ಓಲಾ, ಉಬರ್‌ಗೆ ಸಾರಿಗೆ ಇಲಾಖೆ ನೋಟಿಸ್; ನಿರ್ಧಾರ ಸ್ವಾಗತಿಸಿದ ಚಾಲಕರು
ಬೆಂಗಳೂರು, ಅ.09: ಓಲಾ, ಉಬರ್ ಮತ್ತು ರ್‍ಯಾಪಿಡೋ ನಡೆಸುತ್ತಿರುವ ಎಎನ್‌ಐ ಟೆಕ್ನಾಲಜಿಸ್‌ಗೆ ಸರ್ಕಾರ ನೋಟಿಸ್ ಜಾರಿ ಮಾಡಿದ್ದು, ಇನ್ನೂ ಮೂರು ದಿನಗಳಲ್ಲಿ ಆಟೋ ಸೇವೆಗಳನ್ನು ನಿಲ್ಲಿಸಿ ವರದಿ ಸಲ್ಲಿಸುವಂತೆ ಹೇಳಿದೆ. ಆದರೂ ರಸ್ತೆಯಲ್ಲಿ ಕ್ಯಾಬ್‌ಗಳು ಕಡಿಮೆಯಾಗಿಲ್ಲ.
ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್, 2016 ರ ಅಡಿಯಲ್ಲಿ ಈ ಸಂಸ್ಥೆಗಳಿಗೆ ಟ್ಯಾಕ್ಸಿಗಳನ್ನು ಮಾತ್ರ ಓಡಿಸಲು ಪರವಾನಗಿ ನೀಡಲಾಗಿದೆ. ಟ್ಯಾಕ್ಸಿ ಎಂದರೆ ಚಾಲಕನನ್ನು ಹೊರತುಪಡಿಸಿ ಆರು ಪ್ರಯಾಣಿಕರಿಗೆ ಮೀರದ ಆಸನ ಸಾಮರ್ಥ್ಯ ಹೊಂದಿರುವ ಮೋಟಾರ್ ಕ್ಯಾಬ್ ಎಂದು ಸಾರಿಗೆ ಆಯುಕ್ತ ಟಿ. ಎಚ್. ಎಂ. ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಆದೇಶಕ್ಕೆ ಕ್ಯಾಬ್ ಮತ್ತು ಆಟೋ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ. ಓಲಾ - ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ಕೂಡ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಸಾರ್ವಜನಿಕರಿಂದ ಕಂಪನಿಗಳು ಹೆಚ್ಚು ಹಣ ವಸೂಲಿ ಮಾಡುತ್ತಿವೆ
ಈ ಬಗ್ಗೆ ಮಾತನಾಡಿರುವ ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ, "ಆನ್ ಡಿಮ್ಯಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್, 2016 ರ ಅಡಿಯಲ್ಲಿ ಟ್ಯಾಕ್ಸಿಗಳನ್ನು ಮಾತ್ರ ಓಡಿಸಲು ಪರವಾನಗಿ ನೀಡಲಾಗಿದೆ. ಆಟೋ ರಿಕ್ಷಾಗಳಿಗೆ ಜಿಲ್ಲಾಧಿಕಾರಿ ಅನುಮತಿ ನೀಡಿ ಅವುಗಳನ್ನು ಓಡಿಸಲು ಮೀಟರ್ ಅಳವಡಿಸಿ ಇಂತಿಷ್ಟು ದರ ನಿಗದಿ ಮಾಡಿ ಚಾಲನೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಓಲಾ-ಊಬರ್, ಈ ಕಂಪನಿಗಳು ಎಲ್ಲರ ದಿಕ್ಕು ತಪ್ಪಿಸಲು ಎಲ್ಲರನ್ನೂ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಸೇರಿಸಿದ್ದು, ಸಾರ್ವಜನಿಕರ ಹತ್ತಿರ ಹೆಚ್ಚು ಹಣ ವಸೂಲಿ ಮಾಡುತ್ತಿವೆ. ಹಣ ಚಾಲಕರಿಗೆ ಸಿಗದಂತೆ ಮಾಡುತ್ತಿವೆ. ಕಂಪನಿಗಳು ತಾವು ದುಡಿಯಲು ಅವಕಾಶ ಮಾಡಿಕೊಂಡಿವೆ ಇದು ಕಾನೂನು ಬಾಹಿರ" ಎಂದಿದ್ದಾರೆ.

