ಆಪರೇಷನ್ ಕಮಲ ; ರಾಜ್ಯದಲ್ಲಿ ಸರ್ಕಾರವಾಗಿ ಉಳಿದಿಲ್ಲ, ಮೂರು ಭಾಗಗಳಾಗಿದೆ: ಅಚ್ಚರಿ ಹೇಳಿಕೆ ನೀಡಿದ ಗೋವಿಂದ ಕಾರಜೋಳ
ಬಾಗಲಕೋಟೆ, ಜುಲೈ 10: ರಾಜ್ಯದಲ್ಲಿ ಸರ್ಕಾರವಾಗಿ ಉಳಿದಿಲ್ಲ, ಮೂರು ಭಾಗಗಳಾಗಿದೆ. ಒಂದು ಸಿದ್ದರಾಮಯ್ಯನವರ ಗುಂಪು,ಎರಡನೆಯದು ಡಿಕೆ ಶಿವಕುಮಾರ್ ಗುಂಪು,ಮೂರನೆಯದು ದಲಿತರ ಗುಂಪು.ವೀರಶೈವ ಲಿಂಗಾಯತರದೊಂದು ಗುಂಪು, ಅವರು ನಮಗೆ ಸಿದ್ದರಾಮಯ್ಯ ಸ್ಥಾನಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ ಎಂದು ಸಂಸದ ಹಾಗೂ ಮಾಜಿ ಸಚಿವರಾದ ಗೋವಿಂದ ಕಾರಜೋಳ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಆಡಳಿತದ ಮೇಲೆ ಹಿಡಿತವನ್ನು ತಪ್ಪಿಸಿಕೊಂಡಿದ್ದಾರೆ. ಅವರ ಪಕ್ಷದ ಶಾಸಕರು ಮತ್ತು ಮುಖಂಡರನ್ನು ಹದ್ದುಬಸ್ತಿನಲ್ಲಿ ಇಡಲು ಆಗುತ್ತಿಲ್ಲ.ಹೈಕಮಾಂಡ್ ಗು ಕೂಡ ಅವರ ಪಕ್ಷದ ಶಾಸಕರನ್ನ ಮುಖಂಡರನ್ನ ಹದ್ದುಬಸ್ತಿನಲ್ಲಿ ಇಡಲು ಆಗುತ್ತಿಲ್ಲ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದರು.

ಇದು ಆಡಳಿತಕ್ಕೆ ಒಳ್ಳೆಯ ಲಕ್ಷಣ ಅಲ್ಲ. ಅದಕ್ಕೆ ನಾನು ಸಿದ್ದರಾಮಯ್ಯನವರಿಗೆ ಸಲಹೆ ಕೊಡುತ್ತೇನೆ.ನೀವು ಒಂದು ಶಾಸಕಾಂಗ ಪಕ್ಷದ ಸಭೆ ಕರೆದು ಯಾರಿಗೆ ಬಹುಮತ ಬರುತ್ತೆ ಅವರಿಗೆ ಸ್ಥಾನ ಬಿಟ್ಟು ಕೊಡಿ,ಇಲ್ಲ ಅಂದ್ರೆ ಅವರನ್ನೆಲ್ಲ ಹದ್ದುಬಸ್ತಿನಲ್ಲಿಟ್ಟು ಜನರ ಕಲ್ಯಾಣ ಕಾರ್ಯಕ್ರಮಗಳ ಮುಂದುವರಿಸಿ, ಸರ್ಕಾರ ನಡೆಸಿ ಇಲ್ಲದಿದ್ರೆ ಇದೊಂದು ಆಯತಪ್ಪಿದ ಸರ್ಕಾರ ಆಗುತ್ತೆ ಎಂದು ಕಾರಜೋಳ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ,ಮುಖ್ಯಮಂತ್ರಿ ರಾಜಿನಾಮೆ ಕೊಟ್ಟು ಹೂರಗೆ ಬರಬೇಕು. ಕಾನೂನು ಸುವ್ಯವಸ್ಥೆ ಹದಿಗೆಟ್ಟಿದೆ ಹಗಲು ದರೋಡೆಗಳು ಆಗುತ್ತಿದೆ.ಇದರಿಂದ ರಾಜ್ಯದಲ್ಲಿ,ಕೊಲೆ ಸುಲಿಗೆಗಳು ಆಗುತ್ತಿದೆ. ಆಡಳಿತದ ನಿಯಂತ್ರಣ ತಪ್ಪಿದೆ, ಅದಕ್ಕೆ ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ, ನಿಮ್ಮ ಕಡೆಯಿಂದ ಜನರ ರಕ್ಷಣೆ ಮಾಡೋದು ಆಗದೆ ಇದ್ದರೆ, ಸರ್ಕಾರದ ಖಜಾನೆಯ ಲೂಟಿ ತಪ್ಪಿಸಲು ಆಗದಿದ್ದರೆ,ಕೂಡಲೇ ರಾಜೀನಾಮೆ ಕೊಟ್ಟು ಗೌರವದಿಂದ ಹೊರಗೆ ಬರಬೇಕು ಎಂದು ಕಾರಜೋಳ ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಮೌಲ್ಯಾಧಾರಿತ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರ ಜೊತೆಯಲ್ಲಿ ಬೆಳೆದಂತವರು,ರಾಮಕೃಷ್ಣ ಹೆಗಡೆ ಅವರು ಒಂದು ಸಣ್ಣ ಆಪಾದನೆ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದನ್ನ ಸಿದ್ದರಾಮಯ್ಯನವರಿಗೆ ನೆನಪು ಮಾಡಿಕೊಡುತ್ತೇನೆ ಎಂದ ಕಾರಜೋಳ ಅವರು,ಇಂತಹ ದೊಡ್ಡ ದೊಡ್ಡ ಹಗರಣಗಳು ನಿಮ್ಮ ಮೇಲೆ ಬಂದಾಗ, ವಾಲ್ಮೀಕಿ ನಿಗಮದ್ದು 187 ಕೋಟಿ ಹಗಲು ದರೋಡೆ ಆಗಿದೆ. ಹುಜೂರ್ ಟ್ರೆಸರಿಯಿಂದ ಹಣ ಬಿಡುಗಡೆಯಾಗಿದೆ. ಇವೆಲ್ಲವೂ ಗೊತ್ತಿಲ್ಲದ ಹಾಗೆ ಕಿವುಡರ , ಮೂಕರ ಹಾಗೆ ಮುಖ್ಯಮಂತ್ರಿಗಳು ಓಡಾಡಬಾರದು ಎಂದು ಕಾರಜೋಳ ಕುಟುಕಿದರು.
