ವಿಧಾನಸಭೆ ಚುನಾವಣೆಯ ಟಿಕೆಟ್ ಹಂಚಿಕೆಗೆ ಬಿಜೆಪಿಯಿಂದ ಸಮೀಕ್ಷೆ
ಬೆಂಗಳೂರು, ಜೂನ್ 28: ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಟಿಕೆಟ್ ಹಂಚಿಕೆಗೆ ಬಿಜೆಪಿಯಿಂದ ಸಮೀಕ್ಷೆ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಹೊರಗಿನ ಸಂಸ್ಥೆಯಿಂದ ಸಮೀಕ್ಷೆ ನಡೆಸಲಾಗುವುದು ಎಂದು ಹೇಳಿರುವ ಅವರು ಸಮೀಕ್ಷೆಯ ವಿವರಗಳನ್ನು ಬಹಿರಂಗ ಪಡಿಸಿಲ್ಲ.
ಆಗಸ್ಟ್ 3ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಬರಲಿದ್ದಾರೆ. ಆಗಸ್ಟ್ 5ರವರೆಗೆ ಅವರು ಕರ್ನಾಟಕದಲ್ಲೇ ಇರಲಿದ್ದಾರೆ. ಈ ವೇಳೆ ಸಮೀಕ್ಷೆ, ಟಿಕೆಟ್ ಹಂಚಿಕೆಯ ವಿಚಾರಗಳು ಚರ್ಚೆಗೆ ಬರಲಿದ್ದು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದಾರೆ.
ಉನ್ನತ ಮೂಲಗಳು ಒನ್ ಇಂಡಿಯಾಗೆ ನೀಡಿರುವ ಮಾಹಿತಿಗಳ ಪ್ರಕಾರ, 'ಸಮೀಕ್ಷೆಯ ನಂತರ ಪಕ್ಷ ಅಭ್ಯರ್ಥಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಸಮೀಕ್ಷೆಯು ಪ್ರತಿ ಕ್ಷೇತ್ರಗಳ ಮಾಹಿತಿಯನ್ನು ಒಳಗೊಳ್ಳಲಿದೆ.'

ವಿವರವಾದ ಸಮೀಕ್ಷೆ
ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಎಷ್ಟರ ಮಟ್ಟಿಗೆ ಜನ ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಹೇಗೆ ಮಾಡಿದ್ದಾರೆ. ಜನರ ಕೈಗೆ ಅಭ್ಯರ್ಥಿಗಳು ಸಿಗುತ್ತಾರಾ ಎಂಬುದನ್ನು ಸಮೀಕ್ಷೆಗಳು ಒರೆಗೆ ಹಚ್ಚಲಿವೆ.

ಕಠಿಣ ಮಾನದಂಡ
ಅಭ್ಯರ್ಥಿಗಳ ಆಯ್ಕೆಗೆ ಕಠಿಣ ಮಾನದಂಡಗಳನ್ನು ಅನುಸರಿಸಲು ಬಿಜೆಪಿ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ಜಯಶಾಲಿಯಾಗಲು ಸಾಧ್ಯವಿಲ್ಲದವರಿಗೆ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆಗೆ ಕಠಿಣ ಮಾನದಂಡಗಳನ್ನು ಪಾಲಿಸಲು ಯೋಚಿಸಿದೆ.
ಈಗಾಗಲೇ ಗುಪ್ತ ಸಮೀಕ್ಷೆ ನಡೆಸಿರುವ ವರದಿಗಳಿವೆ. ಹೀಗಿದ್ದೂ ಮುಂದೆ ನಡೆಸಲಿರುವ ಸಮೀಕ್ಷೆಯನ್ನೇ ಟಿಕೆಟ್ ಹಂಚಿಕೆಗೆ ಪರಿಗಣಿಸಲಾಗುತ್ತದೆ.

ಬಿಜೆಪಿ ವಾರ್ ರೂಂ
ಚುನಾವಣೆಗೆಗಾಗಿ ಬಿಜೆಪಿ ವಾರ್ ರೂಂ ಸಿದ್ಧಪಡಿಸಲು ಮುಂದಾಗಿದೆ. ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಈ ವಾರ್ ರೂಂ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. ಇದನ್ನು ರಾಜ್ಯ ನಾಯಕರೇ ನಿರ್ವಹಿಸಲಿದ್ದಾರೆ. ಕೇಂದ್ರ ನಾಯಕರು ಈ ರೂಂ ಬಗ್ಗೆ ನಿಗಾ ವಹಿಸಲಿದ್ದಾರೆ.

ಕೇಂದ್ರ ಕಚೇರಿಯಲ್ಲೇ ಶಾ ವಾಸ್ತವ್ಯ
ಚುನಾವಣೆಗೂ ಮೊದಲು ಅಮಿತ್ ಶಾ ಏರ್ಪೋರ್ಟ್ ರಸ್ತೆಯಲ್ಲಿ ಮನೆ ಬಾಡಿಗೆಗೆ ಪಡೆದು ವಾಸವಿರಲಿದ್ದಾರೆ ಎನ್ನಲಾಗಿತ್ತು. ಆದರೆ ಅಮಿತ್ ಶಾ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಏರ್ಪೋರ್ಟ್ ರಸ್ತೆಯಲ್ಲಿ ಕಚೇರಿ ಮಾಡಿದರೆ ಅಲ್ಲಿಗೆ ಪದೇ ಪದೇ ಭೇಟಿ ನೀಡುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಕೇಂದ್ರ ಕಚೇರಿ ಮಲ್ಲೇಶ್ವರಂನಲ್ಲೇ ಉಳಿದುಕೊಳ್ಳಲು ಅಮಿತ್ ಶಾ ನಿರ್ಧರಿಸಿದ್ದಾರೆ.

ವಿಸ್ತಾರಕ್ ಕಾರ್ಯಕ್ರಮ
ಅಮಿತ್ ಶಾ ವಿಸ್ತಾರಕ್ ಹೆಸರಿನಲ್ಲಿ ದಕ್ಷಿಣ ಭಾರತದಲ್ಲಿ ಪಕ್ಷದ ಬೇರುಗಳನ್ನು ಹರಿ ಬಿಡುವ ಪ್ರವಾಸದಲ್ಲಿ ನಿರತರಾಗಿದ್ದಾರೆ. ಇದರ ಭಾಗವಾಗಿಯೇ ಅವರು ಕರ್ನಾಟಕದಲ್ಲಿ ಆಗಸ್ಟ್ 3ರಿಂದ 5ರವರೆಗೆ ವಾಸ್ತವ್ಯ ಹೂಡಲಿದ್ದಾರೆ. ಈ ಸಂದರ್ಭ ವಿಧಾನಸಭೆ ಚುನಾಣೆಗೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದಾರೆ. ಪಾಂಡಿಚೆರಿಯಲ್ಲಿ ಅಮಿತ್ ಶಾ ತಮ್ಮ ಪ್ರವಾಸ ಕೊನೆಗೊಳಿಸಲಿದ್ದಾರೆ.












Click it and Unblock the Notifications