ವರ್ತೂರ್ ಸಂತೋಷ್‌ಗೆ ಜಾಮೀನು ನೀಡಿದ ಕೋರ್ಟ್
ಬೆಂಗಳೂರು, ಅಕ್ಟೋಬರ್ 27; ಕರ್ನಾಟಕದಲ್ಲಿ ಹುಲಿ ಉಗುರಿನ ಪೆಂಡೆಂಟ್ ಬಹು ಚರ್ಚಿತ ವಿಚಾರ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿ ವರ್ತೂರ್ ಸಂತೋಷ್‌ಗೆ ಜಾಮೀನು ಸಿಕ್ಕಿದೆ.
ಗುರುವಾರ ವರ್ತೂರ್ ಸಂತೋಷ್ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಬೆಂಗಳೂರಿನ ಕೋರ್ಟ್ ಶುಕ್ರವಾರ ಆದೇಶ ಪ್ರಕಟಿಸಿದೆ. ವರ್ತೂರ್ ಸಂತೋಷ್‌ಗೆ ಜಾಮೀನು ನೀಡಲಾಗಿದ್ದು, ಸಂಜೆ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಬಿಗ್ ಬಾಸ್ ಕಾರ್ಯಕ್ರಮದ ಮನೆಯಿಂದಲೇ ವರ್ತೂರ್ ಸಂತೋಷ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಶುಕ್ರವಾರ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ವರ್ತೂರ್ ಸಂತೋಷ್‌ಗೆ ಜಾಮೀನು ನೀಡಿದೆ. 4 ಸಾವಿರ ರೂ ನಗದು ಭದ್ರತೆ ಅಥವ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತು ಹಾಕಿ ಜಾಮೀನು ಮಂಜೂರು ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಬಳಿಕ ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕೋರ್ಟ್‌ನಿಂದ ಜಾಮೀನು ಆದೇಶ ಜೈಲಿಗೆ ತಲುಪಿದ ಬಳಿಕ ವರ್ತೂರ್ ಸಂತೋಷ್ ಬಿಡುಗಡೆಯಾಗಲಿದ್ದಾರೆ.
ಹಳ್ಳಿಕಾರ್ ತಳಿಯ ಹಸುಗಳ ರಕ್ಷಣೆ ಮಾಡುವ ಸಂತೋಷ್ ಕುಮಾರ್ ಎಸ್. ವರ್ತೂರ್ ಸಂತೋಷ್ ಎಂದೇ ಖ್ಯಾತಿ ಪಡೆದಿದ್ದಾರೆ. ಖಾಸಗಿ ವಾಹಿನಿಯ ಬಿಗ್ ಬಾಸ್ 10 ಕಾರ್ಯಕ್ರಮದ ಸ್ಪರ್ಧಿಯಾಗಿ ಅವರು ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದರು.
ವರ್ತೂರ್ ಸಂತೋಷ್ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅವರ ವಿರುದ್ಧ ದೂರು ದಾಖಲಾಗಿತ್ತು. ಅಕ್ಟೋಬರ್ 22ರಂದು ಬಿಗ್ ಬಾಸ್ ಮನೆಯಿಂದಲೇ ಪೊಲೀಸರು ಅವರನ್ನು ಬಂಧಿಸಿದ್ದರು.
ವರ್ತೂರ್ ಸಂತೋಷ್ ಪರ ವಕೀಲರು ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬುಧವಾರ ಜಾಮೀನು ಅರ್ಜಿ ವಿಚಾರಣೆ ನಡೆದಿರಲಿಲ್ಲ. ಗುರುವಾರ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತ್ತು. ಶುಕ್ರವಾರ ತೀರ್ಪು ಪ್ರಕಟಿಸಲಾಗಿದೆ.
ನ್ಯಾಯಾಲಯ ವರ್ತೂರ್ ಸಂತೋಷ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. 20 ಸಾವಿರ ರೂ. ನೀಡಿ ಹುಲಿ ಉಗುರು ಖರೀದಿ ಮಾಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವರ್ತೂರ್ ಸಂತೋಷ್ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ ವರ್ತೂರ್ ಸಂತೋಷ್ ಬಂಧನವಾಗುತ್ತಿದ್ದಂತೆಯೇ ಈ ಮಾದರಿ ಆಭರಣ ಧರಿಸಿದ ಹಲವರ ವಿರುದ್ಧ ಅರಣ್ಯ ಇಲಾಖೆಗೆ ದೂರು ದಾಖಲಾಗಿತ್ತು. ಅದರಲ್ಲಿ ನಟ ದರ್ಶನ್, ಜಗ್ಗೇಶ್ ವಿರುದ್ಧ ಸಹ ದೂರು ದಾಖಲಾಗಿತ್ತು.
ಡಿಆರ್‌ಎಫ್‌ಒ ಅಮಾನತು; ಹುಲಿ ಉಗುರಿನ ಪೆಂಡೆಂಟ್ ಧರಿಸಿದ ವರ್ತೂರ್ ಸಂತೋಷ್ ಬಂಧನವಾಗುತ್ತಿದ್ದಂತೆಯೇ ಈ ಮಾದರಿಯ ಆಭರಣ ಧರಿಸಿದ ಅನೇಕರ ವಿರುದ್ಧ ದೂರು ದಾಖಲಾಗುತ್ತಿದೆ. ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಸಹ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಬಗ್ಗೆ ಸುಪ್ರೀತ್, ಅಬ್ದುಲ್ ದೂರು ನೀಡಿದ್ದರು. ತನಿಖೆಗೆ ಹಾಜರಾಗುವಂತೆ ದರ್ಶನ್‌ಗೆ ಸೂಚನೆ ನೀಡಲಾಗಿತ್ತು.
ಆದರೆ ತನಿಖೆಗೆ ಹಾಜರಾಗದ ಹಿನ್ನಲೆಯಲ್ಲಿ ಡಿಆರ್‌ಎಫ್‌ಒ ದರ್ಶನ್ ಅಮಾನತುಗೊಳಿಸಿ ಕೊಪ್ಪದ ಡಿಎಫ್‌ಒ ನಂದೀಶ್ ಆದೇಶ ಹೊರಡಿಸಿದ್ದಾರೆ. ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಇರುವ ಸರ ಧರಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.












Click it and Unblock the Notifications