ನನ್ನ ರಾಜಕೀಯ ತೆರೆದ ಪುಸ್ತಕ, ಸಿಎಂ: ಅದರಲ್ಲಿರುವುದು ಭ್ರಷ್ಟಾಚಾರದ ಪುಟ, ಬಿಎಸ್ವೈ
ಬಿಜೆಪಿ ಮತ್ತು ಕಾಂಗ್ರೆಸ್, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ನಡುವಿನ ವಾಕ್ಸಮರ ತಮ್ಮತಮ್ಮ ಪಕ್ಷಗಳ ವೇದಿಕೆಯ ಜೊತೆ, ಟ್ವಿಟ್ಟರ್ ನಲ್ಲೂ ಮುಂದುವರಿದಿದೆ.
ಯೋಗಿ ರೆಸಿಪಿ, ಸಿದ್ದು ಬೀಫ್ ಬಿರಿಯಾನಿಯ ನಂತರ, ಇಬ್ಬರೂ ಮಾಜಿ ಮತ್ತು ಹಾಲೀ ಸಿಎಂಗಳು ಒಬ್ಬರು ಇನ್ನೊಬ್ಬರ ಕಾಲೆಳೆದಿದ್ದಾರೆ. ಇಬ್ಬರ ಟ್ವೀಟಿಗೆ ಅವರವರ ಫಾಲೋವರ್ಸ್ ಮತ್ತು ವಿರೋಧಿಗಳು ತಮ್ಮದೇ ರೀತಿಯಲ್ಲಿ ರಿಪ್ಲೈ ಮಾಡಿದ್ದಾರೆ.
ನನ್ನ ರಾಜಕೀಯ 'ತೆರೆದ ಪುಸ್ತಕ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಜ 24) ಮಾಡಿರುವ ಟ್ವೀಟಿಗೆ, ತಮ್ಮ ಅಕೌಂಟಿನಿಂದ ಕಿಚಾಯಿಸಿರುವ ಹಾಲೀ ಸಿಎಂ ಬಿ ಎಸ್ ಯಡಿಯೂರಪ್ಪ, ' ಸಿದ್ದರಾಮಯ್ಯನವರ ತೆರೆದ ಪುಸ್ತಕದ ಆಡಳಿತದಲ್ಲಿ ಭ್ರಷ್ಟಾಚಾರದ ಲೆಕ್ಕವೇ ಹೆಚ್ಚಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ.
ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿದೆ. ಈ ಜಿಲ್ಲೆಗಳಲ್ಲಿ ಆ ಪಕ್ಷಕ್ಕೆ ಅಭ್ಯರ್ಥಿಗಳೇ ಇಲ್ಲ. ಹೀಗಾಗಿ ಪರಿವರ್ತನಾ ಯಾತ್ರೆಯಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಗುಡುಗಿದ್ದಾರೆ.
ಪರಿವರ್ತನಾ ಯಾತ್ರೆಯಲ್ಲಿ, ಅಂಕಿ ಅಂಶಗಳ ಆಧಾರ ಸಮೇತ ನಾನು ಮಾತಾಡಿದ್ದರಿಂದ ದಿನೇ ದಿನೇ ಕಾಂಗ್ರೆಸ್ ಮುಖವಾಡ ಕಳಚಿ ಬೀಳುತ್ತಿದೆ. ಅದರ ಆತಂಕ ಮುಖ್ಯಮಂತ್ರಿಗಳ ವಾಕ್ಯಗಳಲ್ಲಿ ಗೋಚರವಾಗುತ್ತಿದೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಇಬ್ಬರು ಮುಖಂಡರ, ಟ್ವೀಟ್ ಸಮರದ ಸ್ಯಾಂಪಲ್ ಮುಂದಿದೆ..

