CT Ravi: ಸಿ. ಟಿ. ರವಿ ಬಂಧನದಲ್ಲಿ ಸರ್ಕಾರದ ಹಸ್ತಕ್ಷೇಪ : ಡಿ. ಕೆ. ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 21: ಈ ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣವೇ? ಎಲ್ಲದಕ್ಕೂ ನಾನೇ ಹೊಣೆಯೇ? ಸಿ.ಟಿ. ರವಿ ಅವರ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಈ ಕುರಿತು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಸಿ.ಟಿ. ರವಿ ಅವರ ಮೇಲೆ ಪೊಲೀಸ್ ಕ್ರಮ ತೆಗೆದುಕೊಳ್ಳುವ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಭಾವ ಬೀರಿದ್ದಾರೆ ಎನ್ನುವ ಬಿಜೆಪಿಯವರ ಆರೋಪಕ್ಕೆ ಡಿ ಕೆ ಶಿವಕುಮಾರ್ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂದು ತಿರುಗೇಟು ನೀಡಿದರು.

ಕ್ರಮ ತೆಗೆದುಕೊಳ್ಳಲು ಪೊಲೀಸರಿದ್ದಾರೆ, ಕಾನೂನಿದೆ. ಅವರು ಯಾವ, ಯಾವ ಸೆಕ್ಷನ್ ಗಳನ್ನು ಹಾಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಇದರಲ್ಲಿ ನಮ್ಮ ಯಾವ ಹಸ್ತಕ್ಷೇಪವೂ ಇಲ್ಲ. ಅವರುಂಟು, ಕಾನೂನು ಹಾಗೂ ಪೊಲೀಸರುಂಟು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಜಾಮೀನು ಸಿಕ್ಕಿರುವುದು ಮೊದಲ ಗೆಲುವು ಎಂದು ಸಿ.ಟಿ. ರವಿ ಅವರು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, "ತಾಯಿಗೆ, ಹೆಣ್ಣು ಕುಲಕ್ಕೆ, ನಮ್ಮ ಸಂಸ್ಕೃತಿಗೆ ಆಗಿರುವ ಅವಮಾನದ ಬಗ್ಗೆ ಮೊದಲು ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.
ಸಿ.ಟಿ. ರವಿ ಅವರು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಹೀಗೆ ನಮ್ಮ ನಾಯಕರ ವಿರುದ್ಧ ಬಹಳ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ. ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಭಾರತದ ಸಂಸ್ಕೃತಿಯೇ? ಬಿಜೆಪಿ ಸಂಸ್ಕೃತಿಯೇ? ಚಿಕ್ಕಮಗಳೂರಿನಲ್ಲಿ ಇಂತಹ ಸಂಸ್ಕೃತಿಯನ್ನು ನಾನು ಈವರೆಗೂ ನೋಡಿಲ್ಲ. ಇಡೀ ಚಿಕ್ಕಮಗಳೂರಿನಲ್ಲಿ ಇವನೊಬ್ಬನೇ ಇಷ್ಟು ಕೀಳು ಮಟ್ಟದ ಸಂಸ್ಕೃತಿ ಹೊಂದಿರುವ ವ್ಯಕ್ತಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಕಿಡಿಕಾರಿದರು.
ಚಿಕ್ಕಮಗಳೂರು ಜನ ಎಂದರೆ ಸುಸಂಸ್ಕೃತ ಜನ. ಅಂತಹವರ ನಡುವಿನಿಂದ ಇಂತಹ ವ್ಯಕ್ತಿ ಬಂದಿರುವುದು ದುರಂತ. ನಮ್ಮ ಪಕ್ಷದ ಯಾವುದೇ ನಾಯಕರು ಈ ರೀತಿ ಮಾತನಾಡಿದ್ದರೆ ನಾನು ಖಂಡಿಸುತ್ತಿದ್ದೆ. ಆದರೆ ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಮುನಿರತ್ನ ಪ್ರಕರಣ ಇದೇ ಆರ್.ಅಶೋಕ್ ಏನು ಹೇಳಿದ್ದರು? ಎಫ್ ಎಸ್ ಎಲ್ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ಹೇಳಿದ್ದರು. ಈ ಪ್ರಕರಣದಲ್ಲಿ ಅವರು ಒಂದು ಭಾಗವಾಗಿದ್ದರೂ ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೇ ಅವರ ನಾಯಕತ್ವ. ಅವರ ಮುತ್ತು ರತ್ನಗಳನ್ನು ಅವರೇ ಇಟ್ಟುಕೊಳ್ಳಲಿ ಎಂದು ಕಿಡಿಕಾರಿದರು.
ಸಿ. ಟಿ. ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದರು ಎಂದು ನಿಮ್ಮ ವಿರುದ್ಧ ಬೆಟ್ಟು ಮಾಡಿ ತೋರುತ್ತಿದ್ದಾರೆ ಎಂದು ಕೇಳಿದಾಗ, ಈ ವಿಚಾರದಲ್ಲಿ ನೀವುಂಟು, ಪೊಲೀಸ್ ಉಂಟು. ಅವರ ಮನೆಯಲ್ಲಿ ಏನಾದರೂ ನಾನೇ ಕಾರಣ. ಅವರ ಪಕ್ಷದಲ್ಲಿ ಏನಾದರೂ ನಾನೇ ಕಾರಣ. ಹೊರಗಡೆ ಏನಾದರೂ ನಾನೇ ಕಾರಣ. ನನ್ನ ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ ಎಂದು ತಿಳಿಸಿದರು.
ಇದಕ್ಕೆಲ್ಲ ಕೊನೆಯಾಡುತ್ತೇವೆ ಎಂಬ ಸಿ.ಟಿ ರವಿ ಹೇಳಿಕೆ ಕುರಿತು ಮಾತನಾಡಿ, ಇಂತಹ ಲೆಕ್ಕ ಚುಕ್ತಾಗಳನ್ನು ಬಹಳ ನೋಡಿದ್ದೇವೆ. ಬಹಳ ಸಂತೋಷ. ಅವರೊಬ್ಬರೇ ಲೆಕ್ಕ ಚುಕ್ತಾ ಮಾಡುತ್ತಾರ? ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಮಾನಹಾನಿಕರ ಪದ ಬಳಕೆ ವಿಚಾರ ಚರ್ಚೆಗೆ ಬದಲು ಬೇರೆ ತಿರುವು ಪಡೆಯಿತಾ ಎಂದು ಕೇಳಿದಾಗ, "ಬಿಜೆಪಿಯವರು ತಮ್ಮ ಹೇಳಿಕೆ ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಆಡಳಿತದಲ್ಲಿ ಪೊಲೀಸರನ್ನು ಹೇಗೆ ಬಳಸಿಕೊಂಡಿದ್ದರು?" ಎಂದು ಮಾರ್ಮಿಕವಾಗಿ ಹೇಳಿದರು.












Click it and Unblock the Notifications