ಉಕ್ರೇನ್ ಬಿಕ್ಕಟ್ಟು; ವಿದ್ಯಾರ್ಥಿಗಳನ್ನು ಕರೆತರಲು ಡಿಕೆಶಿ ಒತ್ತಾಯ
ಬೆಂಗಳೂರು, ಫೆಬ್ರವರಿ 24; ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಜಾಗತಿಕವಾಗಿ ತಲ್ಲಣ ಉಂಟು ಮಾಡಿದೆ. ರಷ್ಯಾ ಯುದ್ಧ ಆರಂಭಿಸಿದ್ದು, ಉಕ್ರೇನ್‌ನಲ್ಲಿ ಭಾರತ ಸೇರಿದಂತೆ ಹಲವಾರು ದೇಶಗಳ ಜನರು ಸಿಲುಕಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಸದ್ಯಕ್ಕೆ ಎಲ್ಲರೂ ಸುರಕ್ಷಿತವಾಗಿದ್ದು, ಪೋಷಕರ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಗುರುವಾರ ಸಂಜೆ ಟ್ವೀಟ್ ಮಾಡಿದ್ದು, "ಉಕ್ರೇನ್‌ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನುವ ಸುದ್ದಿ ಕೇಳಿ ಆತಂಕವಾಯಿತು" ಎಂದು ಹೇಳಿದ್ದಾರೆ.

"ಅಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ವಿದ್ಯಾರ್ಥಿಗಳನ್ನು ಆದಷ್ಟು ಬೇಗ ವಾಪಸ್ ಕರೆತರಬೇಕು ಎಂದು ಕರ್ನಾಟಕ ಸರ್ಕಾರ, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರಲ್ಲಿ ಮನವಿ ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ಸಿಲುಕಿದ ವಿದ್ಯಾರ್ಥಿಗಳು; ಮಂಗಳೂರಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿರುವ ಮಾಹಿತಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸಿಕ್ಕಿದೆ. ದೇರಬೈಲ್ ನಿವಾಸಿ ಅನೈನಾ ಮತ್ತು ಪಡೀಲ್‌ನ ಶಾಂತಿನಗರ ನಿವಾಸಿ ಕ್ಲಾಟನ್ ಸಿಲುಕಿಕೊಂಡಿದ್ದಾರೆ.
ಉಕ್ರೇನ್‌ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎನ್ನುವ ಸುದ್ದಿ ಕೇಳಿ ಆತಂಕವಾಯಿತು.
— DK Shivakumar (@DKShivakumar) February 24, 2022
ಅಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ವಿದ್ಯಾರ್ಥಿಗಳನ್ನು ಆದಷ್ಟು ಬೇಗ ವಾಪಸ್ ಕರೆತರಬೇಕು ಎಂದು ಕರ್ನಾಟಕ ಸರ್ಕಾರ, ವಿದೇಶಾಂಗ ವ್ಯವಹಾರಗಳ ಸಚಿವ @DrSJaishankar ಅವರಲ್ಲಿ ಮನವಿ ಮಾಡುತ್ತೇನೆ.#RussiaUkraineConflict
ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಿದ್ಯಾರ್ಥಿನಿ
ನಿವೇದಿತಾ ಎಂಬಿಬಿಎಸ್ 3ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದು, ಅವರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೊಸಳ್ಳಿಯ ಇಂದ್ರೇಶ್ ಅವರ ಪುತ್ರ ಪ್ರದ್ವಿನ್ ಸಹ ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಖಾರ್ಕಿವ್ ನಗರದ ಮೆಡಿಕಲ್ ಕಾಲೇಜಿನಲ್ಲಿ ಮೂರನೇ ವರ್ಷದ ಮೆಡಿಕಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು ವಿಡಿಯೋ ಕರೆ ಮಾಡಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾರೆ. ಎಲ್ಲರೂ ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ವಿಮಾನ ಸೇವೆ ಆರಂಭವಾದರೆ ಎಲ್ಲರೂ ವಾಪಸ್ ಬರಬಹುದಾಗಿದೆ.
ಮುಖ್ಯಮಂತ್ರಿಗಳ ಪತಿಕ್ರಿಯೆ; 'ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, "ಭಾರತದ ಅನೇಕ ವಿದ್ಯಾರ್ಥಿಗಳು ವಿಮಾನ ನಿಲ್ದಾಣ ತಲುಪುವಾಗ ರಷ್ಯಾ ಮತ್ತು ಉಕ್ರೇನ್ ಯುದ್ಧ ಆರಂಭವಾಗಿದೆ. ಎರಡು ಬಸ್‌ಗಳಲ್ಲಿ ಭಾರತದ 100 ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇವರಲ್ಲಿ 10ಕ್ಕಿಂತ ಹೆಚ್ಚು ಕನ್ನಡಿಗರು ಇದ್ದಾರೆ" ಎಂದರು.
"ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿದೆ. ಕೇಂದ್ರ ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಸಂಪರ್ಕದಲ್ಲಿದ್ದು, ವಿದೇಶಾಂಗ ಸಚಿವರೊಂದಿಗೂ ಈ ಕುರಿತು ಚರ್ಚೆ ನಡೆಸಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.
"ಉಕ್ರೇನ್‌ನಲ್ಲಿನ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ರಾಯಭಾರ ಕಚೇರಿ ಸೂಕ್ತ ಮಾರ್ಗದರ್ಶನವನ್ನು ನೀಡಿದೆ. ವಿಮಾನಗಳ ಹಾರಾಟ ಪುನಃ ಆರಂಭವಾದಾಗ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದರು.
ಪೋಷಕರ ಜೊತೆ ಮಾತುಕತೆ; ಉಕ್ರೇನ್‌ನಲ್ಲಿ ಸಿಲುಕಿರುವ ಮಂಗಳೂರಿನ ಕ್ಲಾಟನ್ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. 90 ದಿನಗಳ ಹಿಂದೆ ಉಕ್ರೇನ್‌ಗೆ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದಾನೆ. ಕ್ಲಾಟನ್ ತಾಯಿ ಓಲಿನ್ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಕ್ಲಾಟನ್ ಸದ್ಯ ಉಕ್ರೇನ್ ರಾಜಧಾನಿಯಾದ ಕೀವ್ ನಗರದಲ್ಲಿ ವಾಸವಾಗಿದ್ದಾನೆ. ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಕರೆ ಮಾಡುತ್ತಿದ್ದೇನೆ" ಎಂದರು.
"ಬೆಳಗ್ಗೆ ಅವನು ಅಷ್ಟು ಆತಂಕಗೊಂಡಿರಲಿಲ್ಲ. ಆದರೆ ಈಗ ಸ್ವಲ್ಪ ಭಯದಲ್ಲಿ ಇದ್ದಾನೆ. ಈಗ ಅವರ ಹತ್ತಿರದಲ್ಲಿ ಒಂದು ಏರ್ ಪೋರ್ಟ್‌ನಲ್ಲಿ ದೊಡ್ಡ ಮಿಸೈಲ್ ದಾಳಿ ಆಗಿದೆ. ಅಗತ್ಯ ವಸ್ತುಗಳ ಖರೀದಿ ಅಂಗಡಿಗಳಲ್ಲಿ ಜನರು ಭಯಗೊಂಡಿದ್ದಾರೆ" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications