ಗೋವಾದಿಂದ ರಾಜ್ಯಕ್ಕೆ ರೈಲಿನಲ್ಲಿ ಬರುವವರಿಗೆ ಈ ನಿಯಮ ಕಡ್ಡಾಯ!
ಬೆಂಗಳೂರು, ಜನವರಿ 7: ಗೋವಾದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈ ಹಿನ್ನೆಲೆ ನೆರೆಯ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ರಾಜ್ಯದಲ್ಲಿ ದೈನಂದಿನ ಸೋಂಕಿತ ಪ್ರಕರಣಗಳ ಸಂಖ್ಯೆ 5,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 5031 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ ಒಬ್ಬರು ಮೃತಪಟ್ಟಿದ್ದು, 271 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈವರೆಗೂ 3022603 ಸೋಂಕಿತರು ಗುಣಮುಖರಾಗಿದ್ದರೆ, 2962043 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 22173 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಇದರ ಮಧ್ಯೆ ಗೋವಾದಿಂದ ರೈಲಿನ ಮೂಲಕ ಆಗಮಿಸುವ ಪ್ರಯಾಣಿಕರಿಗೆ ವಿಧಿಸಿರುವ ನಿರ್ಬಂಧಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಗೋವಾದಿಂದ ಆಗಮಿಸುವವರಿಗೆ ಮಾರ್ಗಸೂಚಿ:
* ರೈಲು ಪ್ರಯಾಣ ಆರಂಭಿಸುವುದಕ್ಕೂ 72 ಗಂಟೆಗಳ ಮೊದಲು ಕೊವಿಡ್-19 ಸೋಂಕಿನ RT-PCR ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶವನ್ನು ಪಡೆದುಕೊಂಡಿರಬೇಕು. ಹೀಗೆ ನೆಗೆಟಿವ್ ವರದಿಯನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅನುಮತಿ ನೀಡಲಾಗುವುದು.
* ಕೊವಿಡ್-19 ಲಸಿಕೆಯ ಎರಡೂ ಡೋಸ್ ಅನ್ನು ಪಡೆದುಕೊಂಡವರಿಗೂ ಕೂಡಾ RT-PCR ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯವಾಗಿದೆ.
* ಗೋವಾ ಮತ್ತು ಕರ್ನಾಟಕದ ನಡುವೆ ನಿಯಮಿತವಾಗಿ ಸಂಚರಿಸುವ ಪ್ರಯಾಣಿಕರು ಹಾಗೂ ಸಾರ್ವಜನಿಕರು ಪ್ರತಿ 15 ದಿನಗಳಿಗೊಮ್ಮೆ RT-PCR ಪರೀಕ್ಷೆ ಮಾಡಿಸಿಕೊಳ್ಳಬೇಕು, ಈ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು. ಹೀಗೆ ನೆಗೆಟಿವ್ ವರದಿ ಹೊಂದಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು.
* ನೈಋತ್ಯ ರೈಲ್ವೆಯು ರಾಜ್ಯ ಸರ್ಕಾರದೊಂದಿಗೆ ಕೊವಿಡ್- 19 ತಡೆಗಟ್ಟುವಲ್ಲಿ ಸಂಪೂರ್ಣವಾಗಿ ಸಹಕರಿಸುವುದು. ವಲಯದ ಮೂರು ವಿಭಾಗಗಳಿಗೂ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ.












Click it and Unblock the Notifications