ಕರ್ನಾಟಕ ವಿಧಾನಸಭೆ 2023: ಮೇ 10ರ ಮತದಾನ ದಿನ ಈ ಪ್ರವಾಸಿ ತಾಣಗಳು ಬಂದ್
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಕರುನಾಡು ಸಜ್ಜಾಗಿದ್ದು, ರಾಜ್ಯದಲ್ಲಿ ಈಗಾಗಲೇ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಗೆಲುವಿಗಾಗಿ ಮತಬೇಟೆಗೆ ಇಳಿದಿದ್ದಾರೆ.
ರಾಜ್ಯದಲ್ಲಿ ಒಂದು ಕಡೆ ಚುನಾವಣೆ ರಂಗು ಪಡೆದುಕೊಂಡಿದ್ದರೆ, ಮತ್ತೊಂದು ಕಡೆ ಶಾಲಾ ಮಕ್ಕಳು ಬೇಸಿಗೆಯ ರಜೆಯಲ್ಲಿದ್ದಾರೆ. ಏಪ್ರಿಲ್-ಮೇ ಬಂತೆಂದರೆ ಮಕ್ಕಳಿಗೆ ರಜೆಯ ಮಜೆ ಅನುಭವಸುವ ಸಮಯ. ಆದರೆ, ಇದೇ ಸಂದರ್ಭದಲ್ಲಿ ಚುನಾವಣೆ ನಡೆಯುತ್ತಿರುವುದು ಮಕ್ಕಳ ಮೋಜು-ಮಸ್ತಿಗೆ ಅಡ್ಡಿಯುಂಟಾಗಿದೆ.

ಮೇ 10ರಂದು ಕರ್ನಾಟಕ ವಿಧಾನಸಭೆಗೆ ಮತದಾನ ನಡೆಯಲಿರುವುದರಿಂದ ಪಕ್ಷಗಳು ಮತ್ತು ಅಭ್ಯರ್ಥಿಗಳ ಪರ ಜನರು ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಶಾಲಾ-ಕಾಲೇಜುಗಳು ರಜೆ ಇದ್ದರೂ ರಾಜ್ಯದ ಪ್ರವಾಸಿ ತಾಣಗಳು ಮಾತ್ರ ಪ್ರವಾಸಿಗರಿಲ್ಲದೆ ಭಣಗುಟ್ಟುತ್ತಿವೆ.
ಇದೇ ವೇಳೆ ಮತದಾನ ನಡೆಯುವ ಮೇ 10ರಂದು ಕೆಲ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಮತದಾನ ದಿನ ಕಡ್ಡಾಯ ರಜೆ ಇರುವುದುರಿಂದ ನಗರ ಪ್ರದೇಶದ ಉದ್ಯೋಗಿಗಳು ಮತ್ತು ಯುವ ಸಮುದಾಯ ಮತದಾನ ಮಾಡದೆ ರಜೆಯ ಮಜಾ ಅನುಭವಿಸಲು ಪ್ರವಾಸಿ ತಾಣಗಳಿಗೆ ತೆರಳುತ್ತಾರೆ.
ಈ ಬಾರಿ ಎಲ್ಲರೂ ಕಡ್ಡಾಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ಮತದಾನದ ಶೇಕಡಾವಾರು ಹೆಚ್ಚಿಸಲು ಚುನಾವಣಾ ಆಯೋಗ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಸೂಚನೆ ನೀಡಿದೆ.

