ಸಿದ್ದರಾಮಯ್ಯರವರ ಅಸಲಿ ಮುಖವಾಡವನ್ನು ಬಿ.ಕೆ.ಹರಿಪ್ರಸಾದ್ ಬಿಚ್ಚಿಟ್ಟಿದ್ದಾರೆ: ಬಿಜೆಪಿ

ಬೆಂಗಳೂರು, ಸೆಪ್ಟೆಂಬರ್‌ 14: ಸಿದ್ದರಾಮಯ್ಯರವರ "ಅಹಿಂದ" ರಾಜಕಾರಣದ ಅಸಲಿ ಮುಖವಾಡವನ್ನು ಎಳೆಎಳೆಯಾಗಿ ಬಿ.ಕೆ.ಹರಿಪ್ರಸಾದ್ ಅವರು ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯರವರ ಅಹಿಂದದ ನೈಜತೆ ಹೊರಬಂದಿದ್ದು ಇದೇ ಮೊದಲಲ್ಲ. ಆಗಾಗ ಕಿಡಿ ರೂಪದಲ್ಲಿ ಹೊರಬರುತ್ತಿದ್ದ ಅಸಮಾಧಾನ ಈಗ ಹರಿಪ್ರಸಾದ್‌ ಅವರ ರೂಪದಲ್ಲಿ ಬೆಂಕಿಯಾಗಿದೆ ಎಂದು ಬಿಜೆಪಿ ಕಿಡಿಕಾರಿದರು.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ರಾಜ್ಯದ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯ ಸಿದ್ದರಾಮಯ್ಯರವರ "ಅಹಿಂದ" ರಾಜಕಾರಣಕ್ಕೆ ಸಿಲುಕಿ ರಾಜಕೀಯ ಪ್ರಾತಿನಿಧ್ಯವನ್ನು ಬಹುತೇಕ ಕಳೆದುಕೊಂಡಿದೆ.

bjp-lashed-out-at-siddaramaiah

ಚುನಾವಣೆಗಳಲ್ಲಿ"ಅಹಿಂದ" ಹೆಸರಿನಲ್ಲಿ ರಾಜಕಾರಣ ಮಾಡಿ ಯಶಸ್ಸನ್ನು ಕಂಡಿರುವ ಸಿದ್ದರಾಮಯ್ಯರವರು, ಚುನಾವಣೆ ಬಳಿಕ "ಹಿಂದ"ದವರನ್ನು ಹಿಂದೆಯೇ ಬಿಟ್ಟು, ತಾವು ಮತ್ತು ತಮ್ಮ(ಅ)ವರನ್ನು ಮಾತ್ರ ಮುಂದಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬುದು ಬಿ.ಕೆ.ಹರಿಪ್ರಸಾದ್ ಅವರ ಪ್ರಮುಖ ಆರೋಪ. ಈ ಆರೋಪ ರಾಜಕೀಯ ಪ್ರೇರಿತ ಎಂಬ ಹೇಳಿಕೆಗಳು ಸಂಪೂರ್ಣ ಸುಳ್ಳು. ಸಿದ್ದರಾಮಯ್ಯರವರ ರಾಜಕೀಯವನ್ನು ಮತ್ತು ಅಧಿಕಾರ ದೊರೆತಾಗ ಅವರ ಆಡಳಿತವನ್ನು ಒಮ್ಮೆ ಕೂಲಂಕುಷವಾಗಿ ಗಮನಿಸಿದರೆ ಸಾಕು, ಈ ಆರೋಪ ನೂರಕ್ಕೆ ನೂರರಷ್ಟು ನಿಜ ಎಂಬುದು ಸಾಬೀತಾಗುತ್ತದೆ.

