ಅಖಾಡದಲ್ಲಿ ಒಂಟಿಯಾದ್ರಾ 'ಬಂಡೆ'; "ಡಿ.ಕೆ. ಶಿವಕುಮಾರ್ ಸಿಎಂ ಆಗುವ ಭರವಸೆ, ನಂಬಿಕೆ ಈಗಲೂ ಇದೆ"
ಬೆಂಗಳೂರು, ಜುಲೈ 03: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಕೂಗಿನ ನಡುವೆ ನಾನೇ ಐದು ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಹೇಳಿರುವುದು ಡಿ ಕೆ ಶಿವಕುಮಾರ್ ಬೆಂಬಲಿಗರಿಗೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ಪ್ರತಿಕ್ರಿಯಿಸಿದ್ದು, ಸಿಎಂ ಸ್ಥಾನ ಸಧ್ಯಕ್ಕೆ ಖಾಲಿ ಇಲ್ಲ, ಹೀಗಾಗಿ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದರಲ್ಲಿ ತಪ್ಪೇನಿದೆ? ಪಕ್ಷದ ಶಿಸ್ತಿನ ಸಿಪಾಯಿಯಾಗಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮಾತಿಗೆ ಬದ್ಧರಾಗಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗುವ ಭರವಸೆ, ನಂಬಿಕೆ ಈಗಲೂ ಇದೆ ಎಂದು ತಿಳಿಸಿದ್ದಾರೆ.
ಶಿವಕುಮಾರ್ ಅವರು ಸಿಎಂ ಆಗಬೇಕು ಎಂಬ ಆಸೆ ಇದೆ. ಆ ಭರವಸೆ ಇಂದೂ ಇದೆ, ನಾಳೆಯೂ ಇರುತ್ತದೆ. ನಂಬಿಕೆ ಎಂಬುದು ನಮ್ಮ ಜೀವನ ನಡೆಸಲು ಪ್ರೇರಣೆ. ನಂಬಿಕೆ ಇಲ್ಲದಿದ್ದರೆ ಜೀವನ ಮಾಡುವುದೇ ಕಷ್ಟವಾಗುತ್ತದೆ. ನನಗೆ ಈಗಲೂ ಆಸೆ ಇದೆ. ಅವರು ಪಕ್ಷಕ್ಕೆ ಬಹಳ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಕೆಲವು ಭಾಗದ ಜನರು ವಿಶ್ವಾಸ ಇಟ್ಟು ಶಿವಕುಮಾರ್ ಅವರಿಗೆ ಒಂದು ಬಾರಿ ಅವಕಾಶ ಸಿಗಲಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಈಗ ಸಿಎಂ ಸೀಟು ಖಾಲಿ ಇಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಹೇಳಿದ್ದರಲ್ಲಿ ತಪ್ಪೇನಿದೆ. ಮುಖ್ಯಮಂತ್ರಿಯಾಗಿರುವವರು ಮುಂದುವರಿಯುತ್ತೇನೆ ಎಂದು ಹೇಳಿದರೆ ಅದರಲ್ಲಿ ತಪ್ಪೇನಿದೆ? ಅವರು ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕಾಂಗ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನ ಮಾಡಿ ಅವರನ್ನು ಸಿಎಂ ಮಾಡಿದೆ. ಅವರು ಸರ್ಕಾರ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಚರ್ಚೆ ಏನು? ಎಂದು ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನನ್ನ ಮುಂದೆ ಯಾವುದೇ ಆಯ್ಕೆ ಇಲ್ಲ, ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ ಎಂಬ ಬಗ್ಗೆ ಮಾತನಾಡಿ, ಅವರು ಮೊದಲಿನಿಂದಲೂ ಅದನ್ನೇ ಹೇಳುತ್ತಿದ್ದಾರೆ, ಈಗಲೂ ಅದನ್ನೇ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ, ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹಿಂದೆಯೂ ಹೇಳಿದ್ದರು. ಈಗಲೂ ಹೇಳಿದ್ದಾರೆ. ಮುಂದೆಯೂ ಹೇಳುತ್ತಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಹೈಕಮಾಂಡ್ ತೀರ್ಮಾನವನ್ನು ಪಾಲಿಸಿ ಶಿಸ್ತು ಕಾಪಾಡುವುದು ಅವರ ಕರ್ತವ್ಯ. ಹಾಗಾಗಿ ಅವರು ಕೆಲವು ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.
