Karnataka State Budget 2023 : ನಾಳಿನ ಬಜೆಟ್ ಕೇವಲ ಭಾಷಣಕ್ಕಷ್ಟೇ ಸೀಮಿತ: ಡಿ.ಕೆ ಶಿವಕುಮಾರ್
ಮೈಸೂರು,ಫೆಬ್ರವರಿ16: ನಾಳೆ(ಗುರುವಾರ) ಬೊಮ್ಮಾಯಿ ಅವರು ಬಜೆಟ್ ಮಂಡಿಸುತ್ತಿದ್ದು, ಇದು ಕೇವಲ ಭಾಷಣಕ್ಕೆ ಸೀಮಿತವಾಗಿರುವ ಬಜೆಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕು.ಈ ಸರ್ಕಾರ ಭ್ರಷ್ಟಾ ಸರ್ಕಾರ ಎಂದು ಕುಖ್ಯಾತಿ ಪಡೆದಿದೆ. ಈ ಸರ್ಕಾರ ಭ್ರಷ್ಟ ಸರ್ಕಾರ ಎಂದು ನಾವು ಹಣೆಪಟ್ಟಿ ನೀಡಿಲ್ಲ. ಗುತ್ತಿಗೆದಾರರ ಸಂಘದ ಅದ್ಯಕ್ಷ ಕೆಂಪಣ್ಣ ಅವರು ಈ ಸರ್ಕಾರದಲ್ಲಿ ಏನೇ ಕೆಲಸ ಆಗಬೇಕಾದರೂ 40% ಕಮಿಷನ್ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದರು. ಇನ್ನು ಗುತ್ತಿಗೆದಾರ ಸಂತೋಷ್ ಪಾಟೀಲ್ ಮಂತ್ರಿಯೊಬ್ಬ 40% ಲಂಚ ಕೇಳುತ್ತಿದ್ದಾರೆ ಎಂದು ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಮೂಲಕ ಲಂಚಕ್ಕೊಬ್ಬ, ಮಂಚಕ್ಕೊಬ್ಬ ಅಧಿಕಾರ ಕಳೆದುಕೊಂಡರು. ಈ ಭ್ರಷ್ಟ ಸರ್ಕಾರ ಅಧಿಕಾರಕ್ಕೆ ಬರಲು ಯಾರು ಕಾರಣ? ಎಂದು ಪ್ರಶ್ನಿಸಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ನಿಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ಆಗಿದೆಯಾ? ನಾಳೆ ಸರ್ಕಾರದ ಬಜೆಟ್ ಮಂಡನೆಯಾಗುತ್ತಿದ್ದು, ಇದು ಕೇವಲ ಪ್ರಣಾಳಿಕೆ ಬಜೆಟ್ ಆಗಿದ್ದು, ಇದನ್ನು ಜಾರಿಗೆ ತರುವುದು ಸಾಧ್ಯವಿಲ್ಲ. ಹೀಗಾಗಿ ಈ ಬಜೆಟ್ ಮಂಡಿಸುವ ಮುನ್ನ ಕಳೆದ ವರ್ಷ ನೀವು ಮಂಡಿಸಿದ ಬಜೆಟ್ ನಲ್ಲಿ ಘೋಷಿಸಿದ ಭರವಸೆಗಳಲ್ಲಿ ಶೇ.50ರಷ್ಟು ಅನುದಾನ ಖರ್ಚು ಮಾಡಿಲ್ಲ.

