ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೊರವನಹಳ್ಳಿ ದೇವಸ್ಥಾನದಲ್ಲಿ ಅಸಲಿಗೆ ನಡೆದಿದ್ದೇನು?

By Srinath
|
Google Oneindia Kannada News

ತುಮಕೂರು, ನ.28: ಇಲ್ಲಿನ ಸುಪ್ರಸಿದ್ಧ ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದಲ್ಲಿ ನಿನ್ನೆ ಬುಧವಾರ ಭಕ್ತರ ಸಂಖ್ಯೆ ಹೆಚ್ಚಾಗಿ ಕಾಲ್ತುಳಿತದಲ್ಲಿ ಮಗುವೊಂದು ಮೃತಪಟ್ಟಿತು ಎಂದು ವರದಿಯಾಗಿತ್ತು. ಆದರೆ ಅಸಲಿಗೆ ಅಲ್ಲಿ ನಡೆದಿದ್ದೇನು? ಎಂದು ನೋಡಿದಾಗ ಖಾಸಗಿ ಚಾನೆಲಿನಲ್ಲಿ ಗುರೂಜಿಯೊಬ್ಬರು ಮಾಡಿರುವೆ ಎಡವಟ್ಟು ಕಾಣಿಸಿಕೊಳ್ಳುತ್ತದೆ. ಜತೆಗೆ, ಕಾಲ್ತುಳಿತವಾಗುವಷ್ಟು ಜನಜಂಗುಳಿಯಾಗಿದ್ದೇನೋ ನಿಜ. ಆದರೆ ಮಗು ಸತ್ತಿಲ್ಲ ಎಂಬ ಸಮಾಧಾನಕರ ಸಂಗತಿಯೂ ಕಾಣಬರುತ್ತದೆ.

'ಕೊರಟಗೆರೆ ಬಳಿಯ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯದಲ್ಲಿ ಬುಧವಾರ ಮಧ್ಯಾಹ್ನ 12ಕ್ಕೆ ಸರಿಯಾಗಿ ಮಹಾಲಕ್ಷ್ಮಿ ಪ್ರತ್ಯಕ್ಷವಾಗುತ್ತಾಳೆ' ಎಂದು ಖಾಸಗಿ ವಾಹಿನಿಯೊಂದರ ಗುರೂಜಿ ಹೇಳಿದ್ದರು. ಅದನ್ನು ನಂಬಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಜಮಾಯಿಸಿದ್ದರು. ಆ ಭಕ್ತರಿಗೆ ಕೂರಲು, ನಿಲ್ಲಲು ಜಾಗವಿಲ್ಲದೆ, ನೀರು, ಊಟ ತಿಂಡಿಯೂ ಇಲ್ಲದೆ ಪರದಾಡಿದರು. ದೇವಾಲಯದವರು ಜನಜಂಗುಳಿ ನೋಡಿ ಅಸಾಯಕರಾಗಿ ಕೈಚೆಲ್ಲಿದರು. ಪೊಲೀಸರು ಸಹ ಭಕ್ತರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.

tumkur-goravanahalli-mahalakshmi-temple-stampede-how-and-why

ದೇವಾಲಯ ಟ್ರಸ್ಟ್‌ ರಜತ ಮಹೋತ್ಸವದ ಅಂಗವಾಗಿ ನ. 27ರಿಂದ ಮೂರು ದಿನಗಳ ಕಾಲ ರಜತೋತ್ಸವ, ಲಕ್ಷ ದೀಪೋತ್ಸವ, ಮುತ್ತಿನ ಪಲ್ಲಕಿ ಉತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಮುಂತಾದ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಮೊದಲ ದಿನದ ಕಾರ್ಯಕ್ರಮವಾಗಿ ಮಹರ್ಷಿ ಡಾ. ಆನಂದ ಗುರೂಜಿ ಕಾರ್ತಿಕ ಮಾಸದ ಬುಧವಾರ ವಿಶೇಷ ಮಹಾಲಕ್ಷ್ಮಿ ಪೂಜೆಯನ್ನು ದೇವಾಲಯದಲ್ಲಿ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಪೂಜಾ ಸಾಮಗ್ರಿಗಳ ಸಹಿತ ಪಾಲ್ಗೊಂಡರೆ ಕ್ಷೇತ್ರದ ಹುತ್ತದಲ್ಲಿ ನೆಲೆಸಿರುವ ಮಹಾಲಕ್ಷ್ಮಿ ಭಕ್ತರ ಮನೋಕಾಮನೆಯನ್ನು ಈಡೇರಿಸುವಳು ಎಂದು ಖಾಸಗಿ ವಾಹಿನಿಯಲ್ಲಿ ಆನಂದ ಗುರೂಜಿ ಘೋಷಿಸಿದ್ದರು. ಜತೆಗೆ, ಮಹರ್ಷಿ ಆನಂದರು ಭಕ್ತರಿಗೆ ಉಂಗುರ ನೀಡಲಿದ್ದು, ಅದನ್ನು ಧರಿಸಿರುವುದರಿಂದ ಎಲ್ಲ ಕಾಯಿಲೆಗಳು ವಾಸಿಯಾಗುತ್ತವೆ ಎಂದೂ ಹೇಳಲಾಗಿತ್ತು.

