ಉಪಚುನಾವಣೆ ಫಲಿತಾಂಶ ಯಡಿಯೂರಪ್ಪನವರ ರಾಜಕೀಯ ಭವಿಷ್ಯದ ದಿಕ್ಸೂಚಿ
ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಉಪಚುನಾವಣೆಯ ಫಲಿತಾಂಶದ ಮೇಲೆ ಹಲವು ಹಿರಿಯ ನಾಯಕರ ಭವಿಷ್ಯ ಅಡಗಿದೆ. ಅದರಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಕೂಡಾ.
ಶಿರಾ ಮತ್ತು ರಾಜರಾಜೇಶ್ವರಿ ನಗರದ ಚುನಾವಣೆಯ ಫಲಿತಾಂಶ ನೇರವಾಗಿ ಸರಕಾರದ ಆಯುಸ್ಸಿಗೆ ತೊಂದರೆ ತರದಿದ್ದರೂ, ಇದರ ಸೋಲು ಗೆಲುವು ಹಲವು ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಲಿದೆ.
ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರ ನೇತೃತ್ವದ ಸರಕಾರಕ್ಕೆ, ಮೊದಲಿನಿಂದಲೂ ಬಿಜೆಪಿ ವರಿಷ್ಠರ ಸಹಕಾರ ಅಷ್ಟಕಷ್ಟೇ. ನೆರೆ ಪರಿಹಾರ, ಸಂಪುಟ ವಿಸ್ತರಣೆ ಸೇರಿದಂತೆ, ಹಲವು ವಿಚಾರದಲ್ಲಿ ಇದು ಸಾಬೀತಾಗಿ ಹೋಗಿದೆ.
ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ ನಾಗರಾಜ್ ಪರಿಷತ್ತಿಗೆ ಆಯ್ಕೆಯಾದ ನಂತರ, ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆಗಾಗಿ ದೆಹಲಿಗೆ ತೆರಳಿದ್ದರು. ಅಲ್ಲಿ ಅವರಿಗೆ ನಿರೀಕ್ಷಿತ ಸಹಕಾರ ಬಿಜೆಪಿ ಹೈಕಮಾಂಡ್ ನಿಂದ ಸಿಗಲಿಲ್ಲ. ಇನ್ನು, ಮುಖ್ಯಮಂತ್ರಿ ಬದಲಾವಣೆಯ ವಿಚಾರ, ಅಲ್ಲಲ್ಲಿ ಚಾಲ್ತಿಯಲ್ಲಿ ಇರುವುದರಿಂದ, ಉಪಚುನಾವಣೆಯ ಫಲಿತಾಂಶ ಬಿಎಸ್ವೈಗೆ ನಿರ್ಣಾಯಕವಾಗುವ ಸಾಧ್ಯತೆಯಿಲ್ಲದಿಲ್ಲ.

ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ವಿರೋಧ ಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ವಿರುದ್ದ ಪ್ರಚಾರ ಮಾಡಲು ಆರಂಭಿಸಿದವು. ಯತ್ನಾಳ್ ಹೇಳಿಕೆ ನೀಡುತ್ತಿದ್ದರೂ, ಅದನ್ನು ತಡೆಯುವ ಕೆಲಸಕ್ಕೆ ಬಿಜೆಪಿ ಮುಖಂಡರು ಮುಂದಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಕೂಡಾ ಆರೋಪಿಸಿದ್ದರು.

ಮುನಿರತ್ನ ಅವರನ್ನು ಆಯ್ಕೆಮಾಡಲು ಯಡಿಯೂರಪ್ಪ ಬಹಳ ಸಾಹಸ
ಎರಡು ಉಪಚುನಾವಣೆಯ ಫಲಿತಾಂಶ, ಪ್ರಮುಖವಾಗಿ ಯಡಿಯೂರಪ್ಪನವರಿಗೆ ಮಹತ್ವದ್ದು. ಎರಡರಲ್ಲಿ ಒಂದು ಕ್ಷೇತ್ರ ಆಪರೇಶನ್ ಕಮಲಕ್ಕೆ ಒಳಗಾಗಿದ್ದು. ರಾಜರಾಜೇಶ್ವರಿ ನಗರ ಸೀಟಿಗೆ ಅಭ್ಯರ್ಥಿಯನ್ನಾಗಿ ಮುನಿರತ್ನ ಅವರನ್ನು ಆಯ್ಕೆಮಾಡಲು ಯಡಿಯೂರಪ್ಪ ಬಹಳ ಸಾಹಸ ಪಟ್ಟಿದ್ದರು. ಯಾಕೆಂದರೆ, ರಾಜ್ಯಾಧ್ಯಕ್ಷರ ಆಯ್ಕೆ ಇನ್ನೊಂದಾಗಿತ್ತು.

ಯಡಿಯೂರಪ್ಪ, ರಾಜ್ಯ ಬಿಜೆಪಿಗೆ ಎಷ್ಟು ಮುಖ್ಯ
ಎರಡೂ ಕ್ಷೇತ್ರವನ್ನು ಬಿಜೆಪಿ ಗೆದ್ದಿದ್ದೇ ಆದಲ್ಲಿ, ಯಡಿಯೂರಪ್ಪ, ರಾಜ್ಯ ಬಿಜೆಪಿಗೆ ಎಷ್ಟು ಮುಖ್ಯ ಎನ್ನುವುದನ್ನು ಮತ್ತೆಮತ್ತೆ ಸಾರುವಂತೆ ಮಾಡುವುದಂತೂ ಹೌದು. ಜೊತೆಗೆ, ವರಿಷ್ಠರ ಮಟ್ಟದಲ್ಲಿ ಮತ್ತೆ ತನ್ನ ಖದರ್ ಅನ್ನು ಬಿಎಸ್ವೈ ತೋರಬಹುದು. ಹಾಗೆಯೇ, ಸಂಪುಟ ವಿಸ್ತರಣೆ ಸೇರಿದಂತೆ, ಹಲವು ಕೆಲಸಗಳು ಮುಂದಿನ ದಿನಗಳಲ್ಲಿ ಸಲೀಸಾಗಿ ನಡೆಯಬಹುದು.
Recommended Video

ಉಪಚುನಾವಣೆ ಫಲಿತಾಂಶ ಯಡಿಯೂರಪ್ಪನವರ ರಾಜಕೀಯ ಭವಿಷ್ಯದ ದಿಕ್ಸೂಚಿ
ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾದಲ್ಲಿ, ಮತ್ತೆ ಮುಖ್ಯಮಂತ್ರಿ ಬದಲಾವಣೆ ವಿಚಾರ ವೇಗ ಪಡೆದುಕೊಳ್ಳಬಹುದು. ರಾಜ್ಯ ಬಿಜೆಪಿಗೆ ಪ್ರಶ್ನಾತೀತ ನಾಯಕನಂತಿರುವ ಯಡಿಯೂರಪ್ಪನವರ ವಿರುದ್ದದ ಗ್ಯಾಂಗ್, ಸಿಎಂ ಬದಲಾವಣೆಗೆ ಕೇಂದ್ರ ಬಿಜೆಪಿ ನಾಯಕರ ಮೇಲೆ ಒತ್ತಡವನ್ನು ಹೇರಬಹುದು. ಹಾಗಾಗಿ, ಉಪಚುನಾವಣೆಯ ಫಲಿತಾಂಶ ಯಡಿಯೂರಪ್ಪನವರ ರಾಜಕೀಯ ಭವಿಷ್ಯದ ದಿಕ್ಸೂಚಿಯಾಗುವ ಸಾಧ್ಯತೆಯಿದೆ.












Click it and Unblock the Notifications