ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ: ಸಿದ್ದರಾಮಯ್ಯ ಪ್ರತಿಕ್ರಿಯೆ
ಇಬ್ಬರು ಶಾಸಕರ ನಡುವೆ ಮಾರಾಮಾರಿ: ಸಿದ್ದರಾಮಯ್ಯ ಪ್ರತಿಕ್ರಿಯೆ
ಕೊಪ್ಪಳ, ಜ 20: ತಮ್ಮ ಪಕ್ಷದ ಇಬ್ಬರು ಶಾಸಕರ ನಡುವೆ ಗಲಾಟೆ ನಡೆದಿರುವ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ. ಆ ಮೂಲಕ, ಒಬ್ಬರು ಕಾಂಗ್ರೆಸ್ ನಾಯಕರಾದರೂ ಇದ್ದದ್ದನ್ನು ಇದ್ದ ಹಾಗೇ ಒಪ್ಪಿಕೊಂಡಂತಾಗಿದೆ.
ಜಿಲ್ಲೆಯ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಶನಿವಾರ ತಡರಾತ್ರಿಯೇ ಮಾರಾಮಾರಿಯಾದ ಬಗ್ಗೆ ಮಾಹಿತಿ ಬಂದಿದೆ, ಮಾಧ್ಯಮಗಳಿಂದಲೂ ಈ ವಿಚಾರ ಗೊತ್ತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಬಳ್ಲಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮತ್ತು ಅವರ ಆಪ್ತ ಕಂಪ್ಲಿ ಕ್ಷೇತ್ರದ ಶಾಸಕ ಜೆ ಎನ್ ಗಣೇಶ್ ನಡುವೆ ಫೈಟ್ ನಡೆದಿರುವ ಬಗ್ಗೆ ಮಾಹಿತಿಯಿದೆ. ಇದರಲ್ಲಿ ಯಾರದ್ದು ತಪ್ಪು ಎನ್ನುವುದು ಸದ್ಯಕ್ಕೆ ನನಗೆ ತಿಳಿದಿಲ್ಲ.
ಬೆಂಗಳೂರಿಗೆ ಹೋದ ನಂತರ, ಎಲ್ಲಾ ವಿಚಾರವನ್ನು ತಿಳಿದುಕೊಂಡು, ನಮ್ಮ ನಾಯಕರ ಬಳಿಯೂ ಮಾತನಾಡಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಮತ್ತು ಆರ್ ಎಸ್ ಎಸ್ ನವರಿಗೆ ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲ, ಅವರೇನು ನಮ್ಮ ಬಗ್ಗೆ ಮಾತನಾಡುವುದು ಎಂದು ಬಿಜೆಪಿ ವಿರುದ್ದ ಕೆಂಡಕಾರಿರುವ ಸಿದ್ದರಾಮಯ್ಯ, ಹೇಗಾದರೂ ಮಾಡಿ ಮುಖ್ಯಮಂತ್ರಿಯಾಗಬೇಕು ಎನ್ನುವ ಯಡಿಯೂರಪ್ಪನವರಿಗೆ ಅದ್ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರು ಪಾರ್ಟಿ ಮಾಡುವ ವೇಳೆ ಆನಂದ್ ಸಿಂಗ್ ಮತ್ತು ಗಣೇಶ್ ನಡುವೆ ಮಾತಿನ ಚಕಮಕಿ ನಡೆದು, ಬಾಟಲಿಯಲ್ಲಿ ಹೊಡೆದಾಡಿಕೊಂಡಿದ್ದರು. ಈ ವೇಳೆ ಆನಂದ್ ಸಿಂಗ್‌ಗೆ ಗಾಯವಾಗಿದ್ದು, ಭಾನುವಾರ (ಜ 20) ಬೆಳಗ್ಗೆ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.












Click it and Unblock the Notifications