ಮಡಿಕೇರಿ : ಟಿಪ್ಪು ಜಯಂತಿ ಗಲಭೆ, ಇಬ್ಬರ ಬಂಧನ
ಮಡಿಕೇರಿ, ನವೆಂಬರ್ 16 : ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನವೆಂಬರ್ 10ರ ಮಂಗಳವಾರ ಮಡಿಕೇರಿಯಲ್ಲಿ ಗಲಭೆ ನಡೆದಿತ್ತು ಮೂವರು ಈ ಗಲಭೆಯಲ್ಲಿ ಸಾವನ್ನಪ್ಪಿದ್ದರು.
ಬಂಧಿತ ಆರೋಪಿಗಳನ್ನು ವಿರಾಜಪೇಟೆ ತಾಲೂಕಿನ ಸಿದ್ಧಾಪುರದಲ್ಲಿ ಅರೆಕಾಡಿನ ಅಬ್ದುಲ್ ಗಫರ್ (36) ನೆಲ್ಲಿ ಹುದಿಕೇರಿಯ ಖಲೀದ್ (38) ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. [ಮಡಿಕೇರಿ ಗಲಭೆ : ಶಾಹುಲ್ ಸಾವು]

ಗಲಭೆಯ ಸಿಸಿಟಿವಿ ದೃಶ್ಯವಾಳಿ ಆಧರಿಸಿ ಇಬ್ಬರನ್ನು ಬಂಧಿಸಿದ್ದಾರೆ. ಆದರೆ, ಈ ಆರೋಪಿಗಳು ಕುಟ್ಟಪ್ಪ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ? ಎನ್ನುವ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ. [ಮಡಿಕೇರಿ ಗಲಭೆ : ಮ್ಯಾಜಿಸ್ಟೇಟ್ ತನಿಖೆ]
ಮೂರು ಜನ ಮೃತಪಟ್ಟಿದ್ದರು : ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಗಲಭೆಯಲ್ಲಿ ಮೂವರು ಮೃತಪಟ್ಟಿದ್ದರು. ವಿಎಚ್‌ಪಿ ಕಾರ್ಯಕರ್ತ ಕುಟ್ಟಪ್ಪ ಗಲಭೆಯ ದಿನ ಮೃತಪಟ್ಟರೆ, ಗುಂಡೇಟೆನಿಂದ ಗಾಯಗೊಂಡಿದ್ದ ಶಾಹುಲ್ ಎಂಬ ಯುವಕ ಮೈಸೂರಿನ ಆಸ್ಪತ್ರೆಯಲ್ಲಿ ಗುರುವಾರ ಸಾವನ್ನಪ್ಪಿದ್ದ.
ಮಡಿಕೇರಿ ಗಲಭೆಯ ಕುರಿತು ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ಅವರ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಗಲಭೆಗೆ ಸರ್ಕಾರವೇ ಹೊಣೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.












Click it and Unblock the Notifications