ನನ್ನ ರಾಜಕೀಯ ತೆರೆದ ಪುಸ್ತಕ, ನನ್ನ ಹಿನ್ನೆಲೆ ಏನು ಎಂದು ರಾಜ್ಯಕ್ಕೆ ಗೊತ್ತಿದೆ
ನಾನು ಏನು,ರಾಜಕಾರಣದಲ್ಲಿ ಹೇಗೆ ಬದುಕುತ್ತಿದ್ದೇನೆ,ನನ್ನ ಹಿನ್ನೆಲೆ ಏನು ಎಂಬುದು ಇಡೀ ರಾಜ್ಯ,ದೇಶದ ಜನರಿಗೆ ಗೊತ್ತಿದೆ. ನನ್ನ ರಾಜಕೀಯ ತೆರೆದ ಪುಸ್ತಕ. ಹೀಗಿರುವಾಗ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ನಾಯಕರು ನನ್ನ ಬಗ್ಗೆ ಹೇಳುವ ಸುಳ್ಳುಗಳನ್ನು ಜನ ನಂಬುವುದಿಲ್ಲ. ನಾನು ನಿನ್ನೆ,ಮೊನ್ನೆ ಅಧಿಕಾರಕ್ಕೆ ಬಂದಿಲ್ಲ - ಸಿಎಂ ಟ್ವೀಟ್.

ಭ್ರಷ್ಟಾಚಾರದ ಲೆಕ್ಕವೇ ಹೆಚ್ಚಾಗಿದೆ, ಬಿಎಸ್ವೈ ಲೇವಡಿ
ಸಿದ್ದರಾಮಯ್ಯನವರ ತೆರೆದ ಪುಸ್ತಕದ ಆಡಳಿತದಲ್ಲಿ ಭ್ರಷ್ಟಾಚಾರದ ಲೆಕ್ಕವೇ ಹೆಚ್ಚಾಗಿದೆ. ಹಲವು ದಕ್ಷ ಐಎಎಸ್-ಐಪಿಎಸ್ ಅಧಿಕಾರಿಗಳ ಸಾವು ಮತ್ತು ಇತ್ತೀಚೆಗೆ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿಯವರ ವರ್ಗಾವಣೆಯ ಬಗ್ಗೆ ಮುಖ್ಯಮಂತ್ರಿ ಚಕಾರ ಎತ್ತಲಿಲ್ಲ, ಎತ್ತುವುದೂ ಇಲ್ಲ. @siddaramaiah, ತೆರೆದ ಪುಸ್ತಕದ ರಾಜಕೀಯ ಎಂದರೆ ಇದೇ? - ಯಡಿಯೂರಪ್ಪ ಟ್ವೀಟ್

ರಾಜ್ಯದ ಪಾಲೂ ಸಮವಾಗಿರುತ್ತದೆ ಎನ್ನುವ ಸಿಎಂ
ಕೇಂದ್ರ ನೀಡುತ್ತಿರುವ ಅನುದಾನದಲ್ಲಿ ರಾಜ್ಯದ ಪಾಲೂ ಸಮವಾಗಿರುತ್ತದೆ ಎನ್ನುವ @siddaramaiah, ಅನ್ನಭಾಗ್ಯ ಯೋಜನೆಯ ಬಗ್ಗೆ ಏಕೆ ತುಟಿ ಬಿಚ್ಚುವುದಿಲ್ಲ? ಅನ್ನಭಾಗ್ಯ ಅಕ್ಕಿಗೆ ಕೇಂದ್ರದ ಪಾಲು: ರು. 29, ರಾಜ್ಯ ಸರ್ಕಾರದ ಪಾಲು: ರು. 3, ಗೋದಿಗೆ ಕೇಂದ್ರದ ಪಾಲು: ರು. 22, ರಾಜ್ಯದ ಪಾಲು: ರು. 2, ಸಮಪಾಲು ಎಂಬ ಪದಕ್ಕಾದರೂ ಗೌರವ ಬೇಡವೇ? - ಯಡಿಯೂರಪ್ಪ ಪ್ರಶ್ನೆ.

