ಬಿಜೆಪಿಯ ಮೈಸೂರು ಪಾದಯಾತ್ರೆಗೆ ಟಕ್ಕರ್: ಇಂದಿನಿಂದ ಮೈತ್ರಿ ವಿರುದ್ಧ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ
ಬೆಂಗಳೂರು, ಆಗಸ್ಟ್ 02: ಮೂಡಾ ಹಗರಣದ ಕುರಿತು ಬಿಜೆಪಿ ಹಾಗೂ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆಗೆ ಮುಂದಾಗಿದೆ. ಇತ್ತ ಮೈತ್ರಿ ಪಾದಯಾತ್ರೆಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ.
ಈ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಇಂದಿನಿಂದ(ಜುಲೈ 02)ಬಿಜೆಪಿ ನಾಯಕರ ನೈತಿಕತೆ ಪ್ರಶ್ನಿಸುವ ಸಭೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾಲದ ಅಕ್ರಮ, ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಸಂವಿಧಾನ ಸಂಸ್ಥೆಗಳ ದುರ್ಬಳಕೆ ಬಗ್ಗೆ ಪ್ರಶ್ನೆ ಮಾಡುತ್ತೇವೆ ಎಂದು ತಿಳಿಸಿದರು.

ಶುಕ್ರವಾರ ಬಿಡದಿಯಲ್ಲಿ ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಹಗರಣ, ಅನ್ಯಾಯಗಳ ಬಗ್ಗೆ ಪ್ರಶ್ನೆ ಮಾಡಿ ಜನರಿಗೆ ತಿಳಿಸುತ್ತೇವೆ. ನಮ್ಮ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಬಿಜೆಪಿ ನಾಯಕರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೋ ಅಲ್ಲಿ ಒಂದೊಂದು ದಿನ ಮುಂಚಿತವಾಗಿ ಈ ಕಾರ್ಯಕ್ರಮ ಮಾಡುತ್ತೇವೆ. ಆಗಸ್ಟ್ 2ರಂದು ಬಿಡದಿ, 3ರಂದು ರಾಮನಗರ, 4ರಂದು ಚನ್ನಪಟ್ಟಣ, 5ರಂದು ಮದ್ದೂರು, 6ರಂದು ಮಂಡ್ಯದಲ್ಲಿ, 9ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾವ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜನರಿಗೆ ತಿಳಿಸುತ್ತೇವೆ. ಪ್ರತಿನಿತ್ಯ ಸಚಿವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಶಾಸಕರು ಹಾಗು ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪಾದಯಾತ್ರೆ ಘೋಷಣೆ ಮಾಡಿದ್ದಾರೆ. ಇಷ್ಟುದಿನ ಕೇಂದ್ರ ಸಚಿವರಾದ ಕುಮಾರಸ್ವಾಮಿ ಹಾಗೂ ಜೆಡಿಎಸ್ ನವರು ಈ ವಿಚಾರದಲ್ಲಿ ಅತಂತ್ರವಾಗಿದ್ದರು. ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಜೆಡಿಎಸ್ ಕಾರ್ಯಕಾರಿ ಸಮಿತಿ ಮುಖ್ಯಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದನ್ನೂ ಗಮನಿಸಿದ್ದೇನೆ. ಬಿಜೆಪಿಯವರು ಕೂಡ ಗೊಂದಲದಲ್ಲಿದ್ದರು.
ಈಗ ಎರಡೂ ಪಕ್ಷಗಳ ನಾಯಕರು ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದು, ಅದಕ್ಕೂ ಮುನ್ನ ನಾವು ಅವರನ್ನು ಪ್ರಶ್ನೆ ಮಾಡಬೇಕಿದೆ. ಈ ಪಾದಯಾತ್ರೆಯನ್ನು ಎನ್ ಡಿಎ ಮೈತ್ರಿಕೂಟ ಘೋಷಣೆ ಮಾಡಿಲ್ಲ. ಕೇವಲ ಬಿಜೆಪಿ ಮಾತ್ರ ಘೋಷಣೆ ಮಾಡಿದೆ.
ಪಾದಯಾತ್ರೆ ಸಂಬಂಧ ಪೊಲೀಸರು ಹಾಗೂ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಲ್ಲಿ ಬಿಜೆಪಿಯ ಪಾದಯಾತ್ರೆ ಎಂದು ಹೇಳಲಾಗಿದೆ ಹೊರತು, ಜೆಡಿಎಸ್ ಪಕ್ಷದ ಚಿಹ್ನೆ ಸಹ ಇಲ್ಲ. ಪಾದಯಾತ್ರೆಗೆ ಅಪಸ್ವರ ಎತ್ತಿದ್ದ ಜೆಡಿಎಸ್ ನಾಯಕರು ಒಪ್ಪಿದ್ದಾರೆ. ಜೆಡಿಎಸ್ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಭಾವಿಸಿದ್ದೆ ಎಂದರು.
ಅವರ ಪಾದಯಾತ್ರೆಗೆ ನಮ್ಮ ವತಿಯಿಂದ ಯಾವುದೇ ಅಡ್ಡಿ ಮಾಡುವುದಿಲ್ಲ. ಬೆಂಗಳೂರಿನಲ್ಲಿ ನಗರದ ಒಳಗೆ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುತ್ತೇವೆ. ಅವರ ಪಾದಯಾತ್ರೆ ಬೇಡ ಎಂದು ನಾನೇಕೆ ಹೇಳಲಿ. ನಾನು ಅವರ ಪಾದಯಾತ್ರೆ ಸ್ವಾಗತಿಸುತ್ತೇವೆ. ನಮ್ಮನ್ನು ನೋಡಿ ಅವರು ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ, ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಅವರ ವಿಚಾರ ತಿಳಿಸಲಿ, ನಮ್ಮ ವಿಚಾರ ನಾವು ತಿಳಿಸುತ್ತೇವೆ ಎಂದು ತಿಳಿಸಿದರು.












Click it and Unblock the Notifications