DCM DK Shivakumar: ಅಧಿಕಾರ ಹಂಚಿಕೆಗೆ ಪರಮೇಶ್ವರ್ ಗರಂ: ಡಿ ಕೆ ಶಿವಕುಮಾರ್ ಕೊಟ್ಟ ಉತ್ತರವೇನು?
ಬೆಂಗಳೂರು, ಡಿಸೆಂಬರ್ 05: ಅಧಿಕಾರ ಹಂಚಿಕೆ ಸಂಬಂಧಿಸಿದಂತೆ ಒಪ್ಪಂದ ಆಗಿದೆ ಎಂದಾದರೆ ನಾವೆಲ್ಲರೂ ಯಾಕೆ ಇರಬೇಕು? ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಲಿ ಬಿಡಿ. ಬೇರೆಯವರು ಇರುವುದೇ ಬೇಡವಾ ಎಂದು ಪರಮೇಶ್ವರ್ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾತನಾಡಿ, ನಾನು ನಿಮ್ಮ ಮುಂದೆ ಏನೂ ಮಾತನಾಡಿಲ್ಲ. ಪರಮೇಶ್ವರ ಹಾಗೂ ಇತರರ ಜತೆ ಮಾತನಾಡಿಲ್ಲ. ನಾನು ವಾಹಿನಿಯಂದರಲ್ಲಿ ನನ್ನದೇ ಆದ ವಿಚಾರ ಪ್ರಸ್ತಾಪ ಮಾಡಿದ್ದೆ. ನಾವು ಏನು ಮಾತನಾಡಿಕೊಂಡಿದ್ದೇವೆ ಎಂದು ನಿಮ್ಮ ಮುಂದೆ ಹೇಳಲು ಸಾಧ್ಯವೇ? ಈ ವಿಚಾರವಾಗಿ ಮುಖ್ಯಮಂತ್ರಿಗಳು ನಿನ್ನೆ ಯಾವುದೇ ಚರ್ಚೆ ಇಲ್ಲ ಎಂದು ಹೇಳಿದ್ದು, ನಾನು ಚರ್ಚೆ ಮಾಡುವುದಿಲ್ಲ ಎಂದು ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಮಾತನ್ನು ನಾನು ಒಪ್ಪುತ್ತೇನೆ. ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ. ಯಾವುದೇ ಸಮಸ್ಯೆ ಇಲ್ಲದೆ ನಮ್ಮ ಸರಕಾರದ ಅಧಿಕಾರ ಅವಧಿ ಪೂರ್ಣಗೊಳಿಸುತ್ತೇವೆ. ನನ್ನ ಹಾಗೂ ಪರಮೇಶ್ವರ ಭಿನ್ನಾಭಿಪ್ರಾಯ ಇಲ್ಲ. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯವಿಲ್ಲ. ರಾಜಕೀಯದಲ್ಲಿ ನನಗೆ ಯಾರೂ ವೈರಿಗಳಲ್ಲ. ಎಲ್ಲರೂ ನನ್ನ ಸ್ನೇಹಿತರೇ. ಪಕ್ಷದಲ್ಲಿ ನಾವು ಜತೆಗೂಡಿ ಕೆಲಸ ಮಾಡಿದ್ದು, ಮುಂದೆಯೂ ಜತೆಯಲ್ಲೇ ಸಾಗುತ್ತೇವೆ. ಜತೆಗೂಡಿ ಯಶಸ್ಸು ಕಾಣುತ್ತೇವೆ ಎಂದು ಹೇಳಿದರು.
