ಯೂರಿಯಾ ಸಕಾಲಕ್ಕೆ ಸಮರ್ಪಕವಾಗಿ ಸರಬರಾಜು ಆಗಿದೆ: ಸಿಎಂಗೆ ಜೋಶಿ ಕೌಂಟರ್
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಬಗ್ಗೆ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಮಾತಿಗೆ ಮೊದಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನೇ ಚಟವಾಗಿಸಿಕೊಂಡಿದ್ದಾರೆ. ಖಾರಿಫ್ ಋತುವಿಗೆ ಕರ್ನಾಟಕ ರಾಜ್ಯ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾದ ಅವಶ್ಯಕತೆಯಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರ ಬೇಡಿಕೆಯನ್ನಿಟ್ಟಿತ್ತು. ರಾಜ್ಯದ ರೈತರ ಹಿತದೃಷ್ಟಿಯಿಂದ ಕೇಂದ್ರ ರಸಗೊಬ್ಬರ ಇಲಾಖೆ 8.73 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸಕಾಲಕ್ಕೆ ಮತ್ತು ಸಮರ್ಪಕವಾಗಿ ಸರಬರಾಜು ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ 7.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕರ್ನಾಟಕದಲ್ಲಿ ಮಾರಾಟವನ್ನು ದಾಖಲಿಸಿದೆ. ಹೀಗಿರುವಾಗ ಸಿದ್ದರಾಮಯ್ಯನವರು ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ನಿಜಕ್ಕೂ ಶೋಚನೀಯ. ಇದೇ ವೇಳೆ ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಚಲುವರಾಯಸ್ವಾಮಿ, ರಾಜ್ಯದಲ್ಲಿ ಯೂರಿಯಾ ಅಭಾವವಿಲ್ಲ ಹಾಗೂ ಹೆಚ್ಚಿನ ಸಂಗ್ರಹಣೆಯಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದಾರೆ ಎಂದಿದ್ದಾರೆ.

ಕೃಷಿ ಸಚಿವರೇ ಸತ್ಯವನ್ನು ಹೇಳುತ್ತಿರುವಾಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಳ್ಳು ಹೇಳುವ ಮೂಲಕ ರಾಜ್ಯದ ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಸಿಎಂ ಖುರ್ಚಿ ಗಲಾಟೆ, ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು, ದುರಾಡಳಿತವನ್ನು ಮರೆಮಾಚಲು ಕೇಂದ್ರ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡುವ ಮೂಲಕ ರಾಜ್ಯದ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಅಕ್ಷಮ್ಯ ಅಪರಾಧ ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾರತ ಸರ್ಕಾರವು ಯೂರಿಯಾ ಮತ್ತಿತರ ರಸಗೊಬ್ಬರಗಳನ್ನು ಎಲ್ಲ ರಾಜ್ಯಗಳಿಗೆ ಸರಬರಾಜು ಮಾಡಬೇಕು. ಈ ವರ್ಷ ಭಾರತ ಸರ್ಕಾರವು ಸರಬರಾಜು ಮಾಡಿರುವ ರಸಗೊಬ್ಬರವು ಸಾಕಾಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ರಾಜ್ಯದಲ್ಲಿ ಮುಂಗಾರು ಅವಧಿಗೂ ಮುನ್ನವೇ ಪ್ರಾರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬಿತ್ತನೆ ಈ ವರ್ಷ ಹೆಚ್ಚಾಗಿದೆ. ಜಲಾನಯನ ಪ್ರದೇಶಕ್ಕೆ ನೀರನ್ನು ಈಗಾಗಲೇ ಹಾಯಿಸಲಾಗಿದೆ. ಹಾಗಾಗಿ ರೈತರು ಹೆಚ್ಚು ರಸಗೊಬ್ಬರವನ್ನು ಬಳಸುತ್ತಿದ್ದಾರೆ. ಹಾಗೆಂದು ನಮ್ಮ ಬಳಿ ರಸಗೊಬ್ಬರವಿಲ್ಲ ಎಂದೇನಲ್ಲ. ಆದರೆ ರಾಜ್ಯಕ್ಕೆ ಹೆಚ್ಚಿನ ರಸಗೊಬ್ಬರದ ಅಗತ್ಯವಿದೆ. ಸರ್ಕಾರದ ಬಳಿ ರಸಗೊಬ್ಬರವಿಲ್ಲ ಎಂಬ ತಪ್ಪು ಕಲ್ಪನೆ ರೈತರಲ್ಲಿ ಮೂಡಿದ್ದು, ಚಳವಳಿ ಪ್ರಾರಂಭಿಸಿದ್ದಾರೆ. ಯೂರಿಯಾ ಮತ್ತಿತರ ರಾಸಾಯನಿಕ ರಸಗೊಬ್ಬರ ಲಭ್ಯವಿದ್ದು, ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ ಎಂದು ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಎಂದಿದ್ದರು.
ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಇಲ್ಲ: ಕೃಷಿ ಸಚಿವ
ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿಯೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಇಲ್ಲ. ರೈತರು ಆತಂಕಕ್ಕೆ ಈಡಾಗಬಾರದು, ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಹೆಚ್ಚುವರಿ ಉಳಿಕೆ ಇರುವ ಇತರೆಡೆಗಳಿಂದ ವರ್ಗಾವಣೆ ಮಾಡಿ ಸರಿದೂಗಿಸಲಾಗುವುದು. ರೈತರಿಗೆ ಯಾವುದೇ ರೀತಿ ತೊಂದರೆಗಳಾಗದಂತೆ ನಿಗಾ ವಹಿಸಲು ಇಲಾಖೆಯ ರಾಜ್ಯ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ವರ್ಷ ಮುಂಗಾರು ಬೇಗ ಆರಂಭವಾದ ಕಾರಣ, ಸುಮಾರು 2 ಲಕ್ಷ ಹೆಕ್ಟೇರ್ ಮುಸಿಕನ ಜೋಳ ಪ್ರದೇಶ ವಿಸ್ತರಣೆಯಾದ ಹಿನ್ನೆಲೆ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೆಲ ರೈತರು ಆತಂಕದಿಂದ ಆಗಸ್ಟ್-ಸೆಪ್ಟೆಂಬರ್‌ಗೆ ಬೇಕಾದ ಗೊಬ್ಬರವನ್ನ ಈಗಲೇ ಖರೀದಿಸಲು ಮುಂದಾಗಿದ್ದು, ತಕ್ಷಣ ಬೇಡಿಕೆ ಹೆಚ್ಚಲು ಕಾರಣವಾಗಿದೆ. ರಾಜ್ಯದಲ್ಲಿ ನಮ್ಮ ಗುರಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ. ಜುಲೈ ತಿಂಗಳ ಬೇಡಿಕೆಯಂತೆ ಆಧಾರದಲ್ಲಿನ ವಿತರಣೆಯ ನಂತರವೂ ದಾಸ್ತಾನು ಉಳಿಕೆಯಿದೆ. ಒಂದು ವೇಳೆ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಯೂರಿಯಾ ಸೇರಿದಂತೆ ರಸಗೊಬ್ಬರದ ಕೊರತೆ ಕಂಡುಬಂದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾಗಿರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ, ಸರಬರಾಜು ಮಾಡಲಾಗುವುದು. ಕೃಷಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಅಭಯ ನೀಡಿದ್ದಾರೆ.












Click it and Unblock the Notifications