ಅಷ್ಟಕ್ಕೂ ತಾವೊಬ್ಬ ರಾಜ್ಯ ಕಂಡ ಶ್ರೇಷ್ಠ ನಾಯಕ ದೇವರಾಜ ಅರಸುರವರ ಅಪರಾವತಾರ ಎಂದು ತಮ್ಮ ಭಟ್ಟಂಗಿಗಳಿಂದ ಕರೆಸಿಕೊಳ್ಳುವ ಸಿದ್ದರಾಮಯ್ಯರವರು, ನಿಜಕ್ಕೂ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ನ್ಯಾಯ ನೀಡಿದ್ದಾರಾ ಎಂಬ ಪ್ರಶ್ನೆಗೆ, ಇಲ್ಲವೇ ಇಲ್ಲ ಎಂಬ ಉತ್ತರ ದೊರೆಯುತ್ತದೆ ಎಂದು ಹೇಳಿದೆ.

ಪಕ್ಷಾಂತರ ಪ್ರವೀಣ ಸಿದ್ದರಾಮಯ್ಯರವರು ಕಾಂಗ್ರೆಸ್‌ಗೆ ಬಂದ ಬಳಿಕ, ಮೊದಲು ಮಾಡಿದ ಕೆಲಸವೆಂದರೆ, ಅದು ತಮ್ಮ ಜೊತೆಗಿದ್ದ ದಲಿತ ಸಮುದಾಯದ ನಾಯಕರ ರಾಜಕೀಯ ಜೀವನವನ್ನು ದುರ್ಬಲಗೊಳಿಸಿದ್ದು. ಮಲ್ಲಿಕಾರ್ಜುನ ಖರ್ಗೆ, ಡಾ ಪರಮೇಶ್ವರ್‌, ವಿ. ಶ್ರೀನಿವಾಸ ಪ್ರಸಾದ್‌, ಕೆ.ಎಚ್. ಮುನಿಯಪ್ಪ, ಸೇರಿದಂತೆ ಇತರ ಪ್ರಭಾವಿ ದಲಿತ ನಾಯಕರಿಗೆ ಕಾಂಗ್ರೆಸ್‌ನಲ್ಲಿ ಸಿಗಬೇಕಿದ್ದ ಪ್ರಾಮುಖ್ಯತೆಗೆ ಕಲ್ಲು ಹಾಕಿದ್ದೇ ಸಿದ್ದರಾಮಯ್ಯರವರು.

ದಲಿತ ನಾಯಕರ ರಾಜಕೀಯ ಜೀವನವನ್ನು ದುರ್ಬಲಗೊಳಿಸಿದ ಮೇಲೆ, ಈಗ ಸಿದ್ದರಾಮಯ್ಯರವರ ಕಣ್ಣು ಕಾಂಗ್ರೆಸ್‌ನಲ್ಲಿರುವ ಹಿಂದುಳಿದ ವರ್ಗಗಳ ನಾಯಕರ ಮೇಲೆ ಬಿದ್ದಿದೆ. ಕೇವಲ ಹಿಂದುಳಿದ ವರ್ಗಗಳ ನಾಯಕರನ್ನಷ್ಟೆ ಅಲ್ಲ, ಸಿದ್ದರಾಮಯ್ಯರವರು ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳನ್ನು ಸಹ ಸಂಪೂರ್ಣ ಕಡೆಗಣಿಸಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುಳಿದ ಸಮುದಾಯಗಳಾದ ತಿಗಳ, ಮಡಿವಾಳ, ಉಪ್ಪಾರ, ಬಲಿಜ ಸೇರಿದಂತೆ ಇತರ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸುತ್ತೇವೆ ಎಂದು ಪುಂಖಾನುಪುಂಕವಾಗಿ ಘೋಷಿಸಿದ್ದರು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವನ್ನು ಸಹ ಮಾಡಿಲ್ಲ.

bjp-lashed-out-at-siddaramaiah

ಇನ್ನು ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಪ್ರತಿ ವರ್ಷ 500 ಕೋಟಿ ಅನುದಾನವನ್ನು ನೀಡುತ್ತೇವೆ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಅಸಲಿಗೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಬಿಜೆಪಿ ಸರ್ಕಾರವೇ ಸ್ಥಾಪಿಸಿತ್ತು. ಆದರೆ ನುಡಿದಂತೆ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಸಿದ್ದರಾಮಯ್ಯರವರು ತಮ್ಮ ಬಜೆಟ್‌ನಲ್ಲಿ ಬಿಡಿಗಾಸನ್ನು ಸಹ ನೀಡಿಲ್ಲ.

