ಕನ್ನಡ ಮಕ್ಕಳ ನೋವನ್ನು ಎಂಜಾಯ್ ಮಾಡ್ತಿರೋರ ಕೆನ್ನೆಗೆ ಬಾರಿಸಬೇಕು: ಕರವೇ ಗುಡುಗು
ಕನ್ನಡದ ಮಕ್ಕಳಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಕನ್ನಡ ಮಕ್ಕಳ ನೋವನ್ನು ಎಂಜಾಯ್ ಮಾಡ್ತಿರೋರ ಕೆನ್ನೆಗೆ ಬಾರಿಸಬೇಕು ಎಂದು ಸಹ ಕರವೇ ಗುಡುಗಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಟಿ.ಎ ನಾರಾಯಣಗೌಡ ಅವರು, ಪ್ರಶ್ನೆ ಪತ್ರಿಕೆಯನ್ನು ಮೊದಲು ಇಂಗ್ಲಿಷ್‌ನಲ್ಲಿ ತಯಾರಿಸಿ, ಅದನ್ನು ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಈ ಧೋರಣೆಯನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ನಡೆಸಿತ್ತು. ಆದರೆ, ಈ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದವರಿಗೆ ಅನ್ಯಾಯವಾಗಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ. ಪ್ರಶ್ನೆ ಪತ್ರಿಕೆಯ ಭಾಷಾ ಮಾದರಿಗೆ ಆಕ್ಷೇಪ ವ್ಯಕ್ತವಾಗಿದ್ದು, ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಲಾಗುತ್ತಿದೆ.

ಕನ್ನಡದ ಮಕ್ಕಳಿಗೆ ಅನ್ಯಾಯವಾಗಲು ಬಿಡಲ್ಲ
ಕನ್ನಡದ ಮಕ್ಕಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಕರವೇ ಎಚ್ಚರಿಸಿದೆ. ಕೆಪಿಎಸ್‌ಸಿ ನಡೆಸಿರುವ ಪರೀಕ್ಷೆಯನ್ನು 1.36 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳು. ಈ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಪ್ರಶ್ನೆ ಪತ್ರಿಕೆಯಲ್ಲಿ ಉಂಟಾದ ತರ್ಜುಮೆ ಸಮಸ್ಯೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ (ಕರವೇ) ಟಿ.ಎ ನಾರಾಯಣ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲೇ 2ಗಂಟೆ ಬೇಕು!
ಕರ್ನಾಟಕ ಲೋಕಸೇವಾ ಆಯೋಗವು ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಮಾಡಿರುವ ತಪ್ಪುಗಳನ್ನು ನೋಡಿದರೆ, ಇದರ ಹಿಂದೆ ಯಾವುದೋ ಹುನ್ನಾರವಿರುವಂತೆ ಇದೆ ಎಂದು ಕರವೇ ಅನುಮಾನ ವ್ಯಕ್ತಪಡಿಸಿದೆ. ಪ್ರಶ್ನೆ ಪತ್ರಿಕೆಯಲ್ಲಿ ಒಂದೆರಡು ತಪ್ಪುಗಳಾದರೆ, ಕಣ್ತಪ್ಪಿನಿಂದ ತಪ್ಪಾಗಿದೆ ಎಂದು ಹೇಳಬಹುದು. ಅನುವಾದ ಮಾಡುವಾಗ ಸಣ್ಣಪುಟ್ಟ ತಪ್ಪಾಗಿದೆ ಎಂದು ಹೇಳಬಹುದಿತ್ತು. ಆದರೆ, 120 ಅಂಕಗಳನ್ನು ಒಳಗೊಂಡ ಬರೋಬ್ಬರಿ 60 ಪ್ರಶ್ನೆಗಳು ತಪ್ಪಾಗುವುದು ಎಂದರೆ ಇದರ ಅರ್ಥವೇನು ಎಂದು ನಾರಾಯಣಗೌಡ ಅವರು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಭಾಷೆಗೆ ಮೊದಲು ಆದ್ಯತೆ ಕೊಡಿ
ಕರ್ನಾಟಕದಲ್ಲಿ ಕನ್ನಡಭಾಷೆಗೆ ಮೊದಲ ಆದ್ಯತೆ ಕೊಡಬೇಕು. ಕರ್ನಾಟಕದಲ್ಲಿ ನಡೆಯುವ ಯಾವುದೇ ಮಾದರಿಯ ಪರೀಕ್ಷೆಗಾದರೂ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ಆದರೆ, ಕೆಪಿಎಸ್‌ಸಿ ನಡೆಸಿರುವ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಮೊದಲು ಇಂಗ್ಲಿಷ್‌ನಲ್ಲಿ ತಯಾರಿಸಿ, ನಂತರ ಅದನ್ನು ಕನ್ನಡಕ್ಕೆ ಭಾಷಾಂತರಿಸಲಾಗಿದೆ. ಆದರೆ, ಕೆಪಿಎಸ್‌ಸಿಯು ದುಂಡಾವರ್ತನೆ ಪ್ರದರ್ಶಿಸಿದೆ. ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡುವ ಬದಲು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ.
ಈ ರೀತಿ ಭಾಷಾಂತರ ಮಾಡುವ ಸಂದರ್ಭದಲ್ಲಿಯೂ ಕನ್ನಡ ಮಾಧ್ಯಮದವರಿಗೆ ಅರ್ಥವಾಗದಂತೆ ಭಾಷಾಂತರ ಮಾಡಲಾಗಿದೆ. ಈ ಅಂಶಗಳನ್ನು ಗಮನಿಸಿದರೆ, ಅನುಮಾನ ಮೂಡುತ್ತದೆ. ಅಲ್ಲದೇ ಇದು ಕನ್ನಡ ವಿರೋಧಿ ಧೋರಣೆ ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಮರುಪರೀಕ್ಷೆ ನಡೆಸಬೇಕು. ಮುಖ್ಯವಾಗಿ ಕನ್ನಡದಲ್ಲೇ ಮೊದಲು ಪ್ರಶ್ನೆ ಪತ್ರಿಕೆ ತಯಾರಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications