ನಿವೃತ್ತಿ ವಯಸ್ಸು ಪಾಲನೆ ರಾಜ್ಯ ವಿವಿಗಳಿಗೆ ಕಡ್ಡಾಯವಲ್ಲ: ಹೈಕೋರ್ಟ್
ಬೆಂಗಳೂರು, ಜೂ.9: ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) 2018ರ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರ ನಿವೃತ್ತಿಯ ವಯಸ್ಸನ್ನು 62 ರಿಂದ 65 ಕ್ಕೆ ಹೆಚ್ಚಿಸಿರುವ ನಿಯಮವು ರಾಜ್ಯ ಸರ್ಕಾರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಿಗೆ ಕಡ್ಡಾಯವಲ್ಲ, ಅದರ ಪಾಲನೆ ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಯುಜಿಸಿ 2018ರ ನಿಯಮಗಳ ಕುರಿತು ರಾಜ್ಯ ವಿಶ್ವವಿದ್ಯಾಲಯಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ''ನಿವೃತ್ತಿಯ ವಯಸ್ಸನ್ನು ನಿಗದಿಪಡಿಸಲು ರಾಜ್ಯ ವಿಶ್ವವಿದ್ಯಾಲಯಗಳ ವಿವೇಚನೆಗೆ ಬಿಟ್ಟ ವಿಚಾರ'' ಎಂದು ಹೇಳಿದೆ. ಹಾಗಾಗಿ ''ವಿಶ್ವವಿದ್ಯಾಲಯಗಳು ಹಳೆಯ, ಅನುಭವಿಗಳನ್ನೇ ಉಳಿಸಿಕೊಳ್ಳುವುದು ವಿವೇಕಯುತವೇ ಅಥವಾ ಹೊಸಬರನ್ನು ತುಂಬಿಕೊಳ್ಳಬೇಕೇ ಎಂದು ರಾಜ್ಯ ಸರ್ಕಾರ ಮತ್ತು ಅಯಾ ವಿಶ್ವವಿದ್ಯಾಲಯಗಳ ತೀರ್ಮಾನ ಅಥವಾ ವಿಚೇಚನೆಗೆ ಬಿಡುವುದು ಒಳ್ಳೆಯದು'' ಎಂದು ಅಭಿಪ್ರಾಯಪಟ್ಟಿದೆ.
ಹುಬ್ಬಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಇತ್ತೀಚಿನವರೆಗೆ ಕೃಷಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಚಿದಾನಂದ ಪಿ.ಮನ್ಸೂರ್ ಅವರ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ನೀಡಿದೆ.

ಅಲ್ಲದೆ, ನ್ಯಾಯಪೀಠ ಇತರ ಕೆಲವು ಶಿಕ್ಷಕರ ನಿವೃತ್ತಿ ವಯಸ್ಸನ್ನು65ಕ್ಕೆ ಹೆಚ್ಚಿಸುವ ಹಕ್ಕನ್ನು ತಿರಸ್ಕರಿಸಿದ ನ್ಯಾಯಪೀಠಗಳ ಆದೇಶಗಳನ್ನು ಎತ್ತಿಹಿಡಿದಿದೆ.
ಅರ್ಜಿದಾರರ ಸೇವೆಯನ್ನು 65ವರ್ಷಗಳವರೆಗೆ ವಿಸ್ತರಿಸಲು ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿನ ವರ್ಷಗಳಿಗೆ ನಿಗದಿಪಡಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಮತ್ತು ಇತರರ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ.
''ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಘಟಕ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಸಾವಿರಾರು ಉದ್ಯೋಗಿಗಳಿದ್ದಾರೆ ಎಂದು ಹೇಳಲಾಗಿದೆ. ಅರ್ಜಿದಾರರ ಮನವಿ ಪುರಸ್ಕರಿಸಿದರೆ ಈ ಎಲ್ಲಾ ಉದ್ಯೋಗಿಗಳು ಮೂರು ವರ್ಷಗಳ ಹೆಚ್ಚುವರಿ ಅವಧಿಗೆ ಕಚೇರಿಯಲ್ಲಿ ಮುಂದುವರಿಯುತ್ತಾರೆ ಮತ್ತು ಅಂತಿಮವಾಗಿ ಹೊಸ ನೇಮಕಾತಿಗಳಿಗೆ ಯಾವುದೇ ಖಾಲಿ ಹುದ್ದೆಗಳಿರುವುದಿಲ್ಲ, ಹಾಗಾಗಿ ಅರ್ಜಿದಾರರ ಮನವಿ ಮಾನ್ಯ ಮಾಡಲಾಗದು'' ಎಂದು ನ್ಯಾಯಪೀಠ ಹೇಳಿದೆ.

ರಾಜ್ಯ ಸರ್ಕಾರ ಮತ್ತು ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಯುಜಿಸಿಯ ನಿಯಮಗಳು ತಮಗೆ ಕಡ್ಡಾಯವಲ್ಲ ಎಂಬ ವಾದವನ್ನು ಅಂಗೀಕರಿಸಿದ ನ್ಯಾಯಪೀಠ, ''ವಿಶ್ವವಿದ್ಯಾಲಯಗಳು/ಘಟಕ ಕಾಲೇಜುಗಳಲ್ಲಿನ ಶಿಕ್ಷಕರು ಯಾವ ವಯಸ್ಸಿನಲ್ಲಿ ನಿವೃತ್ತರಾಗಬೇಕು ಎಂಬುದು ಸಂಪೂರ್ಣವಾಗಿ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. ಸರ್ಕಾರ ಅವರ ಸಂಬಳ, ವೇತನ ಮತ್ತು ಭತ್ಯೆಗಳ ಬಗ್ಗೆ ಕಾಲ ಕಾಲಕ್ಕೆ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುತ್ತದೆ'' ಎಂದು ಆದೇಶಿಸಿದೆ,
ಅರ್ಜಿದಾರರ ಮನವಿ ಏನು?: ಅರ್ಜಿ ಸಲ್ಲಿಸಿದಾಗ ನಿವೃತ್ತಿ ವಯಸ್ಸು 62 ರ ಸಮೀಪದಲ್ಲಿದ್ದ ಡಾ. ಮನ್ಸೂರ್ ಅವರು ಯುಜಿಸಿಯ 2018ರ ನಿಯಮಾವಳಿ ಅನ್ವಯಿಸುವ ಮೂಲಕ ತಮಗೆ 65 ವರ್ಷದವರೆಗೆ ಸೇವೆಯಲ್ಲಿ ಮುಂದುವರಿಸಲು ರಾಜ್ಯ ಮತ್ತು ಅದರ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದರು.












Click it and Unblock the Notifications