ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ

Posted By:
Subscribe to Oneindia Kannada

ಕೊಪ್ಪಳ, ಜುಲೈ 05 : 'ನಿಮ್ಮ ಕಾಲಿಗೆ ನಮಸ್ಕಾರ ಮಾಡುತ್ತೀನಿ...ದಯಮಾಡಿ ಶೌಚಾಲಯ ಕಟ್ಟಿಸಿಕೊಳ್ಳಿ, ಬಯಲು ಶೌಚಕ್ಕೆ ಹೋಗಬೇಡಿ' ಎಂದು ಬಯಲು ಶೌಚಕ್ಕೆ ತೆರಳುವ ಜನರಿಗೆ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ಕರಟೂರಿ ಅವರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಶ್ರೀನಿವಾಸ ಕರಟೂರಿ ಅವರು ಮುಂಜಾನೆ ಬಯಲು ಬಹಿರ್ದೆಸೆಗೆ ಹೋಗುವ ಸಾರ್ವಜನಿಕರನ್ನು ನಿಲ್ಲಿಸಿ, ಅವರ ಕಾಲಿಗೆ ನಮಸ್ಕರಿಸಿ, ದಯವಿಟ್ಟು ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡು, ಅದನ್ನು ಬಳಕೆ ಮಾಡುವಂತೆ ಜಾಗೃತಿ ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಇಂತಹ ವಿನೂತನ ಅಭಿಯಾನ ಆರಂಭಿಸಿದ್ದಾರೆ. [ಮೈಸೂರಲ್ಲಿ ಶತಾಯುಷಿ ಬೋರಜ್ಜಿಯ ಶೌಚಾಲಯ ಅಭಿಯಾನ]

Srinivas Karturi

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಖುದ್ದಾಗಿ ಮುಂದೆ ಬರುವ ಸಾರ್ವಜನಿಕರಿಗೆ ತಮ್ಮ ಸ್ವಂತ ಹಣದಲ್ಲಿ ವಾಷಿಂಗ್ ಬೇಸಿನ್ ಅನ್ನು ವಿತರಣೆ ಮಾಡುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಹೊಸ ಪ್ರಯೋಗವಾಗಿದ್ದು, ಈ ಮೂಲಕ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವಾಗಿ ಮಾಡುವ ಕಾರ್ಯ ಆರಂಭವಾಗಿದೆ. [ಮೈಸೂರಲ್ಲಿ ಮಂಗಳಮುಖಿಯರ ಶೌಚಾಲಯ, ದೇಶದಲ್ಲೇ ಪ್ರಥಮ?]

ಶ್ರೀರಾಮನಗರ ಗ್ರಾಮ ಪಂಚಾಯತಿಯು 2,100 ಕುಟುಂಬಗಳನ್ನು ಹೊಂದಿದೆ. ಇವುಗಳಲ್ಲಿ 441 ಕುಟುಂಬಗಳು ಶೌಚಾಲಯ ಹೊಂದಿವೆ. ಇನ್ನೂ 1,659 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಳ್ಳುವುದು ಬಾಕಿ ಇದೆ. [ಪಬ್ಲಿಕ್ ಟಾಯ್ಲೆಟ್ ನಿರ್ಮಾಣದಲ್ಲಿ ಕರ್ನಾಟಕ ನಂ.5]

ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಸದಸ್ಯರುಗಳಿಗೆ ತಲಾ 10, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಲಾ 05 ಶೌಚಾಲಯಗಳನ್ನು ನಿರ್ಮಾಣ ಮಾಡಿಸುವ ಗುರಿ ನೀಡಲಾಗಿದೆ. [ಇದೂ ಒಂದು ಸುದ್ದೀನಾ ಅಂತ ಮೂಗು ಮುರಿಯಬೇಡಿ]

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಕೊಪ್ಪಳ ಜಿಲ್ಲೆಯನ್ನು 2016-17 ನೇ ಸಾಲಿಗೆ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕಾಗಿ ಶೌಚಾಲಯ ಹೊಂದದೇ ಇರುವವರ ಹಾಗೂ ಹೊಂದಿದವರ ಸಮೀಕ್ಷೆ ಮಾಡಿಸಿ, ಮಾಹಿತಿ ಕ್ರೋಢೀಕರಿಸಲಾಗಿದೆ. [ಶೌಚಾಲಯ ನಿರ್ಮಾಣಕ್ಕೆ ನೀಡುವ ಸಹಾಯಧನ ಹೆಚ್ಚಳ]

ಗಂಗಾವತಿ ತಾಲೂಕನ್ನು ಈ ವರ್ಷದ ಅಕ್ಟೋಬರ್ 2 ರೊಳಗೆ ಬಯಲು ಬಹಿರ್ದೆಸೆ ಮುಕ್ತ ತಾಲೂಕನ್ನಾಗಿ ಮಾಡಲು ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳೂ ಕೈ ಜೋಡಿಸಿದ್ದಾರೆ. ಇದಕ್ಕಾಗಿ ವಿನೂತನ ಅಭಿಯಾನ ಆರಂಭಿಸಿದ್ದಾರೆ. ಶ್ರೀನಿವಾಸ ಕರಟೂರಿ ಅವರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ.

ಗ್ರಾಮ ಪಂಚಾಯಿತಿ ವತಿಯಿಂದ ಶಾಲಾ ಶಿಕ್ಷಕರ ಸಭೆ ನಡೆಸಿ, ಮಕ್ಕಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ಅಭಿಯಾನ ಫಲ ಕೊಡುವುದೇ? ಕಾದು ನೋಡಬೇಕು. [ಚಿತ್ರ, ಮಾಹಿತಿ : ಕೊಪ್ಪಳ ವಾರ್ತೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Srinivas Karturi grama panchayat predident of Sriramnagar, Gangavati taluk, Koppal district literally prostrates before people who go out to defecate in the open. I will prostrate before you, please get a toilet constructed he says in his appeal.
Please Wait while comments are loading...