ಕೊರೊನಾ ವೈರಸ್ ರೂಪಾಂತರ: ನೈಟ್ ಕರ್ಫ್ಯೂ ಗೊಂದಲದಲ್ಲಿ ರಾಜ್ಯ ಸರ್ಕಾರ!
ಬೆಂಗಳೂರು, ಡಿ. 22: ಇಂಗ್ಲಂಡ್‌ನಲ್ಲಿ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿರುವುದು ನಮ್ಮ ರಾಜ್ಯ ಸರ್ಕಾರದಲ್ಲಿ ಗೊಂದಲ ಸೃಷ್ಟಿಸಿದೆ. ಇಂಗ್ಲೆಂಡ್, ಡೆನ್ಮಾರ್ಕ್, ನೆದರ್‌ಲ್ಯಾಂಡ್ ಸೇರಿದಂತೆ ಬಹಳಷ್ಟು ಯೂರೋಪ್ ರಾಷ್ಟ್ರಗಳಲ್ಲಿ ಕೋರೊನಾ ವೈರಸ್ ರೂಪಾಂತರಗೊಳ್ಳುವ ಮೂಲಕ ಮತ್ತೆ ಜನರಲ್ಲಿ ಆತಂಕ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ಇಂದು ರಾತ್ರಿಯಿಂದ (ಡಿ.22) ಇಂಗ್ಲೆಂಡ್‌ನಿಂದ ಬರುವ ವಿಮಾನಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ. ಇಷ್ಟರಲ್ಲಾಗಲೇ ಇಂಗ್ಲೆಂಡ್‌ನಿಂದ ರಾಜ್ಯಕ್ಕೆ ಸುಮಾರು 537 ಜನರು ಬಂದು ಬಿಟ್ಟಿದ್ದಾರೆ. ಆತಂಕಕಾರಿ ವಿಚಾರವೆಂದರೆ ಅವರಲ್ಲಿ 138 ಜನರು ಕೋವಿಡ್ ನೆಗಟಿವ್ ವರದಿ ಹಾಜರು ಪಡಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಆತಂಕಕ್ಕೊಳಗಾಗಿದೆ.
ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ 19 ವೈರಸ್‌ಗಿಂತಲೂ ಅತಿ ವೇಗವಾಗಿ ರೂಪಾಂತರಿ ಕೊರೊನಾ ವೈರಾಣು ಹರಡಬಲ್ಲದು ಎಂಬುದು ಇಡೀ ವಿಶ್ವದ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ಕೇಂದ್ರದೊಂದಿಗೆ ನಮ್ಮ ರಾಜ್ಯ ಸರ್ಕಾರವೂ ಕೈಗೊಂಡಿದೆ. ಆದರೂ ನೈಟ್ ಕರ್ಫ್ಯೂ ವಿಚಾರದಲ್ಲಿ ರಾಜ್ಯ ಸರ್ಕಾರದಲ್ಲಿ ಗೊಂದಲ ಸೃಷ್ಟಿಯಾಗಿದೆ.

ಆತಂಕ ತಂದ ರೂಪಾಂತರಿ
ಇಂಗ್ಲೆಂಡ್ ಸೇರಿದಂತೆ ಯೂರೋಪ್‌ನಲ್ಲಿ ಕಂಡುಬಂದಿರುವ ಕೋವಿಡ್ ರೂಪಾಂತರಿ ವೈರಾಣು ಈಗಾಗಲೇ ಅನೇಕ ದೇಶಗಳಿಗೆ ಪಸರಿಸಿರಬಹುದು ಎಂದು ವಿಶ್ವಾರೋಗ್ಯ ಸಂಸ್ಥೆಯ ಸಂಶೋಧಕಿ ಡಾ. ಸೌಮ್ಯಾ ಸ್ವಾಮೀನಾಥನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೂಪಾಂತರಿ ವೈರಾಣು ಹಿಂದಿನ ವೈರಸ್‌ಗಿಂತ ಶೇಕಡಾ 70ರಷ್ಟು ವೇಗವಾಗಿ ಹರಡಬಲ್ಲದು ಎಂದು ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.

