ಆರೋಗ್ಯ ಇಲಾಖೆಗೆ ಲಿಪಿಕ ವೃಂದದ ಹುದ್ದೆಗಳ ಸ್ಥಳಾಂತರ, ಆದೇಶ
ಬೆಂಗಳೂರು, ಮೇ 22: ಕರ್ನಾಟಕದ ಆರೋಗ್ಯ ಇಲಾಖೆ ಆದೇಶವೊಂದನ್ನು ಹೊರಡಿಸಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಮಂಜೂರಾದ ಲಿಪಿಕ ವೃಂದದ ಹುದ್ದೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಗೆ ಸ್ಥಳಾಂತರದ ಕುರಿತು ವಿವರ ನೀಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಪ್ರದೀಪ್ ಕುಮಾರ್ ಬಿ. ಎಸ್. ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ಆದೇಶ ದಿನಾಂಕ 28-04-2025 ಉಲ್ಲೇಖಿಸಿದ್ದಾರೆ.

ಪ್ರಸ್ತಾವನೆ: ಸಾರ್ವಜನಿಕ ಆರೋಗ್ಯ ಸಂಸ್ಥೆಯು 1930ರಲ್ಲಿ ಸ್ಥಾಪನೆಯಾಗಿದ್ದು, ಇದರಡಿ 5 ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, Testing Samples ಗಳನ್ನು ಬಿಬಿಎಂಪಿ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪಡೆದು ಮಾದರಿಗಳನ್ನು ಪರೀಕ್ಷಿಸುವ ಕೆಲಸ ನಿರ್ವಹಿಸಲಾಗುತ್ತಿದ್ದು, ಇದರಡಿ ಆಹಾರ ಕಲಬೆರಕೆ, ಜೀವರಾಸಾಯನಿಕ, ರೋಗಕಾರಕ ಮತ್ತು ಸೂಕ್ಷ್ಮಾಣು ಜೀವಿಗಳ ಮಾದರಿಯ ಪರಿಶೀಲನೆ ಲಸಿಕಾ ತಯಾರಿಕೆ, Yellow Fever Vaccine ನೀಡುವುದು ಹಾಗೂ ಅಬಕಾರಿ ಇಲಾಖೆಯಿಂದ ಸ್ವೀಕೃತವಾಗುವ ಮಾದರಿಗಳನ್ನು ನಿರ್ವಹಿಸುವ ಕೆಲಸವನ್ನು ಮಾಡಲಾಗುತ್ತಿರುತ್ತದೆ.
ಈಗ ರಾಜ್ಯದಲ್ಲಿ ರಾಜ್ಯ ಸರ್ವೇಕ್ಷಣಾ ಘಟಕ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕಗಳಿದ್ದು, ಈ ಸರ್ವೇಕ್ಷಣಾ ಘಟಕಗಳು ತನ್ನದೇ ಪ್ರಯೋಗಾಲಯ ಮತ್ತು ಸರ್ವೇಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುವುದರಿಂದ ಪ್ರಸ್ತುತ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಹೆಚ್ಚಿನ ಕಾರ್ಯ ಒತ್ತಡ ಇರುವುದಿಲ್ಲ.
ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಮಂಜೂರಾದ ಹುದ್ದೆಗಳ ಪೈಕಿ ಲಿಪಿಕ ಹುದ್ದೆಗಳನ್ನು ಸ್ಥಳಾಂತರಿಸುವ ಅವಶ್ಯಕತೆ ಕಂಡುಬಂದಿದ್ದು, ಸದರಿ ಹುದ್ದೆಗಳನ್ನು ಇತರೆ ಇಲಾಖೆಗಳಿಗೆ ಸ್ಥಳಾಂತರಿಸುವುದರಿಂದ, ಸಂಸ್ಥೆಯ ಮಾನವ ಸಂಪನ್ಮೂಲ ಸೇವೆಯನ್ನು ಬಳಸಿಕೊಂಡು ದಿನನಿತ್ಯದ ಸೇವೆಯನ್ನು ದಕ್ಷತೆಯಿಂದ ಸದ್ಬಳಕೆ ಮಾಡಿಕೊಳ್ಳಬಹುದೆಂದು ಸರ್ಕಾರದ ಮಟ್ಟದಲ್ಲಿ ಮನಗಾಣಲಾಗಿದೆ.
ಆದ್ದರಿಂದ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಮಂಜೂರಾದ 52 ಲಿಪಿಕ ವೃಂದದ ಹುದ್ದೆಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಲಿಪಿಕ ವೃಂದದ ಒಟ್ಟು 52 ಹುದ್ದೆಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ 16 ಹುದ್ದೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲಾಖೆಗೆ 22 ಹುದ್ದೆಗಳನ್ನು ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಗೆ 1 ಹುದ್ದೆಯನ್ನು ಸ್ಥಳಾಂತರಿಸಿ, ಉಳಿದ 11 ಹುದ್ದೆಯನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿಯೇ ಉಳಿಸಿಕೊಂಡು ಆದೇಶಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲಾಖೆಗೆ ಸ್ಮಳಾಂತರಿಸಲಾದ ಲ್ಯಾಬ್ ಸಹಾಯಕರ ಮತ್ತು ವಾಚ್‌ಮನ್ ಹುದ್ದೆಯನ್ನು ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-2 ಹುದ್ದೆಯೆಂದು ಮರು ಪದನಾಮೀಕರಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲಾಖೆಗೆ ಸ್ಥಳಾಂತರಿಸಿದ ಸಿಬ್ಬಂದಿಗಳನ್ನು ಕ್ಷೇತ್ರೀಯ ಸಂಸ್ಥೆಗಳಲ್ಲಿ ತೀವ್ರತರವಾದ ಕೊರತೆ ಇರುವ ಜಿಲ್ಲಾ ಆಸ್ಪತ್ರೆ/ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ/ ಸಮುದಾಯ ಆರೋಗ್ಯ ಕೇಂದ್ರ/ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವರ್ಗಾವಣೆ ಮಾಡತಕ್ಕದ್ದು.












Click it and Unblock the Notifications