ವೈದ್ಯರ ಸಲಹೆ; ಡಿಸಿಎಂ ಲಕ್ಷ್ಮಣ ಸವದಿ ಕ್ವಾರಂಟೈನ್
ಬೆಂಗಳೂರು, ಏಪ್ರಿಲ್ 17; ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ವೈದ್ಯರ ಸಲಹೆಯಂತೆ ಕ್ವಾರಂಟೈನ್ ಆಗಿದ್ದಾರೆ. ಈ ಕುರಿತು ಅವರು ಫೇಸ್ ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.
ಶನಿವಾರ ಫೇಸ್ ಬುಕ್ ಸ್ಟೇಟಸ್ ಹಾಕಿರುವ ಸಚಿವರು, "ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ನಾನು ಕೆಲವು ದಿನಗಳ ಕಾಲ ತೊಡಗಿದ್ದ ಸಂದರ್ಭದಲ್ಲಿ ನನ್ನೊಂದಿಗೆ ಭಾಗವಹಿಸಿದ್ದ ಕೆಲವರಿಗೆ ಕೋವಿಡ್ ಸೋಂಕು ತಗುಲಿದ್ದು ಕಂಡುಬಂದಿದೆ" ಎಂದು ಹೇಳಿದ್ದಾರೆ.
"ಅಷ್ಟೇಅಲ್ಲ, ನನ್ನ ಗನ್‍ಮ್ಯಾನ್‍ಗೂ ಕೂಡಾ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾನು ವೈದ್ಯರ ಸಲಹೆ ಪಡೆದಿದ್ದು, ಕೆಲವು ದಿನಗಳ ಕಾಲ ನನಗೆ ಕ್ವಾರಂಟೈನ್ ಆಗಲು ವೈದ್ಯರು ಸೂಚಿಸಿದ್ದಾರೆ" ಎಂದು ಸಚಿವರು ತಿಳಿಸಿದ್ದಾರೆ.

'ಆ ಪ್ರಕಾರ ನಾನು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಈಗಾಗಲೇ ನಾನು ಕೋವಿಡ್ ಲಸಿಕೆಯನ್ನೂ ಹಾಕಿಸಿಕೊಂಡಿದ್ದೇನೆ. ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ" ಎಂದು ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಬಸವಕಲ್ಯಾಣ, ಬೆಳಗಾವಿ ಮತ್ತು ಮಸ್ಕಿ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತೊಡಗಿಸಿಕೊಂಡಿದ್ದರು. ಶನಿವಾರ ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಹಲವು ನಾಯಕರಿಗೆ ಕೋವಿಡ್ ಸೋಂಕು ತಗುಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.












Click it and Unblock the Notifications