ಶೃಂಗೇರಿ ಮಠದ ಆಸ್ತಿ ವಕ್ಫ್‌ಗೆ ಸೇರಿದ್ದಾ? ಸ್ಪಷ್ಟನೆ ಕೊಟ್ಟ ಟಿಪ್ಪು ವಂಶಸ್ಥ
ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದಿದೆ. ಹಲವು ಜಿಲ್ಲೆಗಳಲ್ಲಿ ಆಸ್ತಿ ಕಬಳಿಕೆಗೆ ವಕ್ಫ್ ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕರು ಸಮರಕ್ಕಿಳಿದ್ದಾರೆ. ಮತ್ತೊಂದೆಡೆ ಶೃಂಗೇರಿ ಮಠದ ಆಸ್ತಿ ಕೂಡ ವಕ್ಫ್‌ಗೆ ಸೇರಿದ್ದು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ಇದಕ್ಕೆ ಖುದ್ದು ಟಿಪ್ಪು ಸುಲ್ತಾನ್ ವಂಶಸ್ಥ ಸ್ಪಷ್ಟನೆ ನೀಡಿದ್ದಾರೆ.
ಶೃಂಗೇರಿ ಮಠದ ಮೇಲೆ ಕೆಲವರು ದಾಳಿ ಮಾಡಿದಾಗ ಟಿಪ್ಪು ಸುಲ್ತಾನ್ ಅವರು ತಮ್ಮ ಜನರನ್ನು ಕಳಿಸಿ ಅದನ್ನು ರಕ್ಷಿಸುವ ಕೆಲಸ ಮಾಡಿದ್ದರು. ಅಲ್ಲದೆ ಶೃಂಗೇರಿ ಮಠದ ಪುನರ್‌ರಚನೆಗೂ ಕೈಜೋಡಿಸಿದ್ದರು ಎಂದಿದ್ದಾರೆ.

ಈ ಹಿಂದೆ ವಕ್ಫ್ ಆಸ್ತಿಯನ್ನು ಅಲ್ಲಾ ಹೆಸರಿನಲ್ಲಿ ಬಡವರು ಮತ್ತು ಮುಸ್ಲಿಂ ಸಮುದಾಯಕ್ಕೆ ಕೊಡಲಾಗಿತ್ತು. ನಂತರ ಅದನ್ನು ಸರ್ಕಾರ ವಕ್ಫ್ ಬೋರ್ಡ್ ಎಂದು 1995ರಲ್ಲಿ ನಾಮಕರಣ ಮಾಡಿತು. ಆದರೆ, ಸಾಕಷ್ಟು ವಕ್ಫ್ ಆಸ್ತಿ ಮತ್ತು ಜಮೀನುಗಳು ಅನ್ಯರ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರದ ಶ್ರೀನರಸಿಂಹ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ ದೇವಸ್ಥಾನ, ನಂಜುಂಡೇಶ್ವರ ಸ್ವಾಮಿ ದೇವಸ್ಥಾನಗಳು ಸೇರಿದಂತೆ ಹಲವು ದೇವಸ್ಥಾನಗಳಿಗೆ ಟಿಪ್ಪು ಸುಲ್ತಾನ್ ಅವರು ಜಮೀನು ನೀಡಿದ್ದಾರೆ ಎಂದೂ ಹೇಳಿದ್ದಾರೆ.
ಈ ಬಾರಿ ಟಿಪ್ಪು ಜಯಂತಿ ಆಚರಣೆಗೆ ಹಲವು ಕಡೆ ಅವಕಾಶ ಕೊಡಲಿಲ್ಲ. ವಿಜಯಾನಂದ ಕಾಶಪ್ಪನವರು ಇಳಕಲ್‌ನಲ್ಲಿ ದೊಡ್ಡ ಕಾರ್ಯಕ್ರಮ ಮಾಡಿದ್ದರು. ಅದೇ ರೀತಿಯಲ್ಲಿ ಕಲ್ಯಾಣ ಕರ್ನಾಟಕದೆಲ್ಲೆಡೆಯೂ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಅನುವು ಮಾಡಿಕೊಡಬೇಕು. ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದಲೇ ಆಚರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಸ್ಲಿಂ ಮಾತ್ರವಲ್ಲ, ದಲಿತರು ಸೇರಿದಂತೆ ಬೇರೆ ಸಮುದಾಯಗಳಲ್ಲೂ ಟಿಪ್ಪು ಸುಲ್ತಾನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಈ ಕಾರಣದಿಂದ ಸರ್ಕಾರವೇ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾಗಬೇಕು. ಒಂದು ವೇಳೆ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪುರಾತತ್ವ ಇಲಾಖೆಗೆ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಕ್ಫ್ ಆಸ್ತಿಗಳಿಂದ ಕೋಟ್ಯಂತರ ರೂಪಾಯಿ ಹಣ ಬರುತ್ತಿರುವ ಮಾಹಿತಿ ಇದೆ. ಆದರೆ ಆ ಹಣ ಸರಿಯಾಗಿ ಉಪಯೋಗ ಆಗುತ್ತಿಲ್ಲ. ಈ ಕಾರಣದಿಂದಲೂ ಸರ್ಕಾರವೇ ಟಿಪ್ಪು ಜಯಂತಿ ಆಚರಿಸಲೇಬೇಕು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಚಿವರು, ಶಾಸಕರಿಗೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.
ತೇಜಸ್ವಿ ಸೂರ್ಯ ಕಳವಳ: 2013ರಲ್ಲಿ ವಕ್ಫ್ ಕಾಯ್ದೆಗೆ ಕಾಂಗ್ರೆಸ್ ಸೆಕ್ಷನ್ 40 ಅನ್ನು ಸೇರಿಸಿತು. ಇದರ ಪ್ರಕಾರ ವಕ್ಫ್ ತೋರಿಸಿದ ಜಾಗಕ್ಕೆ ಗೆಜೆಟ್ ನೊಟಿಫಿಕೇಷನ್ ಹೊರಡಿಸುವ ಅಧಿಕಾರ ಕೊಟ್ಟರು. ಈಗ ಕಾಂಗ್ರೆಸ್‌ನವರ ಆಮಿಷಕ್ಕೆ ಬಲಿಯಾದರೆ ನಮ್ಮ ಜಮೀನು, ಮಠ, ದೇವಸ್ಥಾನದ ಜಾಗಗಳನ್ನೆಲ್ಲ ಮುಸ್ಲಿಮರಿಗೆ ಕೊಡುತ್ತಾರೆ. ಇದು ಹೀಗೇ ಮುಂದುವರಿದರೆ, ಧರ್ಮಸ್ಥಳ, ಶೃಂಗೇರಿ ಮಠಗಳೂ ಉಳಿಯಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಳವಳ ವ್ಯಕ್ತಪಡಿಸಿದ್ದರು.












Click it and Unblock the Notifications