ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳು ಶೀಘ್ರ ಭರ್ತಿ
ಬೆಂಗಳೂರು, ಜೂನ್ 19 : ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರು ಮತ್ತು ಇತರೆ ಲಿಪಿಕ ವೃಂದದ ಬಹಳಷ್ಟು ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಕೊಡಿಸುವಂತೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.
ಸಾರಿಗೆ ಸಚಿವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಇಲಾಖೆಯ ನೇಮಕಾತಿ ಸೇರಿದಂತೆ ಹಲವು ವಿಚಾರಗಳ ಕುರಿತು ಮನವಿ ಸಲ್ಲಿಸಲಾಯಿತು.
ಸಾರಿಗೆ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸ್‌ಗೆ ಸಂಬಂಧಿಸಿದಂತೆ ಸುಮಾರು 350 ಕೋಟಿಗಳಷ್ಟು ಸರ್ಕಾರದಿಂದ ಬಾಕಿ ಬರಬೇಕಿದೆ. ಇದನ್ನು ಕೊಡಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ವಿನಂತಿ ಮಾಡಿಕೊಂಡರು.

ದೇವರಾಜು ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ನಲ್ಲಿ ಬೇಕಾಗಿರುವ ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ ಡಿಡಿಯುಟಿಟಿಎಲ್ ಅನ್ನು ಈಗಾಗಲೇ ಬಿಬಿಎಂಪಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಇದರಿಂದಾಗಿ ಒಳಗಿನ ಕಸ ವಿಲೇವಾರಿ, ಶೌಚಾಲಯ ನಿರ್ಮಾಣ, ಬೀದಿ ದೀಪ ಇನ್ನಿತರೆ ಸೌಲಭ್ಯಗಳನ್ನು ಬಿಬಿಎಂಪಿಯವರು ನಿರ್ವಹಣೆ ಮಾಡಬೇಕು ಎಂದು ಸಾರಿಗೆ ಸಚಿವರು ವಿವರಿಸಿದರು.
ದಾಸನಾಪುರ ಟ್ರಕ್ ಟರ್ಮಿನಲ್‌ಗೆ ಸಂಬಂಧಿಸಿದಂತೆ ರಸ್ತೆ ಸಮಸ್ಯೆ ಇದ್ದು, 60 ಅಡಿ ವಿಸ್ತೀರ್ಣದಲ್ಲಿ ರಸ್ತೆ ನಿರ್ಮಾಣ ಮಾಡುವುದು ಸೂಕ್ತ ಎಂದು ಹೇಳಿದರು. ಟ್ರಕ್ ಟರ್ಮಿನಲ್ ವತಿಯಿಂದ ಹೊಸಪೇಟೆ ಇನ್ನಿತರ ಕಡೆಗಳಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳ ಮಾಹಿತಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ನೀಡಲಾಯಿತು.
ಮೋಟಾರು ವಾಹನ ನಿರೀಕ್ಷಕರು ಮತ್ತು ಇತರೆ ಲಿಪಿಕ ವೃಂದದ ಬಹಳಷ್ಟು ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯಿಂದ ಅನುಮೋದನೆ ಕೊಡಿಸುವಂತೆ ಮನವಿ ಸಲ್ಲಿಸಿದರು.












Click it and Unblock the Notifications