ಇಂದಿನ ದಾಳಿ ಯೋಧರ ಕುಟುಂಬದ ಕಣ್ಣೀರಿಗೆ ಕೊಟ್ಟ ಉತ್ತರ : ತಾರಾ
Recommended Video

ಬೆಂಗಳೂರು, ಫೆಬ್ರವರಿ 26 : 'ಇಂದು ನಡೆದ ದಾಳಿ ಅನಿವಾರ್ಯವಾಗಿತ್ತು. ಯೋಧರ ಕುಟುಂಬದವರ ಕಣ್ಣೀರಿಗೆ ನಾವು ಕೊಟ್ಟ ಉತ್ತರವಿದಾಗಿದೆ' ಎಂದು ನಟಿ, ಬಿಜೆಪಿ ನಾಯಕಿ ತಾರಾ ಅನುರಾಧ ಹೇಳಿದರು.
ಭಾರತೀಯ ವಾಯುಸೇನೆ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿದ ಬಗ್ಗೆ ಒನ್ ಇಂಡಿಯಾ ಜೊತೆ ಮಾತನಾಡಿದ ತಾರಾ ಅನುರಾಧ ಅವರು, 'ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಂದು ಹೆಜ್ಜೆಯ ಬಗ್ಗೆ ನನಗೆ ಹೆಮ್ಮೆ ಇದೆ' ಎಂದರು.
'ಭಾರತೀಯರು ಶಾಂತಿ ಪ್ರಿಯರು. ಯುದ್ಧ ನಾವು ಬಯಸಿದ್ದಲ್ಲ. ನಮಗೆ ಬಹಳ ತಾಳ್ಮೆ, ಸಹನೆ ಇದೆ. ಮಹಾತ್ಮ ಗಾಂಧಿ ಇದನ್ನು ನಮಗೆ ಹೇಳಿಕೊಟ್ಟರು. ಆ ಮಾತಿನ ಮೇಲೆಯೇ ಬೆಳೆದು ಬಂದ ಸಂಸ್ಕೃತಿ ನಮ್ಮದು' ಎಂದು ಹೇಳಿದರು.

'ಒಂದರ ಮೇಲೆ ಒಂದು ಪೆಟ್ಟುಗಳು ನಮಗೆ ಬಿದ್ದವು. ಆಗ ನಾವು ಶಾಂತಿಯುತವಾಗಿ ಇದ್ದೆವು. ಆದರೆ, ಅದನ್ನು ಅವರು ಉತ್ತರ ಕೊಡಲಾಗದವರ ಎಂದುಕೊಂಡರು. ಉತ್ತರ ಕೊಡದೇ ಹಾಗೆ ಇದ್ದರೆ ನಮ್ಮನ್ನು ಮೆಟ್ಟಿ ನಿಂತು ದುರಾಚಾರ ಮಾಡುವ ಸಾಧ್ಯತೆ ಇತ್ತು. ಆದ್ದರಿಂದ, ಉತ್ತರ ಕೊಡಲಾಗಿದೆ' ಎಂದು ತಾರಾ ಹೇಳಿದರು.
'ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಪ್ರತಿಪಕ್ಷಗಳು ಹಲವಾರು ಪ್ರಶ್ನೆಗಳನ್ನು ಕೇಳಿದವು. ಸಾಕ್ಷಿ ಎಲ್ಲಿವೆ ಎಂದು ಕೇಳಿದವು. ಈಗ ಆ ಕುರಿತು ಒಂದು ಸಿನಿಮಾವೇ ಬಂದು ಅದರ ಬಗ್ಗೆ ಜನರಿಗೂ ಮಾಹಿತಿ ತಲುಪುತ್ತಿದೆ' ಎಂದು ತಿಳಿಸಿದರು.
'ಇಂದಿನ ದಾಳಿ ಅನಿವಾರ್ಯವಾಗಿತ್ತು. ದಾಳಿ ಮಾಡಲಿಲ್ಲ ಎಂದರೆ ಅಸ್ತಿತ್ವವನ್ನು ಕಳೆದು ಕೊಳ್ಳಬೇಕಿತ್ತು. ಭಾರತದಲ್ಲಿರುವ ಯೋಧರ ಶಕ್ತಿ, ಶೌರ್ಯ ಏನೆಂದು ತೋರಿಸಲು ಅವಕಾಶ ಸಿಕ್ಕಿತ್ತು. ಇದರ ಬಗ್ಗೆ ಹೆಮ್ಮೆ ಇದೆ' ಎಂದರು.
'ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬದವರ ಕಣ್ಣೀರಿಗೆ ನಾವು ಕೊಟ್ಟ ಉತ್ತರ ಇದು. ಅವರ ದುಃಖದಲ್ಲಿ ನಾವು ಪೂರ್ಣವಾಗಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಆದರೆ, ನಮ್ಮ ಅಕ್ಕಪಕ್ಕದ ದೇಶದವರು ಮುನುಷ್ಯರೇ ಅವರು ಶಾಂತಿ ಕಾಪಾಡಬೇಕು. ಪುಂಡಾಟಿಕೆ ಮಾಡಬಾರದು' ಎಂದು ತಾರಾ ಸಲಹೆ ನೀಡಿದರು.
'ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ಯಾವಾಗಲೇ ದೇಶ ಮೊದಲು ಆಮೇಲೆ ನಾವೆಲ್ಲರೂ ಎಂದು ಹೇಳುತ್ತಾರೆ. ಈ ರೀತಿಯ ಆಲೋಚನೆ ಇರುವವರು ನಮ್ಮ ಪ್ರಧಾನಿ ಆಗಿರುವುದು ನಮ್ಮ ಸೌಭಾಗ್ಯ' ಎಂದರು.











Click it and Unblock the Notifications