ಸರ್ಕಾರ ಮೊದಲೇ ಈ ಬಗ್ಗೆ ಎಚ್ಚೇತ್ತುಕೊಳ್ಳಬೇಕಿತ್ತು
"ಓಲಾ ಉಬರ್ ಸಂಸ್ಥೆ ಕಾನೂನು ಉಲ್ಲಂಘನೆ ಮಾಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದೆ. ಇದರ ಜೊತೆಗೆ ಆಟೋ ಸೇವೆ ಕೂಡ ನೀಡುತ್ತಿದೆ. ಅದಕ್ಕೂ ಯಾವುದೇ ನಿಯಮವಿಲ್ಲ. ಈಗ ಹೊಸದಾಗಿ ರೂಕೋ ಆಟೋ, ಟ್ಯಾಕ್ಸಿ ಸೇವೆ ನೀಡುತ್ತಿದೆ. ಅದಕ್ಕೆ ಯಾವುದೇ ನಿಬಂಧನಿಗಳಿಲ್ಲ. ಇದಕ್ಕೆಲ್ಲ ಜವಾಬ್ದಾರರು ಯಾರು? ಸರ್ಕಾರ ಮೊದಲೇ ಎಚ್ಚೆತ್ತುಕೊಂಡಿದ್ದರೇ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ" ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

ಸರ್ಕಾರವೇ ಒಂದು ಅಪ್ಲಿಕೇಷನ್ ರೆಡಿ ಮಾಡಿ, ಜನರಿಗೆ ಸೇವೆ ನೀಡಲಿ
"ಇಂದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಚಾಲಕರು ಮಾತ್ರ. ಲೂಟಿ ಹೊಡೆಯುತ್ತಿರುವುದು ಈ ಸಂಸ್ಥೆಗಳು. ಹೀಗಾಗಿ ಸರ್ಕಾರವೇ ಒಂದು ಅಪ್ಲಿಕೇಷನ್ ರೆಡಿ ಮಾಡಿ, ಸಾರ್ವಜನಿಕರಿಗೆ ಆಟೋ, ಟ್ಯಾಕ್ಸಿ ಸೇವೆ ಒದಗಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಮೊದಲು ಇದಕ್ಕೆ ಕ್ರಮ ಕೈಗೊಳ್ಳಬೇಕು" ಎಂದಿದ್ದಾರೆ.
"ಚಾಲಕರಲ್ಲಿ ಮನವಿ ಮಾಡಿಕೊಂಡಿರುವ ಅವರು, ಈ ಕಂಪನಿಗಳ ಜೊತೆಗೆ ಒಡನಾಡ ಇಟ್ಟುಕೊಳ್ಳಬೇಡಿ. ಹಾಗೆನಾದರೂ ಇದ್ದರೆ, ಅದಕ್ಕೆ ಸರ್ಕಾರದಿಂದ ನಿಯಮಾವಳಿಗಳು ಬರಬೇಕು. ನಾವೆನಾದರೂ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಂಡರೇ ಈ ಓಲಾ, ಉಬರ್ ಅಥವಾ ಮುಂಬರವ ಕಂಪನಿಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ" ಎಂದಿದ್ದಾರೆ.

ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಆರೋಪ
ಬೆಂಗಳೂರು ನಗರದಲ್ಲಿ ಕನಿಷ್ಠ ಆಟೋ ರಿಕ್ಷಾ ದರವನ್ನು ಮೊದಲ 2 ಕಿಮೀಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ.ಗೆ ನಿಗದಿಪಡಿಸಿದರೆ, ಅಗ್ರಿಗೇಟರ್‌ಗಳು ನಗರದಲ್ಲಿ ಕನಿಷ್ಠ ಶುಲ್ಕವನ್ನು 100 ರೂ.ಗೆ ಹೆಚ್ಚಿಸಿದ್ದಾರೆ.
ಹೀಗಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿ ಅಗ್ರಿಗೇಟರ್‌ಗಳು ಆಟೋರಿಕ್ಷಾ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅಲ್ಲದೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆಟೋ ಸೇವೆಗಳನ್ನು ಸ್ಥಗಿತಗೊಳಿಸಬೇಕು ಮತ್ತು ಪ್ರಯಾಣಿಕರಿಂದ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಬಾರದು ಎಂದಿರುವ ಇಲಾಖೆ ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸಾರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ.












Click it and Unblock the Notifications