ಉಡುಪಿ : ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ?
ಉಡುಪಿ, ಜೂನ್ 06 : ಉಡುಪಿಯಲ್ಲಿ ಖಾಸಗಿ ಬಸ್ ಪ್ರಯಾಣದರ ಹೆಚ್ಚಳವಾಗುವ ಸಾಧ್ಯತೆ ಇದೆ. ಕೆನರಾ ಬಸ್ ಮಾಲೀಕರ ಸಂಘ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದೆ. ಆದರೆ, ಈ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಮಣಿಪಾಲದಲ್ಲಿರುವ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಜಿಲ್ಲಾಧಿಕಾರಿ ಡಾ.ವಿಶಾಲ್ ಅವರಿಗೆ ಬಸ್ ಮಾಲೀಕರು ದರ ಹೆಚ್ಚಳಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. [ಖಾಸಗಿ ಬಸ್ ದರ ಏರಿಕೆಗೆ ಬೀಳಲಿದೆ ಕಡಿವಾಣ]

ಹಿಂದೆ ಬಸ್ ದರ ಏರಿಕೆ ಮಾಡಿದ ಬಳಿಕ ಈವರೆಗೆ ಡಿಸೇಲ್ ದರ ಲೀಟರ್‌ಗೆ 10 ರೂ. ಏರಿಕೆಯಾಗಿದೆ ಮತ್ತು ಶೇ.40ರಷ್ಟು ತೆರಿಗೆ ಜಾಸ್ತಿಯಾಗಿದೆ. ಆದ್ದರಿಂದ, ಪ್ರಯಾಣ ದರವನ್ನು ಹೆಚ್ಚಳ ಮಾಡಲು ಅನುಮತಿ ನೀಡಬೇಕು ಎಂದು ಬಸ್ ಮಾಲೀಕರ ಸಂಘ ಮನವಿ ಮಾಡಿದೆ. [ಮಂಗಳೂರು : ಖಾಸಗಿ ಬಸ್ ಪ್ರಯಾಣದರ ಕಡಿತ]
ಬಸ್ ಮಾಲೀಕರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಕಡ್ಡಾಯವಾಗಿ ಸಮಯಪಾಲನೆ ಮಾಡಬೇಕು ಮತ್ತು ನಿಗದಿ ಪಡಿಸಿದ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. [ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಏರಿಕೆ]
ಕೆಎಸ್ಆರ್‌ಟಿಸಿಯ ವೋಲ್ವೊ ಬಸ್ಸುಗಳು ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ ಎಂದು ಖಾಸಗಿ ಬಸ್ ಮಾಲೀಕರು ಸಭೆಯಲ್ಲಿ ಆರೋಪಿಸಿದರು. ಅಂಬಾಗಿಲು-ಕಲ್ಸಂಕ-ಉಡುಪಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ತಮ್ಮ ಮಾರ್ಗ ಬಿಟ್ಟು ಬೇರೆ ಮಾರ್ಗವಾಗಿ ಸಂಚರಿಸುತ್ತಿವೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಯಿತು.












Click it and Unblock the Notifications