ನಮ್ಮ ಪಕ್ಷ ಹಾಗೂ ಅನೇಕ ಸ್ವಾಭಿಮಾನಿ ಸಂಘಟನೆಗಳು ಸೇರಿ ಮಾಡುತ್ತಿರುವ ಕಾರ್ಯಕ್ರಮ. ಮುಂದೆ ಬೇರೆ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಾವು ಸಹಕಾರ ನೀಡುತ್ತೇವೆ ಎಂದು ಅನೇಕ ಸಂಘಟನೆಗಳು ಮುಂದೆ ಬಂದಿವೆ. ಹಾಸನದಲ್ಲಿ ನಮ್ಮ ತಾಯಂದಿರು ಕಣ್ಣೀರು ಹಾಕಿದಾಗ ಅವರ ಕಣ್ಣೀರನ್ನು ಯಾರೂ ಒರೆಸುವ ಪ್ರಯತ್ನ ಮಾಡಲಿಲ್ಲ. ಚನ್ನಪಟ್ಟಣಕ್ಕೆ ಬಂದು ಕಣ್ಣೀರು ಹಾಕಿದರು. ಬಿಜೆಪಿ ಹಾಗೂ ಜೆಡಿಎಸ್ ತಮ್ಮ ನೆಲೆ ಕಳೆದುಕೊಳ್ಳುತ್ತಿದ್ದು, ಸಂಕಟದಿಂದ ನಮ್ಮ ಕಾರ್ಯಕ್ರಮವನ್ನು ಟೀಕಿಸುತ್ತಿವೆ. ನಮಗೆ ಬಲ ಪ್ರದರ್ಶನದ ಅಗತ್ಯವಿಲ್ಲ. ನಮ್ಮ ಪಕ್ಷದ ಆಚಾರ ವಿಚಾರಗಳನ್ನು ಜನರಿಗೆ ತಿಳಿಸಲು ಕಾರ್ಯಕ್ರಮ ಮಾಡಿದರೆ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಹೊಟ್ಟೆಯುರಿ ಏಕೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಪರಮೇಶ್ವರ್ ಹೇಳಿದ್ದೇನು?
ಅಧಿಕಾರ ಒಪ್ಪಂದ ಆಗಿದೆ ಎಂದು ಡಿಕೆ ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದರು ನನಗೆ ಗೊತ್ತಿಲ್ಲ. ದೆಹಲಿಯಲ್ಲಿ ಮೂರ್ನಾಲ್ಕು ಜನರಿಗೆ ನಾನು ಕೇಳಿದೆ ಹಾಗೂ ಇಲ್ಲೂ ಕೇಳಿದೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಹೇಳಿದ್ದಾರೆ. ಒಪ್ಪಂದ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟಣೆ ನೀಡಿದ್ದಾರೆ. ಒಪ್ಪಂದ ಆಗಿದೆ ಎಂದಾದರೆ ನಾವೆಲ್ಲರೂ ಯಾಕೆ ಇರಬೇಕು? ಅವರಿಬ್ಬರೇ ರಾಜಕಾರಣ ಮಾಡಿ, ಅವರಿಬ್ಬರೇ ನಡೆಸಲಿ ಬಿಡಿ. ಬೇರೆಯವರು ಇರುವುದೇ ಬೇಡವಾ ಎಂದು ಗೃಹ ಸಚಿವರಾದ ಪರಮೇಶ್ವರ್ ಅವರು ಪ್ರಶ್ನಿಸಿದ್ದಾರೆ.
ಜನ ಕಲ್ಯಾಣ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಜನ ಸ್ವಾಭಿಮಾನಿ ಒಕ್ಕೂಟಗಳನ್ನು ಮಾಡಿಕೊಂಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ, ಸರ್ಕಾರಕ್ಕೆ ಸಿಂಪಥೈಸರ್ಸ್. ಅವರೊಂದಿಗೆ ಪಕ್ಷವೂ ಸೇರಿದೆ. ಎಲ್ಲ ಒಟ್ಟಿಗೆ ಸೇರಿ ಸಮಾವೇಶ ಮಾಡುತ್ತಿದ್ದೇವೆ. ಚುನಾವಣೆ ಸಂಧರ್ಭದಲ್ಲಿ ರಾಜಕೀಯವಾಗಿ ಮಾತಾಡಿದ್ದೆವು, ಅದನ್ನು ಜನರಿಗೆ ಹೇಳಬೇಕು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರ ಪ್ರಸ್ತಾಪ ಮಾಡಲು ಆಗಲ್ಲ. ಜನರಿಗೆ ಸತ್ಯಾಂಶವನ್ನು ತಿಳಿಸಬೇಕು. ವಿಪಕ್ಷಕ್ಕೆ ರಾಜಕೀಯವಾಗಿ ಉತ್ತರ ಕೊಡಬೇಕು ಎಂದರು.












Click it and Unblock the Notifications