ಕಾಂಗ್ರೆಸ್ 'ಗ್ಯಾರಂಟಿ' ಟೀಕಿಸಿದ ಬಿಜೆಪಿ ನಾಯಕರಿಗೆ 'ಟಿಕೆಟ್ ಗ್ಯಾರಂಟಿ' ಇಲ್ಲ: 'ಕೈ' ಪಕ್ಷದ ವ್ಯಂಗ್ಯ
ಬೆಂಗಳೂರು, ಏಪ್ರಿಲ್ 14: ಬಿಜೆಪಿ ನಾಯಕರು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಟೀಕಿಸುತ್ತಿದ್ದರು. ಈಗ ಆ ನಾಯಕರಿಗೆ ಟಿಕೆಟ್ ಗ್ಯಾರಂಟಿ ಇಲ್ಲ, ಟಿಕೆಟ್ ಸಿಕ್ಕವರಿಗೆ ಗೆಲುವಿನ ಗ್ಯಾರಂಟಿ ಇಲ್ಲ, ರಾಜ್ಯದಲ್ಲಿ ಬಿಜೆಪಿಗೇ ಗ್ಯಾರಂಟಿ ಇಲ್ಲ. ನಾವು ಅಧಿಕಾರಕ್ಕೆ ಬರುವುದೂ ಗ್ಯಾರಂಟಿ, ನಮ್ಮ ಭರವಸೆಗಳನ್ನೂ ಈಡೇರಿಸುವುದೂ ಗ್ಯಾರಂಟಿ, ಪ್ರಗತಿ ತರುವುದೂ ಗ್ಯಾರಂಟಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
'ಬಿಜೆಪಿ ಈಗ ಮುಳುಗಿದ ಹಡಗು. ಅಲ್ಲಿ ಮೊ-ಶಾ ಜೋಡಿ, ಇಲ್ಲಿ ಜೋಶಿ - ಸಂತೋಷ್ ಜೋಡಿ ಪಕ್ಷದಲ್ಲಿ ಸರ್ವಾಧಿಕಾರ ಸ್ಥಾಪಿಸಲು ಮಾಡಿದ ಹುನ್ನಾರಗಳು ಬಿಜೆಪಿಗೇ ಮುಳುವಾಗಲಿದೆ. ಕೆಡರ್ ಕಾರ್ಯಕರ್ತರು ಎನ್ನುತ್ತಿದ್ದರು, ಈಗ ಬಿಜೆಪಿಗೆ ಕೇಡಿ ಕಾರ್ಯಕರ್ತರಾಗಿದ್ದಾರೆ. ಶಿಸ್ತಿನ ಪಕ್ಷ ಎಂದುಕೊಳ್ಳುತ್ತಿದ್ದರು, ಈಗ ಕುಸ್ತಿಯ ಪಕ್ಷವಾಗಿದೆ' ಎಂದು ಕಾಂಗ್ರೆಸ್ ಟ್ರೋಲ್ ಮಾಡಿದೆ.

'ಕೊಟ್ಟ ಭರವಸೆಗಳು ಆರುನೂರು, ಈಡೇರಿಸಿದ್ದನ್ನು ಕಂಡವರಾರು. ಇದು ಬಿಜೆಪಿಯ ಹಿಂದಿನ ಪ್ರಣಾಳಿಕೆಯ ಭರವಸೆಗಳ ಅಸಲಿ ಕತೆ. ಅಭಿವೃದ್ಧಿಪರ ಚಿಂತನೆ ಇಲ್ಲದ ಬಿಜೆಪಿಯಿಂದ ಬೇಸತ್ತಿರುವ ಕರ್ನಾಟಕಕ್ಕೆ ಕೆಲವೇ ದಿನಗಳಲ್ಲಿ ಆಶಾದಾಯಕ ದಿನಗಳು ಬರಲಿವೆ. ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ. ಬಿಜೆಪಿ ವಂಚಕರ ಮಾತಿಗೆ ಮರುಳಗದೆ ಕಾಂಗ್ರೆಸ್ ಬೆಂಬಲಿಸಿ' ಎಂದು ಕೆಪಿಸಿಸಿ ಟ್ವೀಟಿಸಿದೆ.
