BBMP Election: ಬಿಬಿಎಂಪಿ ಚುನಾವಣೆಗೆ ದಿನಾಂಕ ಫಿಕ್ಸ್ ?
ಬೆಂಗಳೂರು, ಜೂನ್ 11: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗೃಹ ಕಚೇರಿಯಲ್ಲಿ ಬೆಂಗಳೂರು ಸಚಿವರ ಜೊತೆಗೆ ಸಭೆ ನಡೆಸಿದ್ದು, ಬಿಬಿಎಂಪಿ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಬೇಕೆಂದು ಚರ್ಚೆಯಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಪಾಲಿಕೆ ಚುನಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಚುನಾವಣೆ ಮೂರು ನಾಲ್ಕು ತಿಂಗಳಲ್ಲಿ ಮಾಡಬೇಕು ಅಂತ ಚರ್ಚೆ ಆಗಿದೆ. ಬಹಳ ದಿನ ಚುನಾವಣೆ ಮುಂದೂಡಲು ಆಗಲ್ಲ, ಈಗಾಗಲೇ ಕೋರ್ಟ್ ಚುನಾವಣೆಗೆ ನಿರ್ದೇಶನ ನೀಡಿದೆ. 225 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದೆ. ಕಾನೂನು ತೊಡಕು ಹಾಗೂ ಮೀಸಲಾತಿ ಬಗೆಹರಿಸಿ ಚುನಾವಣೆ ಮಾಡಲಿದ್ದೇವೆ.
ಮಳೆಗಾಲ ಮುಗಿತ್ತಿದ್ದಂತೆ ಬಿಬಿಎಂಪಿ ಚುನಾವಣೆ ಮಾಡುತ್ತೇವೆ. ಅನುದಾನ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಲೋಕಸಭಾ ಚುನಾವಣೆ ಫಲಿತಾಂಶದ ಸೋಲಿನ ಚರ್ಚೆ ಆಗಿಲ್ಲ. ಈ ಬಗ್ಗೆ ಯಾರು ಮಾತನಾಡಲಿಲ್ಲ. ಕೇವಲ ಬಿಬಿಎಂಪಿ ಚುನಾವಣೆ ಬಗ್ಗೆ ಮಾತ್ರ ಚರ್ಚೆಯಾಗಿದ್ದು ಅಷ್ಟೇ ಎಂದ ರಾಮಲಿಂಗ ರೆಡ್ಡಿ ಹೇಳಿದರು.
ವಾರ್ಡ್ ವಿಂಗಡಣೆ ಕುರಿತು ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರ ಜೊತೆಗೆ ಸಭೆ ನಡೆಸಿದ್ದು, ಕೆಲ ಶಾಸಕರು ಮೊದಲು ಚುನಾವಣೆ ಮಾಡಿ ನಂತರ ವಿಂಗಡಣೆ ಮಾಡಿ ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
3 - 5 ಭಾಗಗಳಾಗಿ ಬಿಬಿಎಂಪಿ ವಿಂಗಡಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಸಭೆಯಲ್ಲಿ ಎಜಿ ಮತ್ತು ಬಿಬಿಎಂಪಿ ಅಧಿಕಾರಿಗಳಿಂದ ವಾಸ್ತವ ಮಾಹಿತಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಪಡೆದಿದ್ದಾರೆ.
ಇನ್ನೂ ಬಹುತೇಕ ಶಾಸಕರು ಮೊದಲು ಚುನಾವಣೆ ಮಾಡಿ ಎಂದು ಒತ್ತಾಯಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಚುನಾವಣೆಗೂ ಮುನ್ಮ ಬ್ರಾಂಡ್ ಬೆಂಗಳೂರು ಅಭಿವೃದ್ಧಿಯಾಗಬೇಕು. ಹೆಚ್ಚಿನ ಅನುದಾನ ನೀಡಬೇಕು ಎಂದು ಸಭೆಯಲ್ಲಿ ಶಾಸಕರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಕುರಿತು ಮಾತನಾಡಿದ ಅವರು, ಗ್ಯಾರಂಟಿ ನಿಲ್ಲಲ್ಲ.ಗ್ಯಾರಂಟಿ ನಿಲ್ಲಲ್ಲ, ಮತ್ತೆ ಚುನಾವಣೆ ಆದ್ರೂ ನಮ್ಮ ಸರ್ಕಾರ ಬರುತ್ತದೆ, ಮುಂದಿನ 9 ವರ್ಷವೂ ಗ್ಯಾರಂಟಿ ಇರುತ್ತದೆ. ಮುಂದೆ ಯೋಚನೆ ಮಾಡೋಣ. ಶಕ್ತಿ ಯೋಜನೆಗೆ ಇಂದು ವರ್ಷ ಆಗುತ್ತದೆ ಎಂದು ಹೇಳಿದರು.
ಇನ್ನೂ ಈ ಸಭೆಯಲ್ಲಿ ಬೈರತಿ ಸುರೇಶ್, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಜಮೀರ್ ಅಹಮ್ಮದ್, ದಿನೇಶ್ ಗುಂಡೂರಾವ್, ಎ.ಸಿ ಶ್ರೀನಿವಾಸ್, ಪ್ರಿಯಾ ಕೃಷ್ಣಾ, ಎಂ.ಕೃಷ್ಣಪ್ಪ, ಎನ್.ಎ ಹ್ಯಾರೀಶ್ ಹಾಗೂ ರಿಜ್ವನ್ ಅರ್ಷದ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.












Click it and Unblock the Notifications