ಚುನಾವಣೆ ಕಣಕ್ಕಿಳಿಯಲು ಕೃಷಿ ಇಲಾಖೆ ಕೆಲಸಕ್ಕೆ ರಾಜೀನಾಮೆ!
ಬಳ್ಳಾರಿ, ಜನವರಿ 02 : ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಜೆಡಿಎಸ್‌ನಿಂದ ಈ ಬಾರಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ಸ್ಪರ್ಧಿಸಲಿದ್ದಾರೆ. ಕ್ಷೇತ್ರದ ಶಾಸಕ ಭೀಮಾ ನಾಯಕ್ ಈಗಾಗಲೇ ಜೆಡಿಎಸ್‌ನಿಂದ ಅಮಾನತುಗೊಂಡಿದ್ದು, ಕಾಂಗ್ರೆಸ್ ಸೇರಲಿದ್ದಾರೆ.
ಡಾ.ತಿಪ್ಪೇಸ್ವಾಮಿ ವೆಂಕಟೇಶ್ 2018ರ ಚುನಾವಣೆಯಲ್ಲಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕೃಷಿ ಇಲಾಖೆ ಅಧಿಕಾರಿಯಾಗಿದ್ದ ಇವರು ಮಾರ್ಚ್ ತಿಂಗಳಿನಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯಕ್ಕೆ ಧುಮುಕಿದ್ದಾರೆ.
ಬೋವಿ ಸಮಯದಾಯಕ್ಕೆ ಸೇರಿದ ತಿಪ್ಫೇಸ್ವಾಮಿ ಅವರು ಮೂಲತಃ ಜಗಳೂರು ತಾಲೂಕಿನವರು. ಕೃಷಿ ಅಧಿಕಾರಿಯಾಗಿ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಂದಾಯ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಈಗ ಸರ್ಕಾರ ಕೆಲಸ ಬಿಟ್ಟು ರಾಜಕಾರಣ ಆರಂಭಿಸಿದ್ದಾರೆ.

ಡಾ.ತಿಪ್ಪೇಸ್ವಾಮಿ ವೆಂಕಟೇಶ್ ಅವರು ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಂಚಾರ ನಡೆಸಿ ಒಂದು ಸುತ್ತಿನ ಪ್ರಚಾರ ಮುಕ್ತಾಯಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣ, ವಾಟ್ಸಪ್ ಗ್ರೂಪ್‌ಗಳ ಮೂಲಕ ಯುವಕರನ್ನು ತಲುಪುತ್ತಿದ್ದಾರೆ.
'ಕ್ಷೇತ್ರ ಈಗಾಗಲೇ ಜೆಡಿಎಸ್ ವಶದಲ್ಲಿಯೇ ಇದೆ. ಪಕ್ಷದಿಂದ ಆಯ್ಕೆಯಾಗಿ, ಕಾಂಗ್ರೆಸ್ ಸೇರುವ ಮೂಲಕ ಜನರಿಗೆ ದ್ರೋಹ ಮಾಡುತ್ತಿರುವ ಭೀಮಾ ನಾಯಕ್ ಅವರನ್ನು ಸೋಲಿಸುವುದು ನನ್ನ ಗುರಿ' ಎಂದು ಡಾ.ತಿಪ್ಪೇಸ್ವಾಮಿ ವೆಂಕಟೇಶ್ ಹೇಳಿದ್ದಾರೆ.
ಅಂದಹಾಗೆ 2013ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ನ ಭೀಮಾ ನಾಯಕ್ 51,972 ಮತಗಳನ್ನು ಪಡೆದು ಜಯಗಳಿಸಿದ್ದರು. ಆದರೆ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬೆಂಬಲಿಸಿದ ಕಾರಣ ಪಕ್ಷ ಅವರನ್ನು ಅಮಾನತು ಮಾಡಿತ್ತು.












Click it and Unblock the Notifications