ಗೊಂದಲ ಸೃಷ್ಟಿಸಿದ ಹೊಸ ವೈರಾಣು
ಎಲ್ಲ ದೇಶಗಳಲ್ಲಿಯೂ ಈಗ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂಬ್ರಮ ಮನೆ ಮಾಡುತ್ತಿತ್ತು. ಇದೇ ಸಂದರ್ಭದಲ್ಲಿ ಹೊಸ ತಳಿಯ ಕೋವಿಡ್ ವೈರಾಣು ಜನರೂ ಸೇರಿದಂತೆ ಸರ್ಕಾರಗಳ ನಿದ್ದೆಗಡೆಸಿದೆ. ಹೀಗಾಗಿ ಮತ್ತೆ ಲಾಕ್‌ಡೌನ್ ನೈಟ್ ಕರ್ಫ್ಯೂ ಕುರಿತು ಸರ್ಕಾರಗಳು ಚಿಂತನೆ ನಡೆಸಿವೆ. ಆದರೆ ರಾಜ್ಯದಲ್ಲಿ ಮಾತ್ರ ಈ ಕುರಿತು ಗೊಂದಲ ಏರ್ಪಟ್ಟಿದೆ. ಸರ್ಕಾರದಲ್ಲಿಯೇ ಈ ಬಗ್ಗೆ ದ್ವಂದ್ವ ನಿಲುವುಗಳಿವೆ.

ನೈಟ್‌ಕರ್ಫ್ಯೂ ಅಗತ್ಯವಿಲ್ಲ!
ಹೊಸ ವೈರಾಣುವಿನ ಹಿನ್ನೆಲೆಯಲ್ಲಿ ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ನೈಟ್ ಕರ್ಫ್ಯೂ ಹೇರುವ ಅಗತ್ಯವಿಲ್ಲ. ಹೀಗಾಗಿ ನೈಟ್ ಕರ್ಫ್ಯೂ ಹಾಕುವುದಿಲ್ಲ ಎಂದು ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಹೊಸವರ್ಷಾಚರಣೆ ಹಾಗೂ ನೈಟ್ ಕರ್ಫ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಸರ್ಕಾರದ ನಿಲುವು ತಿಳಿಸಿದ್ದಾರೆ. ಆದರೆ ಆರೋಗ್ಯ ಸಚಿವರು ನೈಟ್ ಕರ್ಫ್ಯೂ ಹಾಕುವ ಬಗ್ಗೆ ಮಾತನಾಡಿದ್ದಾರೆ.

ನೈಟ್‌ಕರ್ಫ್ಯೂ ಬಗ್ಗೆ ತೀರ್ಮಾನ!
ಈ ಬಗ್ಗೆ ಬೆಂಗಳೂರಿನಲ್ಲಿ ತಮ್ಮ ಪ್ರತಿಕ್ರಿಯೆ ಕೊಟ್ಟಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಅವರು, ಮುಂಜಾಗರೂಕತೆ ದೃಷ್ಟಿಯಿಂದ ನೈಟ್ ಕರ್ಫ್ಯೂ ವಿಧಿಸುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ನಮ್ಮ ಸರ್ಕಾರಕ್ಕೆ ಜನರ ಆರೋಗ್ಯವೇ ಮುಖ್ಯ ಎಂದು ಡಾ. ಸುಧಾಕರ್ ಹೇಳಿಕೆ ನೀಡಿದ್ದಾರೆ. ಜನರ ರಕ್ಷಣೆಗಾಗಿ ನೈಟ್ ಕರ್ಪ್ಯೂ ಜಾರಿಗೆ ತರುವ ಬಗ್ಗೆ ತೀರ್ಮಾನ ಮಾಡುತ್ತೇವೆ.
ಕೇಂದ್ರ ಆರೋಗ್ಯ ಸಚಿವಾಲಯ ನೈಟ್ ಕರ್ಪ್ಯೂ ವಿಧಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿದೆ. ಬೇರೆ ರಾಜ್ಯಗಳು ಈಗಾಗಲೇ ನೈಟ್ ಕರ್ಫ್ಯೂ ನಿರ್ಧಾರ ಕೈಗೊಂಡಿವೆ ಎಂದು ಡಾ. ಸುಧಾಕರ್ ಹೇಳಿದ್ದಾರೆ. ಹೀಗಾಗಿ ಸರ್ಕಾರದಲ್ಲಿಯೇ ಎರಡು ಅಭಿಪ್ರಾಯಗಳು ಕೇಳಿ ಬಂದಿವೆ. ಇದು ಜನರನ್ನು ಗೊಂದಲಕ್ಕೀಡು ಮಾಡಿದೆ. ಇದೀಗ ಸರ್ಕಾರ ನೈಟ್ ಕರ್ಫ್ಯೂವನ್ನು ಮತ್ತೆ ಹೇರುತ್ತದೆಯಾ? ಎಂಬ ಆತಂಕದಲ್ಲಿ ರಾಜ್ಯದ ಜನತೆಯಿದ್ದಾರೆ. ಸರ್ಕಾರವೇ ಗೊಂದಲ ಪರಿಹರಿಸಬೇಕಿದೆ.












Click it and Unblock the Notifications