ವಿಶ್ವವಿಖ್ಯಾತ ಜೋಗ ಜಲಪಾತ ಪ್ರವೇಶ ನಿಷೇಧ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಮತದಾನ ನಡೆಯುವ ದಿನದಂದು ಶಿವಮೊಗ್ಗ ಜಿಲ್ಲೆಯ ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಯನ್ನು ನಿಷೇಧಿಸಲಾಗಿದೆ.
ಮತದಾರರು ಮತದಾನ ಹಕ್ಕು ಚಲಾಯಿಸುವುದನ್ನು ಬಿಟ್ಟು ಪ್ರವಾಸಿ ತಾಣಗಳಿಗೆ ಮೋಜು-ಮಸ್ತಿ ಮಾಡಲು ಬರುತ್ತಾರೆ. ಮತದಾನ ಹೆಚ್ಚಿಸುವ ಉದ್ದೇಶದಿಂದ ಮೇ 10ರಂದು ಜೋಗ ಜಲಪಾತ ವೀಕ್ಷಣೆಗೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ನಿರ್ಬಂಧ ಹೇರಿದ್ದಾರೆ.
ಮತದಾನ ದಿನದಂದು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರದಿದ್ದರೆ, ಬರುವ ಪ್ರವಾಸಿಗರಿಗಾಗಿ ನಿರ್ವಹಣಾ ಪ್ರಾಧಿಕಾರ ಸಿಬ್ಬಂದಿ ಕರ್ತವ್ಯಪಾಲನೆ ಮಾಡಬೇಕಾಗುತ್ತದೆ. ಇವರೂ ಮತದಾನ ವಂಚಿತರಾಗುತ್ತಾರೆ. ಇದಕ್ಕೆ ಪೂರಕವಾಗಿ ಸ್ಥಳೀಯ ವ್ಯಾಪಾರಸ್ಥರು, ಛಾಯಚಿತ್ರಗಾರರು, ಬೀದಿ ಬದಿ ವ್ಯಾಪಾರಿಗಳು, ಗೈಡ್‌ಗಳು, ಆಟೋಚಾಲಕರು, ಟ್ಯಾಕ್ಸಿ ಚಾಲಕರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ಮತದಾನದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಈ ಹಿಂದೆ ಮತದಾನ ದಿನಗಳಂದು ಜೋಗ ಜಲಪಾತ ನಿರ್ವಹಣಾ ಪ್ರಾಧಿಕಾರದಲ್ಲಿ ದಾಖಲಾದ ಪ್ರವಾಸಿಗರ ಸಂಖ್ಯೆ ಅಂಕಿ ಅಂಶಗಳನ್ನು ಪರಿಗಣಿಸಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಹೇಳಿದರು.
ಜೋಗ ಜಲಪಾತ ಮಾತ್ರವಲ್ಲದೆ, ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ವೀಕ್ಷಣೆಗೂ ನಿಷೇಧವಿರಲಿದೆ ಎಂದು ತಿಳಿಸಲಾಗಿದೆ. ಸಕ್ರೆಬೈಲು ಆನೆ ಶಿಬಿರದಲ್ಲಿ ಈ ಬಗ್ಗೆ ಇನ್ನೂ ನಿರ್ಧಾರ ಮಾಡಲಾಗಿಲ್ಲ. ಸಕ್ರೆಬೈಲಿನಲ್ಲೂ ನಿಷೇಧ ಹೇರುವ ಸಾಧ್ಯತೆ ಇದೆ.
ಸದ್ಯ ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ, ಚುನಾವಣೆಯ ಕಾವು ಏರಿಕೆಯಾಗಿದೆ. ಇದರ ನಡುವೆ ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಇಳಿಕೆಯಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರೆನಿಸಿಕೊಂಡ ಯುವಕರು ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ.
ಹೀಗಾಗಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಾದ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಪ್ರವಾಸಿ ತಾಣಗಳು ಹಾಗೂ ಉತ್ತರ ಕರ್ನಾಟಕ ಭಾಗದ ವಿಜಯಪುರ, ಬಾದಾಮಿ, ಹಂಪಿ, ಮೈಸೂರು ಹೀಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೇ ಸ್ಥಳೀಯ ವ್ಯಾಪಾರಿಗಳು, ಗೈಡ್‌ಗಳು ಕಂಗಾಲಾಗಿದ್ದಾರೆ.












Click it and Unblock the Notifications