ಶಿವಕುಮಾರ್ ಅವರ ಶ್ರಮಕ್ಕೆ ಪ್ರತಿಫಲ ಸಿಗುತ್ತದೆಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಖಂಡಿತವಾಗಿ ಯಾವುದಾದರೂ ಒಂದು ದಿನ ಪ್ರತಿಫಲ ಸಿಗಬೇಕು. ಸಿಕ್ಕೇ ಸಿಗುತ್ತದೆ. ಅವರು ಸಿಎಂ ಆಗುತ್ತಾರೋ ಇಲ್ಲವೋ ಎಂಬ ವಿಚಾರ ತೀರ್ಮಾನ ಮಾಡಲು ನಾನು ಸಣ್ಣವನು. ಈ ವಿಚಾರವನ್ನು ವರಿಷ್ಠರು ತೀರ್ಮಾನ ಮಾಡಬೇಕು. ಸಧ್ಯಕ್ಕೆ ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರದಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ಎರಡೂವರೆ ವರ್ಷಗಳ ಬಳಿಕ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಕೆಲವು ಶಾಸಕರು ಹಾಗೂ ಕಾರ್ಯಕರ್ತರಲ್ಲಿತ್ತು, ಏಕಾಏಕಿ ಶಿವಕುಮಾರ್ ಅವರು ಆಯ್ಕೆ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಕೇಳಿದಾಗ, "ಅದು ಅಸಹಾಯಕತೆ ಅಲ್ಲ. ಅದು ಪಕ್ಷ ಹಾಗೂ ಅದರ ನಾಯಕತ್ವಕ್ಕೆ ನೀಡುವ ಗೌರವ. ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ನಾವು ಪಕ್ಷಕ್ಕೆ ಗೌರವ ನೀಡಬೇಕು. ಶಿವಕುಮಾರ್ ಅವರು ಆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಗೊಂದಲ ನಿವಾರಣೆಗೆ ಇಂತಹ ಹೇಳಿಕೆ ನೀಡುತ್ತಿದ್ದು, ಮುಂದೆ ಅವರು ಸಿಎಂ ಆಗುತ್ತಾರಾ ಎಂಬ ಬಗ್ಗೆ ಮಾತನಾಡಿ, ನನಗೆ ಆ ವಿಚಾರ ಗೊತ್ತಿಲ್ಲ. ನಾನು ಅಷ್ಟು ದೊಡ್ಡವನಲ್ಲ. ಯಾರೇ ಮುಖ್ಯಮಂತ್ರಿಯಾದರೂ ಪ್ರಧಾನಮಂತ್ರಿಯಾದರೂ, ಶಾಸಕ ಹಾಗೂ ಮಂತ್ರಿಯಾಗಬೇಕಾದರೆ ಅದು ಪಕ್ಷದ ತೀರ್ಮಾನ. ಕೆಲವು ಸಂದರ್ಭದಲ್ಲಿ ಪಕ್ಷದ ಹೊರತಾಗಿ ಜನ ತೀರ್ಮಾನ ಮಾಡಿರುತ್ತಾರೆ. ಬಹುತೇಕ ಎಲ್ಲಾ ಪಕ್ಷದ ವ್ಯವಸ್ಥೆ ಒಳಗೆ ಎಲ್ಲರೂ ಆಯ್ಕೆಯಾಗುತ್ತಾರೆ. ಹೀಗಾಗಿ ಪಕ್ಷವನ್ನು ಬಲಪಡಿಸಬೇಕು. ಪಕ್ಷದ ನಿಯಮ, ಆಚಾರ ವಿಚಾರ ಒಪ್ಪಬೇಕಾಗುತ್ತದೆ ಎಂದು ತಿಳಿಸಿದರು.












Click it and Unblock the Notifications