ಇದನ್ನೆಲ್ಲಾ ನಂಬಿ ಲಕ್ಷಾಂತರ ಮಂದಿ ಆಗಮಿಸಿದ್ದರು. ದೇವಸ್ಥಾನದಿಂದ ಸುಮಾರು ಹತ್ತಾರು ಕಿ. ಮೀ. ವರೆಗೂ ವಾಹನಗಳ ಸಾಲು ನಿಂತಿತ್ತು. ಇದರಿಂದ ಶೇ. 60ಕ್ಕೂ ಹೆಚ್ಚು ಭಕ್ತರಿಗೆ ದೇವಿಯ ದರ್ಶನ ಪಡೆಯಲು ಸಾಧ್ಯವಾಗಲೇ ಇಲ್ಲ. ಗುರೂಜಿಯನ್ನು ಸಹ ನೋಡಲಾಗಲಿಲ್ಲ. ಕೊನೆಗೆ ದೇವಸ್ಥಾನದ ಟ್ರಸ್ಟಿನವರಿಗೆ ಭಕ್ತರು ಹಿಡಿಶಾಪ ಹಾಕಿ, ಸಮಾಧಾನಪಟ್ಟುಕೊಂಡರು.

ಕೊರಟಗೆರೆಯಿಂದ ಗೊರವನಹಳ್ಳಿಗೆ ಸಾಮಾನ್ಯವಾಗಿ ಆಟೋದವರು 10-20 ರೂ. ತೆಗೆದುಕೊಳ್ಳುತ್ತಾರೆ. ಆದರೆ ನಿನ್ನೆ ಆಟೋದವರು 50 ರಿಂದ 1೦೦ ರೂ. ವರೆಗೂ ಹಣ ವಸೂಲಿ ಮಾಡಿದ್ದಾರೆ. ಆದರೂ ವಾಹನಗಳು ಸಾಲುಗಟ್ಟಿದ್ದರಿಂದ ಅರ್ಧದಲ್ಲೇ ಕೈಬಿಟ್ಟು ಹೋಗಿದ್ದಾರೆ. ಇನ್ನು ಟೆಂಪೋ ಟ್ರಾವೆಲ್ಸ್ ಮುಂತಾದ ವಾಹನಗಳು 200 ರೂ. ವರೆಗೂ ವಸೂಲಿ ಮಾಡಿವೆ. 7-8 ಕಿ.ಮೀ. ನಡೆದು ಬಂದರೂ ದೇವಸ್ಥಾನ ತಲುಪಲಾಗದೆ ಭಕ್ತರು ಗುರೂಜಿ ಹಾಗೂ ದೇವಾಲಯದವರಿಗೆ ಹಿಡಿ ಶಾಪ ಹಾಕುತ್ತಿದ್ದುದು ಕಂಡುಬಂದಿತು. ಕೆಲವರಂತೂ ಇನ್ನೆಂದಿಗೂ ಗೊರವನಹಳ್ಳಿಗೆ ಕಾಲಿಡುವುದಿಲ್ಲ ಎಂದೂ ಬೇಸರ ವ್ಯಕ್ತಪಡಿಸಿದರು.

ಬಿಸಿಲಿನಲ್ಲಿ ಬಸವಳಿದ ಮಹಿಳೆಯರು, ಮಕ್ಕಳು, ವೃದ್ಧರು ಅಲ್ಲಲ್ಲೇ ಕುಳಿತುಕೊಂಡಿದ್ದು, ಕುಡಿಯಲು ನೀರಿಲ್ಲದೆ, ಊಟ, ತಿಂಡಿಯೂ ಇಲ್ಲದೆ ತೀವ್ರ ತೊಂದರೆ ಅನುಭವಿಸಿದರು. ಇತ್ತ ದೇವಸ್ಥಾನ ತಲುಪಲಾಗದೆ, ಅತ್ತ ಊರಿಗೂ ಹೋಗಲಾಗದೆ ಭಕ್ತರು ತೀವ್ರ ಪಡಿಪಾಟಲು ಅನುಭವಿಸಿದ್ದಾರೆ. ಈ ವೇಳೆ ತಹಶೀಲ್ದಾರ್ ಬಿಕೆ ರಾಮಚಂದ್ರಪ್ಪ ಧಾವಿಸಿ ಅರ್ಧದಿಂದಲೇ ಬೇರೆ ಬಸ್ಸುಗಳನ್ನು ತರಿಸಿ ಸಾಧ್ಯವಾದಷ್ಟು ಜನರನ್ನು ಊರಿಗೆ ವಾಪಸ್ಸು ಕಳುಹಿಸಲು ವ್ಯವಸ್ಥೆ ಮಾಡಿದರು.

ಕೊರಟಗೆರೆ ಠಾಣಾಧಿಕಾರಿ ಚಂದ್ರಶೇಖರ್ ಹಾಗೂ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಎಷ್ಟೇ ಪ್ರಯತ್ನಿಸಿದರೂ ನೂಕುನುಗ್ಗಲು ತಪ್ಪಿಸಲು ಸಾಧ್ಯವಾಗಲಿಲ್ಲ. ನಿರೀಕ್ಷೆಗೂ ಮೀರಿದ ಜನ ಬಂದಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ದೇವಸ್ಥಾನದ ಟ್ರಸ್ಟ್‌ ನವರು ಮೊದಲೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು ಎಂದು ಹಲವಾರು ಮಂದಿ ಆಕ್ಷೇಪಿಸಿದರು.

English summary
Though yesterday it was reported that due to stampede at Tumkur Goravanahalli Maha Lakshmi temple a kid was killed it was not so. But what went wrong in the Temple was Dr. Anand Guruji, a well known astrologer had said in a local TV Channel that yeterday (Nov 27) was very auspicious and goddess Maha Lakshmi will surface at the temple. Taking the cue lakhs of devotees had gathered at the Temple resulting in stampede.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X