ ಆರ್ಥಿಕತೆಯಲ್ಲಿ ಚಾಲಕ ಸ್ಥಾನದಲ್ಲಿರುವ ಕರ್ನಾಟಕವನ್ನು ಆರ್ಥಿಕವಾಗಿ ಗಮನಿಸಿದರೆ ಅದರ ಪರಿಣಾಮ ಇಡೀ ದೇಶದ ಮೇಲೆ ಉಂಟಾಗುತ್ತದೆ ಎಂಬುದನ್ನು ಒಕ್ಕೂಟ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆ. 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಸುಮಾರು 1.25 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಪ್ರಮಾಣದ ಸಂಪನ್ಮೂಲಗಳು ರಾಜ್ಯಕ್ಕೆ ಸಿಗದೆ ವಂಚನೆಯಾಗಿದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅನ್ಯಾಯವು ಸರಿಯಾಗಬಹುದೆಂಬುದು ಸರ್ಕಾರದ ಖಚಿತ ನಂಬುಗೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರ ವಿರುದ್ಧವೇ ಗೂಂಡಾ ವರ್ತನೆ: ಬಿಜೆಪಿ ಟೀಕೆ
ಇನ್ನು ಕರ್ನಾಟಕದ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ನಡೆದಿರುವ ಬೆಳವಣಿಗೆಗೆ ಬಿಜೆಪಿ ಟೀಕೆ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ವಿರುದ್ಧದ ದ್ವೇಷ ರಾಜಕಾರಣಕ್ಕಾಗಿ ವಿಶೇಷ ಅಧಿವೇಶನ ಕರೆದ ಕಾಂಗ್ರೆಸ್ ಸರ್ಕಾರ, ವಿಧಾನಸೌಧದಲ್ಲಿ ಶಾಸಕರು ಮತ್ತು ಸಚಿವರ ಮೂಲಕ ಅಸಭ್ಯವಾಗಿ ವರ್ತಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ.
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಸದನದಲ್ಲಿ ರಾಜ್ಯಪಾಲರ ವಿರುದ್ಧವೇ ಗೂಂಡಾ ವರ್ತನೆ ಪ್ರದರ್ಶನ ಮಾಡುವ ಮೂಲಕ ಕಾಂಗ್ರೆಸ್ಸಿಗರು ಸಂವಿಧಾನದ ಆಶಯಗಳಿಗೆ ಲೋಪವೆಸಗಿದ್ದಾರೆ. ಅಭಿವೃದ್ಧಿಯತ್ತ ಗಮನಹರಿಸಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರವು, ಕೇಂದ್ರ ಸರ್ಕಾರದ ವಿರುದ್ಧ ದ್ವೇಷ ಸಾಧಿಸುವ ಸಲುವಾಗಿ ಸಂವಿಧಾನಿಕ ಹುದ್ದೆಯಲ್ಲಿರುವ ಗೌರವಾನ್ವಿತ ರಾಜ್ಯಪಾಲರಿಗೆ ಅಪಮಾನ ಮಾಡುತ್ತಿರುವುದು ಖಂಡನೀಯ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ ಬಡವರ ಪರವಾದ ಸುಧಾರಿತ ಕೇಂದ್ರ ಸರ್ಕಾರದ ಯೋಜನೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಸರ್ಕಾರ ಗೂಂಡಾಗಿರಿಯ ಮೂಲಕ ಅಧಿವೇಶನದ ಘನತೆಯನ್ನು ಕುಂದಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ಗೂಂಡಾ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.












Click it and Unblock the Notifications