ಶಾಸಕರ ಭವನದಲ್ಲೇ ಶಾಸಕರನ್ನು ಹೆದರಿಸುತ್ತಿರುವುದು ಯಾರು ಗೊತ್ತಾ?
ಕರ್ನಾಟಕದ ಶಕ್ತಿ ಕೇಂದ್ರ ಎಂದು ಕರೆಯಲ್ಪಡುವ ವಿಧಾನಸೌಧದ ಸನಿಹದಲ್ಲೇ ಇರುವ ಶಾಸಕರ ಭವನದಲ್ಲಿ ಹೊಸ ಸಮಸ್ಯೆಯೊಂದು ಹುಟ್ಟಿಕೊಂಡಿದೆ. ಇಲ್ಲಿವರೆಗೆ ಬೆಂಗಳೂರಿನಲ್ಲಿ ಬೀದಿನಾಯಿ ಹಾವಳಿ ಎಂದು ಸಾರ್ವಜನಿಕರು ಮಾತ್ರ ದೂರುತ್ತಿದ್ದರು. ಇದೀಗ ನಮ್ಮನ್ನಾಳುವ ರಾಜಕಾರಣಿಗಳಿಗೂ ಈ ಬೀದಿನಾಯಿಗಳು ಕಾಟ ನೀಡುತ್ತಿವೆ ಎಂದು ವರದಿಯಾಗಿದೆ.
ಹೌದು, ಶಾಸಕರ ಭವನದಲ್ಲಿ ನಾಯಿಗಳು ಹಾವಳಿ ಹೆಚ್ಚಾಗಿದೆ. ಈ ಸಮಸ್ಯೆ ಬಗೆಹರಿಸಿ ಎಂದು ಖುದ್ದು ಶಾಸಕರೇ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಮಸ್ಯೆ ಬಗ್ಗೆ ಮಾತನಾಡಿರುವ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಬೆಂಗಳೂರಿನ ಶಾಸಕರ ಭವನದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿರುವ ಸಂಬಂಧ ಶಾಸಕರು ದೂರು ನೀಡಿದ್ದು, ಆ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಹೇಳಿದ್ದಾರೆ.

ಬೀದಿನಾಯಿಗಳ ಉಪಟಳದ ಬಗ್ಗೆ ಮಾತನಾಡಿರುವ ಅವರು, ಸವಣೂರು ತಾಲ್ಲೂಕಿನಲ್ಲಿ ಇತ್ತೀಚೆಗೆ 551 ಮಂದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಹಾವೇರಿಯಲ್ಲೂ ಈ ಪ್ರಕರಣಗಳು ಹೆಚ್ಚಾಗಿರುವ ಕುರಿತು ವರದಿಯಾಗಿದೆ ಎಂದಿದ್ದಾರೆ.
ಒಂದು ವೇಳೆ ಈ ಬೀದಿ ನಾಯಿಗಳನ್ನು ಹಿಡಿದು ಬೇರೆ ಕಡೆಗೆ ಬಿಡೋಣ ಎಂದರೆ, ಪ್ರಾಣಿ ದಯಾ ಸಂಘದವರು ವಿರೋಧ ವ್ಯಕ್ತಪಡಿಸುತ್ತಾರೆ. ಹಾಗಾಗಿ ಬೀದಿ ನಾಯಿಗಳ ಸ್ಥಳಾಂತರ ದೊಡ್ಡ ಸಮಸ್ಯೆಯಾಗಿದೆ. ಶಾಸಕರ ಭವನದಲ್ಲೇ ನಾಯಿಗಳ ಸಮಸ್ಯೆ ಮಿತಿಮೀರಿರುವ ಬಗ್ಗೆ ನಾಯಕರು ದೂರಿದ್ದಾರೆ. ಮುಂದಿನ ಚುನಾವಣೆಗೆ ಈ ಬೀದಿನಾಯಿಗಳ ವಿಷಯವೇ ಮುನ್ನೆಲೆಗೆ ಬರಬಹುದು ಎಂದಿದ್ದಾರೆ.