ಬಿಜೆಪಿಯವರು ವಿಧಾನ ಮಂಡಲ ಅಧಿವೇಶನದಲ್ಲಿ ಕೇಳಲಿ
ಕೇಂದ್ರದಿಂದ ಬಂದಿರುವ ಅನುದಾನ ಎಷ್ಟು, ಅದರಲ್ಲಿ ಎಷ್ಟು ವೆಚ್ಚವಾಗಿದೆ ಎಂಬುದನ್ನು ಬಿಜೆಪಿಯವರು ವಿಧಾನ ಮಂಡಲ ಅಧಿವೇಶನದಲ್ಲಿ ಕೇಳಲಿ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರದ ಪಾಲು ಎಷ್ಟು ಇರುವುದೋ ರಾಜ್ಯದ ಪಾಲು ಸಹ ಅಷ್ಟೇ ಇರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದವರು. ಅವರ ಜವಾಬ್ದಾರಿ ಅರಿತು ಮಾತನಾಡಲಿ - ಸಿಎಂ ತಿರುಗೇಟು.

ಅವರ ಮಟ್ಟಕ್ಕೆ ಹೋಗಿ ನಾನು ಮಾತನಾಡಲಾರೆ, ಸಿಎಂ
ನಾವು ಇನ್ನೊಬ್ಬರನ್ನು ಟೀಕಿಸುವಾಗ ನಮ್ಮ ಬೆನ್ನು ಹೇಗಿದೆ, ಸಾರ್ವಜನಿಕ ಜೀವನದಲ್ಲಿ, ರಾಜಕೀಯದಲ್ಲಿ ಹೇಗಿದ್ದೇನೆ ಎಂದು ನೋಡಿಕೊಂಡು ಮಾತನಾಡಬೇಕು. ಶ್ರೀನಿವಾಸ ಪ್ರಸಾದ್ ಸೋಲಿನ ಹತಾಶೆಯಿಂದ ನನ್ನ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡುತ್ತಾರೆ. ಅವರ ಮಟ್ಟಕ್ಕೆ ಹೋಗಿ ನಾನು ಮಾತನಾಡಲಾರೆ. ನನ್ನ ಸಂಪುಟದಲ್ಲಿ ಮಂತ್ರಿಯಾಗಿದ್ದಾಗ ಏಕೆ ಮಾತನಾಡಲಿಲ್ಲ- ಮುಖ್ಯಮಂತ್ರಿಗಳ ಸಲಹೆ.

ಮೋದಿಯವರನ್ನು ನರಹಂತಕ ಎಂದು ವಿಷ ಕಾರುವಾಗ ನಿಮ್ಮ ಪ್ರಜ್ಞೆ ಎಲ್ಲಿತ್ತು
ನಾವು ಇನ್ನೊಬ್ಬರನ್ನು ಟೀಕಿಸುವಾಗ ನಮ್ಮ ಬೆನ್ನು ಹೇಗಿದೆ ಎಂದು ನೋಡಿಕೊಳ್ಳಬೇಕು ನಿಜ ಮುಖ್ಯಮಂತ್ರಿಗಳೇ. ಹಿಂದೆ ಮೋದಿಯವರನ್ನು ನರಹಂತಕ ಎಂದು ಮನದಲ್ಲಿರುವ ವಿಷ ಕಾರುವಾಗ ನಿಮ್ಮ ಪ್ರಜ್ಞೆ ಎಲ್ಲಿತ್ತು?ಕಷ್ಟ ಕಾಲದಲ್ಲಿ ನಿಮ್ಮೊಂದಿಗಿದ್ದ ಶ್ರೀನಿವಾಸ್ ಪ್ರಸಾದ್‌ರ ಕಡೆ ಈಗ ಬೆಟ್ಟು ಮಾಡುತ್ತಿರುವುದು ನಿಮ್ಮ ರಾಜಕೀಯ ಮುಖವಾಡಗಳನ್ನು ತೋರುತ್ತಿದೆ - ಯಡಿಯೂರಪ್ಪ ತಿರುಗೇಟು.












Click it and Unblock the Notifications