ಮೀಸಲಾತಿ: ಬಿಜೆಪಿ ವಿರುದ್ಧ ವಾಗ್ದಾಳಿ
'ಅಧ್ಯಯನವಿಲ್ಲದೆ ಚುನಾವಣೆ ಗಿಮಿಕ್‌ಗಾಗಿ ಮುಸ್ಲಿಂ ಮೀಸಲಾತಿಯನ್ನು ಕಿತ್ತು ಮೂಗಿಗೆ ತುಪ್ಪ ಸವರುವ ನಿರ್ದಾರ ದೋಷಪೂರಿತ ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಬಿಜೆಪಿ ಸರ್ಕಾರದ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. 'ಅನುಷ್ಠಾನ ಅಸಾಧ್ಯ' ಎಂಬುದು ಸುಪ್ರೀಂ ಹೇಳುವ ಮೂಲಕ ಬಿಜೆಪಿಯ ಕಿವಿ ಮೇಲೆ ಹೂವು ಇಡುವ ಪ್ರಯತ್ನವನ್ನು ಬಯಲುಗೊಳಿಸಿದೆ' ಎಂದು ಕಾಂಗ್ರೆಸ್ ಹೇಳಿದೆ.
' ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಮೀಸಲಾತಿ ಗಿಮಿಕ್ ಅನುಷ್ಠಾನ ಮಾಡುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜನತೆಗೆ ಈಗ ನಿಮ್ಮ ಉತ್ತರವೇನು, ಸಾಬೂಬುಗಳೇನು? ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಜಯಂತಿ ಸಂದರ್ಭದಲ್ಲಿ ಸಂವಿಧಾನದ ಆಶಯವನ್ನು ಸುಪ್ರೀಂ ಎತ್ತಿ ಹಿಡಿದಿದೆ. ಹಾಗೂ ಬಿಜೆಪಿಯ ಸಂವಿಧಾನ ವಿರೋಧಿ ನೀತಿಯನ್ನು ಬೆತ್ತಲುಗೊಳಿಸಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಸೇರಲಿರುವ ಲಕ್ಷ್ಮಣ ಸವದಿ
ಮಾಜಿ ಡಿಸಿಎಂ ಹಾಗೂ ಬಿಜೆಪಿ ಎಂಎಲ್‌ಸಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಬಿಜೆಪಿ ಅವರನ್ನು ಅಭ್ಯರ್ಥಿಯನ್ನಾಗಿ ಕೈಬಿಟ್ಟ ಬಳಿಕ, ಕಾಂಗ್ರೆಸ್‌ನ ಉನ್ನತ ನಾಯಕರೊಂದಿಗೆ ಅವರು ಮಾತುಕತೆ ನಡೆಸಿದರು.
ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸಿದ್ದರಾಮಯ್ಯ ಅವರ ಮನೆಯಲ್ಲಿ ಸಭೆ ನಡೆಸಿದರು.
ಮೇ 10 ರ ಕರ್ನಾಟಕ ಚುನಾವಣೆಗೆ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳನ್ನು ಘೋಷಿಸಿದ ಒಂದು ದಿನದ ನಂತರ, ಲಕ್ಷ್ಮಣ್ ಸವದಿ ಬುಧವಾರ ಬಿಜೆಪಿ ತೊರೆದಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ಸವದಿ ಅವರನ್ನು ಅಥಣಿ ಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆ. ಅವರ ನಿರ್ಗಮನದಿಂದ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.
'ಅವರು ( ಲಕ್ಷ್ಮಣ ಸವದಿ ) ಅನುಭವಿ, ಅತ್ಯಂತ ಹಿರಿಯ ನಾಯಕ. ಇದು ಸಾಮಾಜಿಕ ಸಭೆಯಾಗಿದೆ. ನಾವು ನಿಮಗೆ ತಿಳಿಸುತ್ತೇವೆ' ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಸಭೆಯ ಬಳಿಕ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಂತರ ಕರ್ನಾಟಕದಲ್ಲಿ ಬಿಜೆಪಿಯ ಅತ್ಯಂತ ಪ್ರಮುಖ ಲಿಂಗಾಯತ ನಾಯಕರಲ್ಲಿ ಲಕ್ಷ್ಮಣ ಸವದಿ ಒಬ್ಬರು.
'ನಾನು ನನ್ನ ನಿರ್ಧಾರವನ್ನು ಮಾಡಿದ್ದೇನೆ. ನಾನು ಭಿಕ್ಷಾಪಾತ್ರೆಯೊಂದಿಗೆ ತಿರುಗಾಡುವವನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ. ನಾನು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ' ಎಂದು ಸವದಿ ಸುದ್ದಿಗಾರರಿಗೆ ತಿಳಿಸಿದರು.












Click it and Unblock the Notifications