ಕರ್ನಾಟಕ ಬಿಜೆಪಿ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್‌ ಸೇರ್ಪಡೆ!

ಬೆಂಗಳೂರು, ಮಾರ್ಚ್ 12: ಕರ್ನಾಟಕ ಬಿಜೆಪಿಗೆ 2024 ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಣ್ಣ ಶಾಕ್ ಆಗಿದೆ. ಪಕ್ಷದ ಇಬ್ಬರು ಮಾಜಿ ಶಾಸಕರು ಮಂಗಳವಾರ ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ. ಪಿ. ಕುಮಾರಸ್ವಾಮಿ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ. ಎಂ. ಸುಕುಮಾರ್‌ ಶೆಟ್ಟಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.

Two Karnataka BJP Former MLAs Joined Congress

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕರಾವಳಿಯ ಪ್ರಭಾವಿ ನಾಯಕ, ಬೈಂದೂರು ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿಗೆ ಟಿಕೆಟ್ ನೀಡಿರಲಿಲ್ಲ. ಎಂ. ಪಿ. ಕುಮಾರಸ್ವಾಮಿ ಸಹ ಬಿಜೆಪಿ ಟಿಕೆಟ್ ಕೈ ತಪ್ಪಿ ಜೆಡಿಎಸ್‌ನಿಂದ ಮೂಡಿಗೆರೆಯಲ್ಲಿ ಕಣಕ್ಕಿಳಿದು ಸೋತಿದ್ದರು.

ಎಂ. ಪಿ. ಕುಮಾರಸ್ವಾಮಿ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂ. ಪಿ. ಕುಮಾರಸ್ವಾಮಿ 58,783 ಮತಗಳನ್ನು ಪಡೆದು ಕಾಂಗ್ರೆಸ್‌ನ ಮೋಟಮ್ಮ (46,271 ಮತ) ಸೋಲಿಸಿದ್ದರು.

ಆದರೆ 2023ರ ಚುನಾವಣೆಯಲ್ಲಿ ಹಾಲಿ ಶಾಸಕರಾದರೂ ಬಿಜೆಪಿ ಎಂ. ಪಿ. ಕುಮಾರಸ್ವಾಮಿಗೆ ಟಿಕೆಟ್ ನೀಡಲಿಲ್ಲ. ಜೆಡಿಎಸ್‌ ಸೇರಿ ಅವರು 26038 ಮತಗಳನ್ನು ಪಡೆದು ಸೋಲುಂಡರು. ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ 50121 ಮತಗಳನ್ನು ಪಡೆದು ಸೋತರು. ಕಾಂಗ್ರೆಸ್‌ನ ನಯನ ಮೋಟಮ್ಮ 50843 ಮತಗಳನ್ನು ಪಡೆದು ಎಂ. ಪಿ. ಕುಮಾರಸ್ವಾಮಿ ಸೋಲಿಸಿ ಹಿಂದಿನ ಚುನಾವಣೆಯ ಸೇಡು ತೀರಿಸಿಕೊಂಡರು.

ಈಗ ಎಂ. ಪಿ. ಕುಮಾರಸ್ವಾಮಿ ಕಾಂಗ್ರೆಸ್ ಸೇರಿದ್ದಾರೆ. 2013ರ ಚುನಾವಣೆಯಲ್ಲಿ ಎಂ. ಪಿ. ಕುಮಾರಸ್ವಾಮಿ ಮೂಡಿಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 29,309 ಮತ ಪಡೆದಿದ್ದರು. 32,417 ಮತ ಪಡೆದ ಜೆಡಿಎಸ್‌ನ ಬಿ. ಬಿ. ನಿಂಗಯ್ಯ ವಿರುದ್ಧ ಸೋಲು ಕಂಡಿದ್ದರು.

ಬಿ. ಎಂ. ಸುಕುಮಾರ್‌ ಶೆಟ್ಟಿ: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ. ಎಂ. ಸುಕುಮಾರ್‌ ಶೆಟ್ಟಿ ಕಾಂಗ್ರೆಸ್ ಸೇರಿದರು. 2013ರ ಚುನಾವಣೆಯಲ್ಲಿ ಅವರು 51,128 ಮತಗಳನ್ನು ಪಡೆದು ಕಾಂಗ್ರೆಸ್‌ನ ಗೋಪಾಲ ಪೂಜಾರಿ (82,277 ಮತ) ವಿರುದ್ಧ ಬೈಂದೂರಿನಲ್ಲಿ ಸೋತಿದ್ದರು.

2018ರ ಚುನಾವಣೆಯಲ್ಲಿ ಪುನಃ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿ. ಎಂ. ಸುಕುಮಾರ್‌ ಶೆಟ್ಟಿ 96,029 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೆ. ಗೋಪಾಲ ಪೂಜಾರಿ (71,636 ಮತ) ಸೋಲಿಸಿದರು. ಆದರೆ ಹಾಲಿ ಶಾಸಕ ಸುಕುಮಾರ್‌ ಶೆಟ್ಟಿಗೆ 2023ರ ವಿಧಾನಸಭೆ ಚುನಾವಣೆ ಟಿಕೆಟ್ ಕೈತಪ್ಪಿತು.

ಬಿಜೆಪಿ ಗುರುರಾಜ ಶೆಟ್ಟಿ ಗಂಟಿಹೊಳೆಗೆ ಟಿಕೆಟ್ ನೀಡಿತು. ಅವರು 98628 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೆ. ಗೋಪಾಲ ಪೂಜಾರಿ (82475 ಮತ) ಸೋಲಿಸಿದರು. ಚುನಾವಣೆ ಬಳಿಕ ರಾಜಕೀಯದಿಂದ ದೂರವಾಗಿದ್ದ ಬಿ. ಎಂ. ಸುಕುಮಾರ್‌ ಶೆಟ್ಟಿ ಇಂದು ಕಾಂಗ್ರೆಸ್ ಸೇರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ.

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಎಂ. ಪಿ. ಕುಮಾರಸ್ವಾಮಿ, ಬಿ. ಎಂ. ಸುಕುಮಾರ್‌ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಬಿಜೆಪಿ ಮೇಲೆ ಹೇಗೆ ಪರಿಣಾಮ ಬೀರಲಿದೆ? ಎಂದು ಕಾದು ನೋಡಬೇಕಿದೆ. ಮೂಡಿಗೆರೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ವ್ಯಾಪ್ತಿಗೆ ಸೇರಲಿದ್ದು, ಚಿಕ್ಕಮಗಳೂರಿನಲ್ಲಿ ಬಿಜೆಪಿ, ಉಡುಪಿಯಲ್ಲಿ ಕಾಂಗ್ರೆಸ್‌ ಶಾಸಕರು ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+