ಇನ್ನು ಸಾರ್ವಜನಿಕರಿಗೆ ಬೀದಿನಾಯಿಗಳಿಂದ ಸಮಸ್ಯೆಯಾದಾಗ ಅದನ್ನು ಬಗೆಹರಿಸಬೇಕಾದ ನಾಯಕರಿಗೇ ಬೀದಿನಾಯಿಗಳ ಸಮಸ್ಯೆ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲವಾ? ತಮ್ಮ ಸಮಸ್ಯೆಯನ್ನೇ ಪರಿಹಾರ ಕಂಡುಕೊಳ್ಳಲು ವಿಫಲರಾದರೆ, ಸಾರ್ವಜನಿಕರ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇದರ ಪರಿಣಾಮ ಆಗಾಗ ಬೀದಿನಾಯಿಗಳಿಂದ ಅನಾಹುತಗಳು ಸಂಭವಿಸುತ್ತಲೇ ಇವೆ. ಇತ್ತೀಚೆಗೆ ಉದ್ಯಾನನಗರಿಯಲ್ಲಿ ಬೆಳ್ಳಂಬೆಳಿಗ್ಗೆ ದೊಡ್ಡ ದುರಂತವೇ ನಡೆದು ಹೋಗಿತ್ತು. ಹೊರ ರಾಜ್ಯದಿಂದ ಮಗಳನ್ನು ಕಾಣಲೆಂದು ಬೆಂಗಳೂರಿಗೆ ಬಂದಿದ್ದ ಮಹಿಳೆ ನಾಯಿಗಳ ಉಪಟಳಕ್ಕೆ ಜೀವವನ್ನೇ ಕಳೆದುಕೊಂಡಿದ್ದರು.
ಬೀದಿನಾಯಿಗಳ ಗುಂಪೊಂದು ಭೀಕರವಾಗಿ ಎರಗಿದ ಪರಿಣಾಮ ವಾಕಿಂಗ್ ಮಾಡಲು ಮನೆಯಿಂದ ಹೊರ ಬಂದಿದ್ದ ಈ ಮಹಿಳೆ ಮಸಣ ಸೇರಿದ್ದರು. ಈ ಘಟನೆಯು ಬೆಂಗಳೂರಿನ ಜಾಲಹಳ್ಳಿ ಬಳಿಯ ಏರ್‌ಫೋರ್ಸ್ ಕ್ಯಾಂಪಸ್‌ನಲ್ಲಿ ನಡೆದಿತ್ತು. 60 ವರ್ಷದ ಮಹಿಳೆಯೊಬ್ಬರು ಕ್ಯಾಂಪಸ್‌ನಲ್ಲಿ ಬೆಳಿಗ್ಗೆ ವಾಕಿಂಗ್ ಮಾಡಲು ಬಂದಿದ್ದಾಗ ವ್ಯಾಘ್ರವಾಗಿ ನಾಯಿಗಳ ಹಿಂಡು ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಮಹಿಳೆಯ ತಲೆ, ಕೈ, ಕತ್ತು ಸೇರಿದಂತೆ ದೇಹದ ಭಾಗಗಳಿಗೆ ಗಂಭೀರವಾದ ಗಾಯಗಳಾಗಿ ಆಸ್ಪತ್ರೆ ಸೇರಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ಘಟನೆಯು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು. ರಾತ್ರಿ ವೇಳೆಯೂ ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ಬೀದಿನಾಯಿಗಳ ಆತಂಕವಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಬೀದಿನಾಯಿಗಳಿಗೆ ಹೆದರಿ ಮನೆಯಿಂದ ಹೊರ ಬರಲು ಸಾಧ್ಯವಾಗದ ಸ್ಥಿತಿಯೂ ಕೆಲವೆಡೆ ಇದೆ. ಮಕ್ಕಳು, ವಯಸ್ಸಾದವರಿಗೆ ಇದರಿಂದ ಭಾರಿ ಸಮಸ್ಯೆಯಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ಬೀದಿನಾಯಿಗಳ ಉಪಟಳಕ್ಕೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications