ಕಾವೇರಿ ಮಂಡಳಿ ರಚನೆ ಪ್ರಸ್ತಾಪವಿಲ್ಲ : ಅನಂತ್
ಬೆಂಗಳೂರು, ಜೂ 7: ಕಾವೇರಿ ನದಿನೀರು ನಿರ್ವಹಣಾ ಮಂಡಳಿ ರಚನೆ ಮಾಡುವ ಯಾವುದೇ ಪ್ರಸ್ತಾಪ ಕೇಂದ್ರ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಲಿದೆ ಎನ್ನುವುದು ಕೇವಲ ಊಹಾಪೋಹ ಸುದ್ದಿ. ಒಂದು ವೇಳೆ ಮಂಡಳಿ ರಚನೆಯಾದರೆ ನಾವೆಲ್ಲರೂ ಒಟ್ಟಾಗಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಈಗಿರುವ ಸಮಿತಿಯನ್ನೇ ಮುಂದುವರಿಸಲು ಒತ್ತಾಯ ಮಾಡಲಿದ್ದೇವೆಂದು ಸಚಿವ ಅನಂತ್ ಕುಮಾರ್ ತಿಳಿಸಿದರು.

ನಗರದಲ್ಲಿ ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ಅನಂತ್ ಕುಮಾರ್, ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನಶ್ಚೇತನ ಖಾತೆ ಸಚಿವೆ ಉಮಾಭಾರತಿ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದೇನೆ.
ಇಲಾಖೆಯ ಮುಂದೆ ಅಂತಹ ಯಾವುದೇ ಪ್ರಸ್ತಾಪನೆ ಇಲ್ಲ ಮತ್ತು ಸಚಿವಾಲಯದ ಪರವಾಗಿ ಯಾರೂ ಹೇಳಿಕೆ ನೀಡಿಲ್ಲ ಎಂದು ಉಮಾ ಸ್ಪಷ್ಟ ಪಡಿಸಿದ್ದಾರೆಂದು ಅನಂತ್ ಈ ಸಂದರ್ಭದಲ್ಲಿ ಹೇಳಿದ್ದಾರೆ. (ಕರೆಂಟು ಕೊಟ್ರೆ ಎನ್ಡಿಎಗೆ 'ಜಯಾ' ಕರದಂಟು)
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲೂ ಅವರಿಗೆ ಕೇಂದ್ರ ಸರಕಾರದ ನಿಲುವನ್ನು ಸ್ಪಷ್ಟ ಪಡಿಸಿದ್ದೇನೆ. ಈ ಬಗ್ಗೆ ರಾಜ್ಯದ ಜನತೆಗೆ ಯಾವುದೇ ಸಂದೇಹ ಬೇಡ ಎಂದು ಅನಂತ್ ಕುಮಾರ್ ನುಡಿದರು.
ರಾಷ್ಟ್ರಪತಿಗಳು ಸೋಮವಾರ (ಜೂ 9) ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇದಾದ ನಂತರ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಮತ್ತು ಬಿಜೆಪಿ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಜೀವನದಿ ಕಾವೇರಿ ನದಿ ವಿಚಾರದಲ್ಲಿ ರಾಜ್ಯದ ಹಿತ ಕಾಪಾಡುವಂತೆ ಚರ್ಚಿಸಲಿದ್ದೇವೆಂದು ಅನಂತ್ ಕುಮಾರ್ ನುಡಿದಿದ್ದಾರೆ.
ಅವಶ್ಯಕತೆ ಬಿದ್ದಲ್ಲಿ ರಾಜ್ಯದ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಪ್ರಧಾನಿ ಬಳಿ ಹೋಗಲಿದ್ದೇವೆಂದು ಅನಂತ್ ಕುಮಾರ್ ಹೇಳಿದ್ದಾರೆ.












Click it and Unblock the Notifications