
ಗೌಪ್ಯತೆಗಾಗಿ ಕೆಲ ಪ್ರಕರಣದ ಎಫ್‌ಐಆರ್ ಅಪ್‌ಲೋಡ್ ಇಲ್ಲ; ಲೋಕಾಯುಕ್ತ
ಬೆಂಗಳೂರು, ಡಿಸೆಂಬರ್ 01; ಕೆಲವು ಪ್ರಕರಣಗಳಲ್ಲಿ ಗೌಪ್ಯತೆ ಕಾಪಾಡುವ ಅಗತ್ಯವಿದೆ. ಹಾಗಾಗಿ ಎಫ್‌ಐಆರ್ ಅಪ್‌ಲೋಡ್ ಮಾಡುತ್ತಿಲ್ಲ ಎಂದು ಲೋಕಾಯುಕ್ತ ಸಂಸ್ಥೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಅಲ್ಲದೆ, ಕೆಲವು ಗಂಭೀರ ಪ್ರಕರಣಗಳಲ್ಲಿ ಎಫ್‌ಐಆರ್ ಅಪ್‌ಲೋಡ್ ಮಾಡಿದರೆ ಆರೋಪಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯೂ ಇದೆ. ಹಾಗಾಗಿ ಗೌಪ್ಯತೆ ಕಾಪಾಡಬೇಕಾದ ಪ್ರಕರಣ ಹೊರತುಪಡಿಸಿ ಉಳಿದ ಎಫ್‌ಐಆರ್ ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಲೋಕಾಯುಕ್ತ ಪರ ವಕೀಲರು ಹೈಕೋರ್ಟ್‌ಗೆ ಹೇಳಿದ್ದಾರೆ.ಅದನ್ನು ದಾಖಲಿಸಿಕೊಂಡ ನ್ಯಾಯಾಲಯ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಯಾವುದೇ ಅಪರಾಧ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದರೂ, ಆದಾದ ನಂತರ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲೇಬೇಕು. ಇದು ಎಲ್ಲ ತನಿಖಾ ಸಂಸ್ಥೆಗಳಿಗೂ ಅನ್ವಯವಾಗುವ ನಿಯಮ. ಈ ಕುರಿತು ಸುಪ್ರೀಂಕೋರ್ಟ್ ಆದೇಶವೂ ಸ್ಪಷ್ಟವಾಗಿದೆ.
ಆದರೂ ಲೋಕಾಯುಕ್ತ ಸಾಂವಿಧಾನಿಕ ಸಂಸ್ಥೆಯೇ ಈ ನಿಯಮ ಪಾಲಿಸುತ್ತಿಲ್ಲ. ಹಾಗಾಗಿ ಆ ಕುರಿತು ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ಸಂಬಂಧ ಹೈಕೋರ್ಟ್, ಈ ಹಿಂದೆ ಲೋಕಾಯುಕ್ತಕ್ಕೆ ನೋಟಿಸ್ ಜಾರಿ ಮಾಡಿತ್ತು.
ವಕೀಲ ಎಸ್. ಉಮಾಪತಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪಿ. ಬಿ. ವರಲೆ ಅವರಿದ್ದ ವಿಭಾಗೀಯ ಪೀಠ, ಲೋಕಾಯುಕ್ತ ವಕೀಲರ ಹೇಳಿಕೆ ದಾಖಲಿಸಿ ಪಿಐಎಲ್ ವಿಲೇವಾರಿ ಮಾಡಿತು.
ಅರ್ಜಿದಾರರು ವಾದ ಮಂಡಿಸಿ, ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ಸಂಬಂಧಪಟ್ಟ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು 2014ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದನ್ನು ಸಿಬಿಐ ಸೇರಿದಂತೆ ಉಳಿದ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. ಸುಪ್ರೀಂಕೋರ್ಟ್ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ 2008ರಲ್ಲಿ ಎಸಿಬಿ ಮತ್ತು ಬಿಎಂಟಿಎಫ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಅದನ್ನು ಎಸಿಬಿ ಪಾಲಿಸುತ್ತಾ ಬಂದಿತ್ತು ಎಂದರು.

ಸುಪ್ರೀಂ ಆದೇಶ ಪಾಲಿಸುತ್ತಿಲ್ಲ: ಆದರೆ ಎಸಿಬಿಯನ್ನು ರದ್ದುಗೊಳಿಸಿ 2022ರ ಆ.11ರಂದು ತೀರ್ಪು ನೀಡಿದ ಹೈಕೋರ್ಟ್, ಲೋಕಾಯುಕ್ತದ ಅಧಿಕಾರವನ್ನು ಮರುಸ್ಥಾಪಿಸಿ ಆದೇಶಿಸಿದೆ. ಆದರೆ, ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶವನ್ನು ಲೋಕಾಯುಕ್ತ ಪೊಲೀಸರು ಪಾಲಿಸುತ್ತಿಲ್ಲ. ಇದರಿಂದ ಮುಂದಿನ ಕಾನೂನು ಪ್ರಕ್ರಿಯೆಗೆ ದೂರುದಾರರು, ಕಕ್ಷಿದಾರರು ಮತ್ತು ವಕೀಲರಿಗೆ ಸಾಕಷ್ಟು ಅನಾನೂಕೂಲವಾಗುತ್ತಿದೆ. ಈ ಬಗ್ಗೆ 2022ರ ಸೆ.19ರಂದು ದೂರು ಕೊಟ್ಟಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಆದ್ದರಿಂದ ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದರು.
3 ವಾರಗಳಲ್ಲಿ ಪ್ರಮಾಣ ಪತ್ರಕ್ಕೆ ಸೂಚನೆ: ಈ ಮಧ್ಯೆ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಧಾರ್ಮಿಕ ಕಟ್ಟಡ ತೆರವು ವಿಚಾರದಲ್ಲಿ ನ್ಯಾಯಾಲಯ. ಅಕ್ರಮ ಕಟ್ಟಡಗಳ ತೆರವು ವಿಳಂಬವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದೆ.
ಅಲ್ಲದೇ, ಬಿಡಿಎ, ಬಿಬಿಎಂಪಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಬೇಕು, ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸಮರ್ಪಕ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಮೂರು ವಾರ ಸಮಯ ನೀಡಿ ವಿಚಾರಣೆಯನ್ನು ಜ.12ಕ್ಕೆ ಮುಂದೂಡಿತು.