ಅದಕ್ಕೆ ಕೂಡಲೇ ಸರ್ಕಾರ ಜವಾಬ್ದಾರಿಯನ್ನು ಹೊರಬೇಕು, ನಿಷ್ಪಕ್ಷಪಾತವಾದ ತನಿಖೆಗೆ ಅವಕಾಶ ಮಾಡಲು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ಇದೇ ಸಮಯದಲ್ಲಿ,ರಾಜ್ಯದಲ್ಲಿ ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟದ ವಿಚಾರವಾಗಿ ಮಾತನಾಡಿದ ಕಾರಜೋಳ,ಸಿಎಂ ಸಿದ್ದರಾಮಯ್ಯ ಬಹುಮತ ಸಾಬೀತು ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರದಿಂದ ಎಸ್ಸಿ ಎಸ್ಟಿ ಸಮುದಾಯದ ಹಣ ದುರ್ಬಳಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾರಜೋಳ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ಆಗಿಲ್ಲ.ಅಭಿವೃದ್ಧಿ ಕೆಲಸಗಳಿಗೆ ಇಟ್ಟಂತಹ ಹಣ ವಾಪಸ್ ತೆಗೆದುಕೊಂಡಿದ್ದಾರೆ.
ಗ್ಯಾರಂಟಿಗಳಿಗೆ ನಮ್ದೇನು ಆಕ್ಷೇಪಣೆ ಇಲ್ಲ. ಬಡವರಿಗೆ ಕೊಡಿ,ಆದರೆ ಅಭಿವೃದ್ಧಿ ಬಂದ್ ಮಾಡಿ ಗ್ಯಾರಂಟಿ ಹಣ ಹಂಚಿ ಓಟ್ ಹಾಕಿಸಿಕೊಂಡಿರಿ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಗ್ಯಾರಂಟಿ ಇರಬಾರದು, ಅಭಿವೃದ್ಧಿ ಮೊದಲು ಆಗಬೇಕು ಎಂದರು.
ಎಸ್ಸಿ ಎಸ್ಟಿ ಜನಾಂಗದ 24,000 ಕೋಟಿ ಹಣವು,ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಒಂದು ವರ್ಷ ಮೂರು ತಿಂಗಳಿನಲ್ಲಿ ದುರುಪಯೋಗ ಮಾಡಿಕೊಂಡಿದ್ದಾರೆ. ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ.
ಆ ಹಣವನ್ನ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳುವಂತದ್ದಲ್ಲ. ಎಸ್ಸಿ ಎಸ್ಟಿ ಹಣ ಅವರ ಕಲ್ಯಾಣಕ್ಕಾಗಿ, ವೈಯಕ್ತಿಕ ಅಭಿವೃದ್ಧಿಗಾಗಿ, ಶಿಕ್ಷಣ, ಉದ್ಯೋಗ , ನೀರಾವರಿ, ಭೂಒಡೆತನ, ಮನೆ ನಿರ್ಮಾಣ ಯೋಜನೆಗಳಿಗಾಗಿ ಇರುವಂತದ್ದು,ಅವರು ಸ್ವತಂತ್ರರಾಗಿ ಅವರ ಕಾಲ ಮೇಲೆ ಅವರು ನಿಂತುಕೊಳ್ಳಬೇಕು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಿಷ್ಕ್ರೀಯವಾಗಿದೆ. ಸರಕಾರದ ದಿವ್ಯ ನಿರ್ಲಕ್ಷ್ಯದಿಂದ ಡೆಂಘಿ ಹೆಚ್ಚಾಗುತ್ತಿದೆ.ಇದರಿಂದ ಸಾವುನೋವು ಹೆಚ್ಚುತ್ತಿವೆ.ಕೂಡಲೆ ಸರಕಾರ ಡೆಂಘಿ ನಿಯಂತ್ರಣಕ್ಕೆ ಔಷಧೋಪಚಾರ ಸೇರಿದಂತೆ ಏನೇನು ಕ್ರಮ ಕೈಗೊಳ್ಳಬೇಕು ಅವೆಲ್ಲವನ್ನು ಮಾಡಬೇಕು. ಎಲ್ಲ ಗ್ಯಾರಂಟಿಗಳನ್ನು ಬದಿಗೊತ್ತಿ. ಮೊದಲು ಡೆಂಘಿ ಜ್ವರದ ಬಗ್ಗೆ ಸರಕಾರ ಕ್ರಮ ತಗೊಳ್ಳಬೇಕು ಅಂತ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.












Click it and Unblock the Notifications