ರಾಜ್ಯದ ಅತಿ ಸಣ್ಣ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕವಾಗಿ, "ಅತಿ ಸಣ್ಣ ಹಿಂದುಳಿದ ವರ್ಗಗಳ ಅಭಿವೃದ್ಧಿ ಪ್ರಾಧಿಕಾರ"ವನ್ನು ಸ್ಥಾಪಿಸಿ, ಪ್ರತಿ ವರ್ಷ 500 ಕೋಟಿ ಅನುದಾನ ಒದಗಿಸುವ ಭರವಸೆಯನ್ನು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ನೀಡಿತ್ತು. ಆದರೆ ಸಿದ್ದರಾಮಯ್ಯರವರ ಬಜೆಟ್‌ನಲ್ಲಿ ಈ ಬಗ್ಗೆ ಉಲ್ಲೇಖವೇ ಆಗಿಲ್ಲ.

ಹಿಂದುಳಿದ ವರ್ಗಗಳ ಜೊತೆ ದಲಿತ ಸಮುದಾಯಗಳಿಗೂ ಅನ್ಯಾಯವೆಸಗಿರುವ ಸಿದ್ದರಾಮಯ್ಯರವರು, ದಲಿತ ಸಮುದಾಯಗಳಿಗೆ ಮಾತ್ರ ಮೀಸಲಾಗಿದ್ದ 11,144 ಕೋಟಿ ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನವನ್ನು, ಜಾರಿಯಿದ್ದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಆದರೆ ಇದೆಲ್ಲದರ ನಡುವೆ ಕ್ರಿಶ್ಚಿಯನ್‌ ಅಭಿವೃದ್ಧಿ ನಿಗಮ ಸ್ಥಾಪಿಸಿ, ವಾರ್ಷಿಕ 100 ಕೋಟಿ ಅನುದಾನ ನೀಡಲಾಗುವುದು ಎಂಬುದನ್ನು ಮಾತ್ರ ಬಜೆಟ್‌‌‌ನಲ್ಲಿ ಸಿದ್ದರಾಮಯ್ಯರವರು ಹೆಮ್ಮೆಯಿಂದ ಘೋಷಿಸಿಕೊಂಡಿದ್ದಾರೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ವಾರ್ಷಿಕವಾಗಿ ನೀಡುವ ಅನುದಾನದ ಜೊತೆ ಬಂಪರ್‌ ಎಂಬಂತೆ ಹೆಚ್ಚುವರಿಯಾಗಿ 360 ಕೋಟಿ ಅನುದಾನವನ್ನು ಒದಗಿಸಿದ್ದಾರೆ.

ಇದು ಸಿದ್ದರಾಮಯ್ಯರವರು ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳ ಮೇಲೆ ಹೊಂದಿರುವ ಡೋಂಗಿ ಪ್ರೇಮಕ್ಕೆ ಸ್ಪಷ್ಟ ನಿದರ್ಶನ. ಇದೆಲ್ಲವನ್ನೂ ಗಮನಿಸಿದರೆ, ಸಿದ್ದರಾಮಯ್ಯರವರು ಹಿಂದುಳಿದ ವರ್ಗಗಳ ಮೇಲೆ ತೋರುತ್ತಿರುವ ಅಸಡ್ಡೆಯ ಬಗ್ಗೆ ಬಿ.ಕೆ. ಹರಿಪ್ರಸಾದ್‌ ನೀಡಿದ ಹೇಳಿಕೆಯಲ್ಲಿ ಎಳ್ಳಷ್ಟೂ ಸುಳ್ಳಿಲ್ಲ ಎಂಬುದು ರುಜುವಾತಾಗುತ್ತದೆ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+