ಇನ್ನು 104 ಸೀಟು ಗೆಲ್ಲುವಾಗ ನೀವು ಕೊಟ್ಟ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿದ್ದು, ಅದರಲ್ಲಿ ಕೇವಲ 50 ಭರವಸೆ ಮಾತ್ರ ಈಡೇರಿಸಿದದ್ದೀರಿ. ಹೀಗಾಗಿ ಉಳಿದ 550 ಭರವಸೆ ಯಾಕೆ ಈಡೇರಿಸಿಲ್ಲ? ಈ ಎರಡು ವಿಚಾರವಾಗಿ ರಾಜ್ಯದ ಜನರಿಗೆ ಉತ್ತರ ನೀಡಿ ನಂತರ ನಾಳೆ ಬಜೆಟ್ ಮಂಡನೆ ಮಾಡಿ ಎಂದು ಪ್ರಶ್ನಿಸಿದ್ದೇವೆ.
ಕಾಂಗ್ರೆಸ್ ಪಕ್ಷ ಜನರಿಗಾಗಿ ಅನೇಕ ಕಾರ್ಯಕ್ರಮ ನೀಡಿದೆ. ದೇವರಾಜ ಅರಸು ಅವರು ಉಳುವವನಿಗೆ ಭೂಮಿ ಕೊಟ್ಟರು, ಇಂದಿರಾ ಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು. ಉದ್ಯೋಗ ನೀಡಿದೆವು, ಆಹಾರ ಭದ್ರತೆ ಕಾಯ್ದೆ, ನರೇಗಾ ಕಾರ್ಯಕ್ರಮ ಜಾರಿಗೆ ತಂದರು. ಈ ಯೋಜನೆ ಮೂಲಕ ಪ್ರತಿ ವರ್ಷ ಪಂಚಾಯ್ತಿ ಮಟ್ಟದಲ್ಲಿ 2-5 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮಗಳು. ಇಂತಹ ಕಾರ್ಯಕ್ರಮವನ್ನು ದಳ ಹಾಗೂ ಬಿಜೆಪಿಯವರು ತಂದಿದ್ದಾರಾ?
ಬಿಜೆಪಿಯವರು ಯಡಿಯೂರಪ್ಪನವರ ಕಣ್ಣಲ್ಲಿ ನೀರು ಹಾಕಿಸಿ ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ? ಅಮಿತ್ ಶಾ ಅವರು ಆರಂಭದಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುತ್ತೇವೆ ಎಂದು ಹೇಳಿ, ಈಗ ಪ್ರಧಾನಿ ಮೇದಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದಾರೆ. ಬೊಮ್ಮಾಯಿ ಅವರ ಸರ್ಕಾರದ ಬಗ್ಗೆ ಅವರದೇ ಪಕ್ಷದ ನಾಯಕರಾದ ಯತ್ನಾಳ್, ಗೂಳಿಹಟ್ಟಿ ಶೇಖರ್, ವಿಶ್ವನಾಥ್, ಅವರು ಏನೆಲ್ಲಾ ಮಾತನಾಡುತ್ತಿದ್ದಾರೆ, ದೂರುತ್ತಿದ್ದಾರೆ ನೀವು ನೋಡುತ್ತಿದ್ದೀರಿ. ವಿಶ್ವನಾಥ್ ಅವರು ದಳ, ಬಿಜೆಪಿಗೆ ಹೋಗಿದ್ದಾರೆ. ಈಗ ಅವರು ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಸಾಯಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ. ನಮ್ಮ ನಾಯಕರೆಲ್ಲ ಅವರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದೇವೆ. ಶೀಘ್ರದಲ್ಲಿ ಅವರನ್ನು ಕಾಂಗ್ರೆಸ್ ಪಕ್ಷ ಸೇರಿಸಿಕೊಳ್ಳುವ ಮುಹೂರ್ತ ನಿಗದಿ ಮಾಡುತ್ತೇವೆ.

ಕೇಂದ್ರ ಹಾಗೂ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನೀವು ದಳಕ್ಕೆ ಮತ ಹಾಕಿದರೆ ಪ್ರಯೋಜನವಿಲ್ಲ. ನಾನು ಇಲ್ಲಿ ದಳ ಹಾಗೂ ಬಿಜೆಪಿ ಕಾರ್ಯಕರ್ತರ ಜತೆ ಮಾತನಾಡಲು ಬಯಸುತ್ತೇನೆ. ಕುಮಾರಸ್ವಾಮಿ ಅವರಿಗೆ ಅವಕಾಶ ಕೊಟ್ಟಿ ಆಗಿದೆ. ನಾನು ನಿಮ್ಮ ಮಗನಾಗಿದ್ದೇನೆ. ನನಗೆ ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ. ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ 10 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಇತ್ತು. ನಾನು ಅಧಿಕಾರದಿಂದ ಇಳಿಯುವಾಗ ರಾಜ್ಯದಲ್ಲಿ 20 ಸಾವಿರ ಮೆ.ವ್ಯಾ ಹೆಚ್ಚಳ ಮಾಡಿದ್ದೆ ಎಂದು ಹೇಳಿದರು.












Click it and Unblock the Notifications